ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಬೆಳ್ತಂಗಡಿ ತಾಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತುತ್ತತುದಿ ಭಾಗವಾದ ಮಲವಂತಿಗೆ ಗ್ರಾಮದ ಎಳನೀರಿನಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ‘ಸಾಹಿತ್ಯ ಮತ್ತು ಬದುಕು‘ ವಿಷಯದ ಕುರಿತು ಶನಿವಾರ ಕಾರ್ಯಕ್ರಮ ನಡೆಯಿತು.
ಎಳನೀರಿನ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ಮೊದಲ ಬಾರಿಗೆ ನಡೆಯಿತು. ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಾಹಿತ್ಯ, ಸಂಗೀತ, ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಸಾಹಿತ್ಯವು ನಮ್ಮ ಬದುಕನ್ನು ಶ್ರೀಮಂತಗೊಳಿಸುತ್ತದೆ. ಪತ್ರಿಕೆ ಹಾಗೂ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸಾತ್ವಿಕ ಪರಿಸರ ನಿರ್ಮಾಣವಾಗಲು ಸಾಧ್ಯ. ಎಳನೀರಿನಂತಹ ತೀರಾ ಹಿಂದುಳಿದ ಹಾಗೂ ಸುಂದರ ಪರಿಸರದಲ್ಲಿ ಇನ್ನಷ್ಟು ಹೆಚ್ಚಿನ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮುನಿರಾಜ ರೆಂಜಾಳ ಸಾಹಿತ್ಯಕ್ಕಾಗಿ ಬದುಕು ಸಮರ್ಪಿಸಿಕೊಂಡವರ ನೆನಪು ಶಾಶ್ವತವಾಗಿರುತ್ತದೆ. ಸಂವಿಧಾನ, ವೇದ, ಉಪನಿಷತ್, ಕುರಾನ್, ಬೈಬಲ್‌ನಂತಹ ಪುಸ್ತಕಗಳು ಜಗತ್ತನ್ನು ಆಳುತ್ತವೆ ಹಾಗೂ ಸಮಾಜದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತವೆ. ಸಾಹಿತ್ಯಕ್ಕೆ ಬದುಕನ್ನು ಹಗುರಗೊಳಿಸುವ ಶಕ್ತಿ ಇದೆ. ಜಾನಪದ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯ ಕಾಲಕಾಲಕ್ಕೆ ಬದುಕಿನ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಮಾತನಾಡಿ ಸಾಹಿತ್ಯ ನಿಂತ ನೀರಾಗದೆ ಎಲ್ಲ ಕಡೆ ಪಸರಿಸಿ ಎಲ್ಲರನ್ನು ತಲುಪಬೇಕು. ಇದಕ್ಕಾಗಿ ಸಾಹಿತ್ಯ ಪರಿಷತ್ ಕೆಲಸ ಮಾಡುತ್ತಿದ್ದು ಜಿಲ್ಲೆಯ ಹಿಂದುಳಿದ ಪ್ರದೇಶಗಳಲ್ಲೂ ಇರುವ ಎಲೆಮರೆಯ ಕಾಯಿಗಳನ್ನು ಗುರುತಿಸಿ ಅವರನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು . ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಾಧವ ಎಂ.ಕೆ. ಮಾತನಾಡಿದರು. ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ಉಪನ್ಯಾಸಕ ದಿವ ಕೊಕ್ಕಡ ಉಪಸ್ಥಿತರಿದ್ದರು. ಸಾಹಿತ್ಯ ಸೇವೆಗೈದ ಸಾಹಿತಿ ವೈ. ಪ್ರೇಮಕುಮಾರ್ ಎಳನೀರು ಹಾಗೂ ಸಮಾಜಸೇವಕ ಕೇಶವ ಫಡಕೆ ದಿಡುಪೆ ಅವರನ್ನು ಸನ್ಮಾನಿಸಲಾಯಿತು.
ಮಲವಂತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಜೈನ್ ಸ್ವಾಗತಿಸಿದರು. ತಾಲೂಕು ಘಟಕದ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಅರ್ಚಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.