ಇನ್ನಂಜೆ ಹೊಳೆಬದಿಗೆ ತ್ಯಾಜ್ಯ ಸುರಿದ ವ್ಯಕ್ತಿಯಿಂದಲೇ ಅದನ್ನು ಹೆಕ್ಕಿಸಿದ ಗ್ರಾಪಂ !

KannadaprabhaNewsNetwork | Published : Dec 13, 2024 12:47 AM

ಸಾರಾಂಶ

ಮನೆಯ ತ್ಯಾಜ್ಯವನ್ನು ವಾಹನದಲ್ಲಿ ತಂದು ಹೊಳೆಬದಿಗೆ ಸುರಿದ ಬೇಜವಾಬ್ದಾರಿ ವ್ಯಕ್ತಿಯಿಂದಲೇ ಅದನ್ನು ಹೆಕ್ಕಿಸಿ, ಆತನನ್ನು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವಂತೆ ಮಾಡಿ ಘಟನೆ ಇಲ್ಲಿನ ಇನ್ನಂಜೆ ಗ್ರಾಪಂನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶಿರ್ವ

ಮನೆಯ ತ್ಯಾಜ್ಯವನ್ನು ವಾಹನದಲ್ಲಿ ತಂದು ಹೊಳೆಬದಿಗೆ ಸುರಿದ ಬೇಜವಾಬ್ದಾರಿ ವ್ಯಕ್ತಿಯಿಂದಲೇ ಅದನ್ನು ಹೆಕ್ಕಿಸಿ, ಆತನನ್ನು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವಂತೆ ಮಾಡಿ ಘಟನೆ ಇಲ್ಲಿನ ಇನ್ನಂಜೆ ಗ್ರಾಪಂನಲ್ಲಿ ನಡೆದಿದೆ.ಆರೋಪಿ ವ್ಯಕ್ತಿ ತಮ್ಮ ಮನೆಯ ಕಸಮುಸುರೆಗಳನ್ನು ಬೆಳಗಿನ ಜಾವ ವಾಹನದಲ್ಲಿ ತಂದು ಇನ್ನಂಜೆಯ ಮರ್ಕೋಡಿ ಹೊಳೆ ಬದಿಗೆ ಸುರಿದು ಹೋಗುತ್ತಿದ್ದ. ಈ ಬಗ್ಗೆ ಸ್ಥಳೀಯರು ಗ್ರಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ ಗಮನಕ್ಕೆ ತಂದಿದ್ದರು. ಅವರು ಸ್ಥಳೀಯ ಗ್ರಾಪಂ ಸದಸ್ಯರೊಂದಿಗೆ ಸ್ಥಳಕ್ಕೆ ಆಗಮಿಸಿ, ಅಲ್ಲಿ ಎಸೆಯಲಾಗಿದ್ದ ತ್ಯಾಜ್ಯದಲ್ಲಿದ್ದ ಕಾಗದ, ಪಾರ್ಸೆಲ್‌ಗಳ ಮೇಲಿನ ವಿಳಾಸ ಹಾಗೂ ಮೊಬೈಲ್ ನಂಬರ್‌ಗಳನ್ನು ಗುರುತಿಸಿ ಕರೆಮಾಡಿದರು.

ಆಗ ಕಸ ಎಸೆದಾತ ಕಟಪಾಡಿ ಮೂಲದ ವ್ಯಕ್ತಿ ಎಂದು ಪತ್ತೆಯಾಗಿದ್ದು, ಕಸವನ್ನು ಎಸೆದುದನ್ನು ಒಪ್ಪದೇ ಗ್ರಾಪಂ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿಯೇ ವಾಗ್ವಾದ ನಡೆಸಿದ. ಕೊನೆಗೆ ಅಧ್ಯಕ್ಷರು ಕಾಪು ಪೋಲಿಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಆ ವ್ಯಕ್ತಿಯನ್ನು ಕರೆಸಿ ಆತ ಎಸೆದಿದ್ದ ವಸ್ತುಗಳನ್ನು ಹೆಕ್ಕಿಸಿ ಪುನಃ ಆತನ ವಾಹನಕ್ಕೆ ತುಂಬಿಸಿ, ಪೋಲಿಸ್ ಠಾಣೆಗೆ ಕರೆದೊಯ್ದ ಬುದ್ದಿ ಹೇಳಿ ಕಳುಹಿಸಿದ್ದಾರೆ.

ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಪಂ ಸದಸ್ಯರಾದ ನಿಕೇಶ್, ದ್ವಿವೇಶ್, ಸ್ಥಳೀಯ ಸಮಾಜಸೇವಕರಾದ ಉಮೇಶ್ ಅಂಚನ್, ವರುಣ್ ಶೆಟ್ಟಿ ರಮೇಶ್ ಮತ್ತಿತರರು ಇದ್ದರು.ವಿದ್ಯಾವಂತರಿಂದಲೇ ಈ ಕೃತ್ಯ !

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಪಂಚಾಯಿತಿನಿಂದಲೂ ತ್ಯಾಜ್ಯವನ್ನು ಸಂಗ್ರಹಿಸಲು ಇಲ್ಲಿನ ಪ್ರತಿಮನೆ ಬಾಗಿಲಿಗೆ ವಾಹನ ಕಳಹಿಸಲಾಗುತ್ತಿದೆ. ಆದರೂ ವಿದ್ಯಾವಂತ ನಾಗರಿಕರೇ ಮನೆಯ ಕಸವನ್ನು ತಮ್ಮ ವಾಹನಗಳಲ್ಲಿ ರಸ್ತೆಯ ಬದಿಗೆ, ನದಿಗಳಿಗೆ, ಚರಂಡಿಗಳಿಗೆ ಎಸೆಯುತ್ತಿದ್ದಾರೆ. ಮರ್ಕೋಡಿ ಹೊಳೆಗಂತೂ ಕೆಟರಿಂಗ್ ತ್ಯಾಜ್ಯ, ಮಾಂಸ ತ್ಯಾಜ್ಯ, ಕೋಳಿಗಳ ತ್ಯಾಜ್ಯಗಳನ್ನು ಎಸೆಯುವ ಘಟನೆಗಳು ನಡೆಯುತ್ತಲೇ ಇವೆ. ಅಂತಹರನ್ನು ಹುಡುಕಿ 5000 ರು. ದಂಡ ವಿಧಿಸಿ, ಅವರಿಂದಲೇ ಕಸ ವಿಲೇವಾರಿ ಮಾಡಲಾಗುತ್ತಿದೆ. ಆದರೂ ವಿದ್ಯಾವಂತರಲ್ಲಿಯೇ ಇನ್ನೂ ಜಾಗೃತಿ ಮೂಡದಿರುವುದು ಬೇಸರ ತಂದಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ ವಿಷಾದಿಸಿದ್ದಾರೆ.

Share this article