ಶಿಕ್ಷಕರು, ಪದವೀಧರರ ಸಮಸ್ಯೆಗಳ ಬಗೆಹರಿಸುವೆ

KannadaprabhaNewsNetwork | Published : May 22, 2024 12:57 AM

ಸಾರಾಂಶ

ರಾಮನಗರ: ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ವಿಧಾನ ಪರಿಷತ್ತು ಸದಸ್ಯ ಪುಟ್ಟಣ್ಣ ಅವರೊಂದಿಗೆ ಪದವೀಧರರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.

ರಾಮನಗರ: ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ವಿಧಾನ ಪರಿಷತ್ತು ಸದಸ್ಯ ಪುಟ್ಟಣ್ಣ ಅವರೊಂದಿಗೆ ಪದವೀಧರರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.

ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಮತಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮೋಜಿಗೌಡ, ನಾನು ಸಹ ಶಿಕ್ಷಕನಾಗಿ ವೃತ್ತಿ ಆರಂಭಿಸಿ, ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳಿಗೆ ಹಲವು ಹೋರಾಟ ನಡೆಸುತ್ತಾ ಬಂದಿದ್ದೇನೆ. ಚುನಾವಣೆಯಲ್ಲಿ ಮೂರು ಬಾರಿ ಸೋತಿದ್ದೇನೆ. ಈಗ ಕಾಂಗ್ರೆಸ್ ನಾಯಕರು ಹಾಗೂ ಪುಟ್ಟಣ್ಣರವರು ಜೊತೆಯಲ್ಲಿರುವುದು ನನಗೆ ಆನೆ ಬಲ ಬಂದಂತಾಗಿದೆ ಎಂದರು.

ಈ ಕ್ಷೇತ್ರ 36 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಎಲ್ಲೆಡೆ ಶಿಕ್ಷಕರು ಮತ್ತು ಪದವೀಧರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಬಾರಿ ವಿಶೇಷವಾಗಿ ಮತದಾರರು ಮತ ಚಲಾಯಿಸುವ ಸಮಯದಲ್ಲಿ ಸರಿಯಾದ ಕ್ರಮದಲ್ಲಿ ಮತ ಹಾಕುವಂತೆ ಮನವಿ ಮಾಡಲಾಗುತ್ತಿದೆ. ಕಳೆದ ಅವಧಿಯ ಚುನಾವಣೆಯಲ್ಲಿ 4 ಸಾವಿರಕ್ಕೂ ಹೆಚ್ಚು ಮತಗಳು ಅಸಿಂಧುಗೊಂಡಿದ್ದವು. ಹಾಗಾಗಿ ಈ ಬಾರಿ ಅಂತಹ ವಾತಾವರಣ ಸೃಷ್ಟಿಸದೆ ಕ್ರಮಬದ್ಧವಾಗಿ ಮತದಾನ ಮಾಡುವಂತೆ ಮನವಿ ಮಾಡಲಾಗುತ್ತಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಮಾತನಾಡಿ, ಈ ಕ್ಷೇತ್ರದಿಂದ ಆಯ್ಕೆಯಾದವರು ಶಿಕ್ಷಕರು ಮತ್ತು ಪದವೀಧರರ ಸಮಸ್ಯೆ ಅರಿತು ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಶೈಕ್ಷಣಿಕ ಮತ್ತು ಪದವೀಧರರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ರಾಜ್ಯದಲ್ಲಿ ಎಂಎಲ್‌ಸಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ತೋರಿಸಿದ್ದೇನೆ. ರಾಮೋಜಿಗೌಡರು ಎರಡು ಬಾರಿ ಸೋತಿದ್ದರೂ ಪ್ರಾಮಾಣಿಕವಾಗಿ ಹಗಲಿರುಳು ಈ ಕ್ಷೇತ್ರದಲ್ಲಿ ಹೋರಾಟ ಮಾಡುತ್ತಿದ್ದಾರೆ. ಅಂತಹ ಪ್ರಾಮಾಣಿಕ ವ್ಯಕ್ತಿಯನ್ನು ನೀವೆಲ್ಲರೂ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಆರ್.ಕೆ.ಬೈರಲಿಂಗಯ್ಯ, ಶಾಂತಿನಿಕೇತನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಸೌಮ್ಯಕುಮಾರಸ್ವಾಮಿ, ಶಿಕ್ಷಕ ನಾರಾಯಣ್ ಇತರರು ಹಾಜರಿದ್ದರು.

ಕೋಟ್ .......

ವಿವಿಧ ಖಾಸಗಿ ಕಂಪನಿಗಳಲ್ಲಿ 9 ಸಾವಿರ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಕೊಡಿಸಿದ್ದೇನೆ. ಮುಂದೆಯೂ ನಾನು ಮತ್ತು ಪುಟ್ಟಣ್ಣ ಸೇರಿ ರಾಮನಗರದಲ್ಲಿಯೇ ಬೃಹತ್ ಉದ್ಯೋಗ ಮೇಳ ಆಯೋಜಿಸಿ ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುತ್ತೇವೆ. ಶಿಕ್ಷಕರು, ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ.

- ರಾಮೋಜಿಗೌಡ, ಕಾಂಗ್ರೆಸ್ ಅಭ್ಯರ್ಥಿ, ಬೆಂಗಳೂರು ಪದವೀಧರ ಕ್ಷೇತ್ರ21ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರು ಪದವೀಧರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಮತಯಾಚನೆ ಮಾಡಿದರು.

Share this article