ಕನ್ನಡಪ್ರಭ ವಾರ್ತೆ ಬಂಟ್ವಾಳ
ಬಂಟ್ವಾಳ ಪುರಸಭಾಧ್ಯಕ್ಷ ಬಿ. ವಾಸು ಪೂಜಾರಿ ಆಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸರಬರಾಜು ವಿಷಯದ ಕುರಿತು ವಿಶೇಷ ಸಭೆಯು ಗುರುವಾರ ನಡೆಯಿತು.ಪೈಪ್ ಒಡೆದು ಪೋಲಾಗುತ್ತಿರುವುದರಿಂದ ಜನರಿಗೆ ಸರಿಯಾದ ಸಮಯದಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಆದರೆ ಈ ವಿಚಾರವಾಗಿ, ಇಲಾಖೆ ಹಾಗೂ ಗುತ್ತಿಗೆದಾರರು ಸ್ಪಂದನೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂತು.
ಕಾಮಗಾರಿಯ ವೇಳೆ ಹಾಗೂ ಬಳಿಕ ನಡೆಯುವ ಸಮಸ್ಯೆಗಳಿಗೆ ಸೂಕ್ತವಾದ ರೀತಿಯಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಜವಬ್ದಾರಿ ನಮ್ಮದು ಎಂದು ಒಳಚರಂಡಿ ಇಲಾಖೆಯ ಎ.ಇ.ಇ. ಅಜಯ್ ಆರ್.ವಿ. ತಿಳಿಸಿದರು.2019ರ ಮೊದಲ ಯೋಜನೆಯಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ಜನವರಿ 31ರ ಒಳಗೆ ದೂರನ್ನು ನೀಡಿದರೆ ಸೂಕ್ತವಾದ ಕ್ರಮಕೈಗೊಳ್ಳಲು ಸಾಧ್ಯ. ಬಳಿಕ ಬಂದ ದೂರುಗಳನ್ನು ಸ್ವೀಕರಿಸಲು ಇಲಾಖೆಯಿಂದ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪುರಸಭಾ ಸದಸ್ಯರ ವಾರ್ಡ್ ಗಳಲ್ಲಿರುವ ಸಮಸ್ಯೆಗಳನ್ನು ಪುರಸಭೆ ಮೂಲಕ ನಮ್ಮ ಇಲಾಖೆಗೆ ಕಳುಹಿಸಿಕೊಡಿ, ಎಲ್ಲವನ್ನು ಪರಿಶೀಲಿಸಿ ಹಂತಹಂತವಾಗಿ ಬಗೆಹರಿಸುತ್ತೇವೆ ಎಂದರು.
ಸಹಾಯಕ ಎಂಜಿನಿಯರ್ ಶೋಭಾಲಕ್ಷ್ಮೀ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ಕಂಪನಿಯವರು ಬೇಕಾಬಿಟ್ಟಿ ಕುಡಿಯುವ ನೀರಿನ ಪೈಪ್ ಲೈನ್ ಗಳನ್ನು ತುಂಡು ಮಾಡಿ ಸಮಸ್ಯೆ ಉಂಟು ಮಾಡಿದ್ದಾರೆ . ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಜಮೀನಿನ ಸಮಸ್ಯೆ ಕಂಡು ಬಂದ ಕಡೆಗಳಲ್ಲಿ ನೀರಿನ ಪೈಪ್ ಗಳನ್ನು ತುಂಡು ಮಾಡಿ ಎಂಡ್ ಕ್ಯಾಪ್ ಹಾಕಿದ್ದಾಗಿ ಹೇಳಿದರು. ಅಮೃತ್ ಯೋಜನೆಯ ಕಾಮಗಾರಿ ಇನ್ನು ಕೂಡ ಮುಗಿದಿಲ್ಲ, ಹೀಗಾಗಿ ಕಾಮಗಾರಿ ಮುಗಿಯುವ ಸಂದರ್ಭದಲ್ಲಿ ಟೆಂಡರ್ ನಲ್ಲಿ ಹೇಳಲಾಗಿರುವ ಸೂಚನೆಯಂತೆ ಎಲ್ಲವನ್ನು ಮುಗಿಸುತ್ತೇವೆ ಎಂದವರು ಸ್ಪಷ್ಟನೆ ನೀಡಿದರು. ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಆಗಿರುವ ಸಮಸ್ಯೆಗಳ ಪರಿಹಾರವನ್ನು ಎರಡು ವಾರದೊಳಗೆ ಕೈಗೊಳ್ಳುವುದಾಗಿ ತಿಳಿಸಿದರು.ಪ್ರತಿಭಟನೆ ನಡೆಸಲು ಸಿದ್ಧ: ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಹೇಳಿಕೊಂಡ ಸದಸ್ಯರು ನೀರು ಪೂರೈಕೆ ಕುರಿತು ಜನರು ನಮ್ಮನ್ನು ಕೇಳುತ್ತಿದ್ದಾರೆ. ನಾವು ಯಾರನ್ನು ಸಂಪರ್ಕಿಸಬೇಕು ಎಂದು ಪ್ರಶ್ನಿಸಿದರು. ಪಾಣೆಮಂಗಳೂರು ಭಾಗದ ವಾರ್ಡ್‌ಗಳಲ್ಲಿ ಸಮಸ್ಯೆ ತೀವ್ರವಾಗಿದೆ ಎಂದು ಹೇಳಿದ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ, ಈ ಕುರಿತು ಪ್ರತಿಭಟನೆ ನಡೆಸಲು ನಾವು ಸಿದ್ಧರಿದ್ದೇವೆ. ಕಾಟಾಚಾರಕ್ಕೆ ಈ ಸಭೆ ನಡೆಸುವ ಬದಲು ಪರಿಹಾರ ನೀಡಿ ಎಂದರು.ಈ ಸಂದರ್ಭದಲ್ಲಿ ಮಾಜಿ ಉಪಾಧ್ಯಕ್ಷೆ ಹಾಗೂ ಸದಸ್ಯೆ ಜೆಸಿಂತಾ ಡಿಸೋಜ ಮಾತನಾಡಿ, ಪೈಲ್‌ಲೈನ್‌ಗಳು ಹಾನಿಯಾಗಿರುವ ಕುರಿತು ಗಮನ ಸೆಳೆದರು. ಸದಸ್ಯೆ ಗಾಯತ್ರಿ ಪ್ರಕಾಶ್ ಅವರೂ ಈ ಕುರಿತು ದನಿಗೂಡಿಸಿದರು.
ರಸ್ತೆಯ ಮೇಲೆಯೇ ನೀರಿನ ಪೈಪ್: ದಿನದ 24 ಗಂಟೆ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವುದಾಗಿ ಹೇಳಿಕೊಂಡು ಈಗ ಒಂದು ಗಂಟೆಯೂ ನೀರು ಬರುತ್ತಿಲ್ಲ. ರಸ್ತೆಯ ಮೇಲೆಲ್ಲಾ ಪೈಪುಗಳು ಕಾಣಿಸಿಕೊಂಡಿದ್ದು, ಇಂಥ ಯೋಜನೆ ನಮಗೆ ಬೇಕಿತ್ತಾ ಎಂದು ಹಿರಿಯ ಸದಸ್ಯ ಎ. ಗೋವಿಂದ ಪ್ರಭು ಪ್ರಶ್ನಿಸಿದರು. ಉಪಾಧ್ಯಕ್ಷ ಮೊನೀಶ್ ಆಲಿ, ಸದಸ್ಯರಾದ ಹರಿಪ್ರಸಾದ್, ಝೀನತ್ ಫಿರೋಜ್, ಮೀನಾಕ್ಷಿ ಗೌಡ, ಇದ್ರೀಸ್ ಹಲವು ವಿಷಯಗಳ ಕುರಿತು ಗಮನ ಸೆಳೆದರು. ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಪುರಸಭೆ ಪರವಾಗಿ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಉಪಸ್ಥಿತರಿದ್ದರು.