ಕನ್ನಡಪ್ರಭ ವಾರ್ತೆ, ತುಮಕೂರುಕಳೆದ 3-4 ತಿಂಗಳಿನಿಂದ ಎಂದೂ ಕಂಡರಿಯದ ಬಿರು ಬೇಸಿಗೆಯ ಬಿಸಿಲಿನ ಝಳಕ್ಕೆ ತತ್ತರಿಸಿ ಬಸವಳಿದಿದ್ದ ರೈತರು, ಜನಸಾಮಾನ್ಯರಿಗೆ ಕಳೆದ ನಾಲ್ಕೈದು ದಿನಗಳಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆರ್ಭಟಿಸುತ್ತಿರುವ ಮಳೆಗೆ ರಸ್ತೆಗಳು, ಹಳ್ಳ-ಕೊಳ್ಳಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ತುಮಕೂರಿನಲ್ಲಿ ವರುಣಾರ್ಭಟ ಬಲು ಜೋರಾಗಿದ್ದು, ಡಾಂಬರು ರಸ್ತೆ, ಕಾಂಕ್ರೀಟ್ ರಸ್ತೆಗಳು, ಚರಂಡಿಗಳಲ್ಲಿ ಮಳೆ ನೀರು ತುಂಬಿ ನದಿಯಂತೆ ಹರಿದಿವೆ. ಕಚೇರಿಗಳಿಂದ ಕೆಲಸ ಮುಗಿಸಿಕೊಂಡು ಮನೆಗಳಿಗೆ ತೆರಳುವ ನೌಕರರು, ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ರಸ್ತೆಗಳಲ್ಲಿ ಸಂಚರಿಸಲಾಗದೆ ಪರದಾಡುವಂತಾಗುತ್ತಿದೆ. ಕಳೆದ 7-8 ತಿಂಗಳಿನಿಂದ ಮಳೆ ಇಲ್ಲದೆ ಬಸವಳಿದು ಕಂಗಾಲಾಗಿದ್ದ ಜನಸಾಮಾನ್ಯರಿಗೆ ಬಿಸಿಲಿನ ಬೇಗೆಯನ್ನು ಮರೆಸುವಷ್ಟರ ಮಟ್ಟಿಗೆ ವರುಣ ಆರ್ಭಟಿಸುತ್ತಿದ್ದಾನೆ. ಇದರಿಂದ ತಗ್ಗುಪ್ರದೇಶಗಳು, ರಸ್ತೆಗಳೆಲ್ಲಾ ಜಲಾವೃತಗೊಂಡು ನದಿಯಂತೆ ಮಳೆ ನೀರು ಹರಿದಿದೆ. ನಗರದ ಬಿ.ಎಚ್. ರಸ್ತೆ, ಆರ್.ಟಿ. ನಗರ, ಕೋತಿತೋಪು ರಸ್ತೆ, ಕುಣಿಗಲ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳು ಮಳೆ ನೀರಿನಿಂದ ಜಲಾವೃತಗೊಂಡು ಕಾರು, ಬೈಕ್ ಸವಾರರು ಸಂಚರಿಸಲಾಗದೆ ಪರದಾಡುವಂತಾಗಿತ್ತು.
ನಿತ್ಯ ಸುರಿಯುತ್ತಿರುವ ಮಳೆ ತುಮಕೂರು ನಗರ ಮಾತ್ರವಲ್ಲದೆ, ಗುಬ್ಬಿ, ತುರುವೇಕೆರೆ, ತಿಪಟೂರು, ಶಿರಾ, ಕೊರಟಗೆರೆ ಸೇರಿದಂತೆ ಜಿಲ್ಲೆಯಾದ್ಯಂತ ತನ್ನ ಆರ್ಭಟವನ್ನು ಮುಂದುವರೆಸಿದೆ. ಭಾರಿ ಮಳೆಗೆ ನಗರದ 18ನೇ ವಾರ್ಡ್‌ನ ದೊಡ್ಡಕೆರೆ ಅಂಗಳದ ಬಳಿ ಚರಂಡಿಯಲ್ಲಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಆಕಳ ಕರುವನ್ನು ಸ್ಥಳೀಯ ಯುವಕರು ರಕ್ಷಿಸಿ, ಚರಂಡಿಯಿಂದ ಹೊರ ತೆಗೆದಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಎಲ್ಲಿ ಎಷ್ಟು ಪ್ರಮಾಣದ ಮಳೆ: ತುಮಕೂರು ತಾಲೂಕಿನ ಬೆಳ್ಳಾವಿಯಲ್ಲಿ ಅತೀ ಹೆಚ್ಚು 84.8 ಮಿಮೀ, ತುಮಕೂರು 33.2 ಮಿ.ಮೀ., ಹೆಬ್ಬೂರು 9.6 ಮಿ.ಮೀ., ಊರ್ಡಿಗೆರೆ 5.1 ಮಿ.ಮೀ., ಹಿರೇಹಳ್ಳಿ 7.4 ಮಿ.ಮೀ. ಹಾಗೂ ನೆಲಹಾಳ್‌ನಲ್ಲಿ 30 ಮಿಮೀ ಮಳೆಯಾಗಿದೆ. ಕೊರಟಗೆರೆ 18, ತುಂಬಾಡಿ 7.5, ಹೊಳವನಹಳ್ಳಿ 26.2, ಮಾವತ್ತೂರು 11.4, ಇರಕಸಂದ್ರ ಕಾಲೋನಿ 19.8, ಕೊಳಾಲ 4, ತೋವಿನಕೆರೆ 23.4 ಮಿಮೀ ಮಳೆಯಾಗಿದೆ.ಮನೆ, ಅಂಗಡಿಗೆ ನೀರು ನುಗ್ಗಿ ಹಾನಿ: ಶಿರಾ ತಾಲೂಕಿನಾದ್ಯಂತ ಭಾರಿ ಮಳೆ ಸುರಿದಿದ್ದು, ವಿವಿಧೆಡೆ ಮನೆ, ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಗರದ ಹೊಸ ಬಸ್ ನಿಲ್ದಾಣದ ರಸ್ತೆ, ಬಾಲಾಜಿ ನಗರ ವೃತ್ತ ಸೇರಿದಂತೆ ವಿವಿಧ ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸುರಿದ ಧಾರಾಕಾರ ಮಳೆಗೆ ಇಲ್ಲಿನ ಅಂಗಡಿ-ಮುಂಗಟ್ಟುಗಳಿಗೂ ನೀರು ನುಗ್ಗಿ ಹಾನಿ ಸಂಭವಿಸಿದೆ. ಚರಂಡಿಗಳಲ್ಲಿ ಮಳೆ ನೀರು ಸುಗಮವಾಗಿ ಹರಿದು ಹೋಗದ ಕಾರಣ ರಸ್ತೆಗಳೆಲ್ಲಾ ಜಲಾವೃತವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.