ಬಿತ್ತನೆಗೆ ಮುನ್ನ ಬೀಜೋಪಚಾರ, ಬೀಜಾಮೃತ ಬಳಕೆ ಮುಖ್ಯ

KannadaprabhaNewsNetwork |  
Published : May 22, 2024, 12:58 AM IST
(-ಸಾಂದರ್ಭಿಕ ಚಿತ್ರಗಳು) | Kannada Prabha

ಸಾರಾಂಶ

ಮುಂಗಾರು ಹಂಗಾಮು ಜಿಲ್ಲಾದ್ಯಂತ ಚುರುಕುಗೊಂಡ ಬೆನ್ನಲ್ಲೇ ರೈತರು ವಿವಿಧ ಬೆಳೆಗಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕ ಇಳುವರಿಗೆ ಉತ್ತಮ ಬಿತ್ತನೆ ಬೀಜದ ಕೊಡುಗೆ ಅಪಾರ ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ ಚಿತ್ತಾಲ್ ತಿಳಿಸಿದ್ದಾರೆ.

- ಜಿಲ್ಲಾದ್ಯಂತ ಮುಂಗಾರು ಹಂಗಾಮು ಚುರುಕು ಹಿನ್ನೆಲೆ ರೈತರಿಗೆ ಕೃಷಿ ಇಲಾಖೆ ಸಲಹೆ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಮುಂಗಾರು ಹಂಗಾಮು ಜಿಲ್ಲಾದ್ಯಂತ ಚುರುಕುಗೊಂಡ ಬೆನ್ನಲ್ಲೇ ರೈತರು ವಿವಿಧ ಬೆಳೆಗಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕ ಇಳುವರಿಗೆ ಉತ್ತಮ ಬಿತ್ತನೆ ಬೀಜದ ಕೊಡುಗೆ ಅಪಾರ ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ ಚಿತ್ತಾಲ್ ತಿಳಿಸಿದ್ದಾರೆ.

"ಬೆಳೆಯುವ ಸಿರಿ ಮೊಳಕೆಯಲ್ಲಿ " ಎಂಬಂತೆ ಉತ್ತಮ ಇಳುವರಿ ಪಡೆಯಲು ಆರೋಗ್ಯವಾದ ಸಸಿಗಳ ಪಾತ್ರ ಪ್ರಮುಖವಾಗಿದೆ. ಮಣ್ಣಿನಿಂದ, ಬೀಜದಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸಾರಜನಕ ಮತ್ತು ರಂಜಕ ಪೋಷಕಾಂಶಗಳ ಲಭ್ಯತೆ ಹೆಚ್ಚಿಸಲು ಬೀಜೋಪಚಾರ ಅವಶ್ಯಕ ಎಂದಿದ್ದಾರೆ.

ಮುಸುಕಿನ ಜೋಳ, ಶೇಂಗಾ, ತೊಗರಿ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾಗಿವೆ. ಬಿತ್ತನೆ ಕೈಗೊಳ್ಳುವ ಮುನ್ನ ರೈತರು ಕೆಲ ತಾಂತ್ರಿಕತೆ ಅನುಸರಿಸಬೇಕು. ಬೀಜೋಪಚಾರದ ಬಗ್ಗೆ ಇಲಾಖೆ ಸಲಹೆ ಪಾಲಿಸಬೇಕು. ಮುಸುಕಿನ ಜೋಳದ ಬೆಳೆಯಲ್ಲಿ ಎಕರೆರೆ ಬೇಕಾಗುವ ಬಿತ್ತನೆ ಬೀಜಕ್ಕೆ 200 ಗ್ರಾಂ ಅಝೋ ಸ್ರೈರಿಲಂ ಮತ್ತು 200 ಗ್ರಾಂ ರಂಜಕ ಕರಗಿಸುವ ಜೀವಾಣು ಗೊಬ್ಬರದೊಂದಿಗೆ ಬೀಜೋಪಚಾರ ಮಾಡಬೇಕು ಎಂದು ತಿಳಿಸಿದ್ದಾರೆ.

ಬೂದು ರೋಗ ಅಥವಾ ಕೇದಿಗೆ ರೋಗ ಕಂಡುಬರುವ ಪ್ರದೇಶದಲ್ಲಿ ಮೆಟಲಾಕ್ಸಿಲ್+ ಮ್ಯಾಂಕೋಜೆಬ್ ಮಿಶ್ರಣ 3 ಗ್ರಾಂನಂತೆ ಪ್ರತಿ ಕಿ.ಗ್ರಾಂ. ಬೀಜಕ್ಕೆ ಬೆರೆಸಿ ಬೀಜೋಪಚಾರ ಮಾಡಬೇಕು. ಕಾಂಡಕೊರಕ ಅಥವಾ ಫಾಲ್ ಆರ್ಮಿ ವರ್ಮ ಬಾಧೆ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ 10 ಮಿ.ಲೀ. ಕ್ಲೊರೋಫೈರಿಫಾಸ್ 20 ಇಸಿ ಅಥವಾ ಥಯೋಮಿತಾಕ್ಸೋಮ್ 25% ಡಬ್ಲ್ಯುಪಿ 4 ಗ್ರಾಂ ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ ಹಾನಿ ಆಗದಂತೆ ಲೇಪಿಸಿ ಬಿತ್ತನೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

- - -

ಬಾಕ್ಸ್‌ * ಬಿತ್ತನೆಗೆ ಮೊದಲು ನೆಲಗಡಲೆ ಒಣಗಿಸಬೇಕು

ನೆಲಗಡಲೆ ಬಿತ್ತನೆ ಮಾಡುವ ಮೊದಲು ಪ್ರತಿ ಕಿ.ಗ್ರಾಂ. ನೆಲಗಡಲೆ ಬೀಜಕ್ಕೆ 5 ಗ್ರಾಪಂ ಟೈಕೋಡರ್ಮ ವಿರಿಡೆ ಅಥವಾ 2.5 ಗ್ರಾಂ ಥೈರಾಮನ್ನು ಬೆರೆಸಿ, ನೆರಳಿನಲ್ಲಿ ಒಣಗಿಸಬೇಕು. ನಂತರ 1 ಎಕರೆ ಬಿತ್ತನೆ ಬೀಜಕ್ಕೆ 150 ಗ್ರಾಂ ರೈಜೋಬಿಯಂ ಮತ್ತು 400 ಗ್ರಾಂ ಪಿಎಸ್‌ಬಿ ಜೈವಿಕ ಗೊಬ್ಬರ ಅಂಟು ದ್ರಾವಣ ಬಳಸಿ ಉಪಚರಿಸಿ ಬಿತ್ತನೆಗೆ ಬಳಸಬೇಕು.

ಗೊಣ್ಣೆ ಹುಳುವಿನ ಬಾಧೆ ಇದ್ದಲ್ಲಿ ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 10 ಮಿ.ಲೀ ಕ್ಲೊರೋಫೈರಿಫಾಸ್ 20 ಇಸಿಯನ್ನು ಬೀಜಕ್ಕೆ ಹಾನಿ ಆಗದಂತೆ ಲೇಪಿಸಿ ಬಿತ್ತನೆ ಮಾಡಬೇಕು. ಕತ್ತು ಕೊಳೆ ರೋಗದ ನಿರ್ವಹಣೆಗೆ ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ 2 ಗ್ರಾಂ ಕಾರ್ಬೆಂಡಜಿಂ ಅಥವಾ ಕ್ಯಾಪ್ಟಾನನ್ನು ಬೀಜೋಪಚಾರ ಮಾಡಿ ಬಿತ್ತುವಂತೆ ಶ್ರೀನಿವಾಸ ಚಿತ್ತಾಲ್‌ ತಿಳಿಸಿದ್ದಾರೆ.

- - -

ಬಾಕ್ಸ್‌ * ರಾಗಿ ಬಿತ್ತನೆ- ಉಪಚಾರ ಹೇಗೆ?

ರಾಗಿ ಬಿತ್ತನೆ ಮಾಡುವ ರೈತರು ಬೆಂಕಿ ರೋಗ/ಇಳುಕು ರೋಗ ಮತ್ತು ಕಂದುಚುಕ್ಕೆ ರೋಗದ ಹತೋಟಿಗೆ ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ 2 ಗ್ರಾಂ. ಕಾರ್ಬೆಂಡಜಿಂನಿಂದ ಉಪಚಾರ ಮಾಡಿ ಬಿತ್ತನೆ ಮಾಡಬೇಕು. ಬೀಜೋಪಚಾರ ಮಾಡುವಾಗ ಮೊದಲು ಶೀಲಿಂಧ್ರ ನಾಶಕ, ನಂತರ ಕೀಟನಾಶಕ ಕೊನೆಯಲ್ಲಿ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಬೇಕು.

- - -

ಬಾಕ್ಸ್‌

* ದ್ವಿದಳ ಧಾನ್ಯಗಳ ಬೆಳೆಗಳು ತೊಗರಿ, ಹೆಸರು, ಉದ್ದು, ಅವರೆ ಇತರೆ ದ್ವಿದಳ ಧಾನ್ಯಗಳನ್ನು ಬಿತ್ತುವ ಮೊದಲು 200 ಗ್ರಾಂ ರೈಜೋಬಿಯಂ ಮತ್ತು 200 ಗ್ರಾಂ ರಂಜಕ ಕರಗಿಸುವ ಜೀವಾಣು ಗೊಬ್ಬರದೊಂದಿಗೆ ಬೀಜಪೋಚಾರ ಮಾಡಬೇಕು. ತೊಗರಿ ಬೆಳೆಯಲ್ಲಿ ಸೊರಗು ರೋಗದ ಹತೋಟಿಗೆ ಪ್ರತಿ ಕಿ.ಗ್ರಾಂ. ಬಿತ್ತನೆ ಬೀಜಕ್ಕೆ 5 ಗ್ರಾಂ ಟ್ರೈಕೋಡರ್ಮ ವಿರಿಡೆ ಅಥವಾ 2 ಗ್ರಾಂ ಕಾರ್ಬೆಂಡಜಿಂ ಅನ್ನು ಬೀಜೋಪಚಾರ ಮಾಡಿ ಬಿತ್ತುವುದು. ಸಾವಯವ/ ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ಕೃಷಿಕರು ಬೀಜಾಮೃತ ತಯಾರಿಸಿಕೊಂಡು ಬೀಜೋಪಚಾರ ಮಾಡಬಹುದು.

- - -

* ಬಾಕ್ಸ್‌

ಬೀಜಾಮೃತ ತಯಾರಿಕೆಗೆ ಅಗತ್ಯ ಸಾಮಗ್ರಿ 20 ಲೀ. ನೀರು, 5 ಕೆ.ಜಿ. ದೇಸಿ ಹಸುವಿನ ಸಗಣಿ, 5 ಲೀಟರ್ ದೇಸಿ ಹಸುವಿನ ಗಂಜಲ, 50 ಗ್ರಾಂ ಸುಣ್ಣ, ಒಂದು ಬೊಗಸೆ ಜಮೀನಿನ ಫಲವತ್ತಾದ ಮಣ್ಣು ಸಂಗ್ರಹಿಸಬೇಕು. ಬಿತ್ತನೆ ಹಿಂದಿನ ದಿನ ತೆಳುವಾದ ಹತ್ತಿ ಬಟ್ಟೆಯಲ್ಲಿ 5 ಕೆ.ಜಿ. ಸಗಣಿ ಕಟ್ಟಿ, 20 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್/ ಡ್ರಮ್‌ನಲ್ಲಿ ತೂಗುಬಿಡಬೇಕು.

1 ಲೀಟರ್‌ ನೀರಿನಲ್ಲಿ 50 ಗ್ರಾಂ ಸುಣ್ಣವನ್ನು ಪ್ರತ್ಯೇಕವಾಗಿ ಬೆರೆಸಿ, ತಿಳಿಯಾಗಲು ಬಿಡಬೇಕು. ಬಿತ್ತನೆ ಮಾಡುವ ದಿನ ಇಳಿಬಿಟ್ಟಿರುವ ಸಗಣಿ ಗಂಟನ್ನು ಚೆನ್ನಾಗಿ ಕಲುಕಿಸಿ, ಐದಾರು ಬಾರಿ ಹಿಂಡಿ ತೆಗೆಯಬೇಕು. ಸುಣ್ಣದ ತಿಳಿ, ಗಂಜಲ ಹಾಗೂ ಮಣ್ಣನ್ನು ಸಗಣಿ ತಿಳಿಗೆ ಹಾಕಿ, ಚೆನ್ನಾಗಿ ಕಲೆಸಬೇಕು. ಅನಂತರ ಬೀಜಗಳನ್ನು 1 ನಿಮಿಷ ಮಾತ್ರ ಬೀಜಾಮೃತದಲ್ಲಿ ಮುಳುಗಿಸಿ ತೆಗೆಯಬೇಕು. ನೆರಳಿನಲ್ಲಿ ಒಣಗಿಸಿ ತೇವ ಆರಿದ ನಂತರ ಬಿತ್ತನೆ ಮಾಡಬೇಕು.

- - - (-ಸಾಂದರ್ಭಿಕ ಚಿತ್ರಗಳು)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ