ವಾಲ್ವ್ ಗೆ ಹಾನಿ ಮಾಡಿ ಅಕ್ರಮವಾಗಿ ಅಡಿಕೆ ತೋಟಗಳಿಗೆ ನೀರು ಹಾಯಿಸುವಿಕೆಕನ್ನಡಪ್ರಭ ವಾರ್ತೆ, ಬೀರೂರು: ಕಡೂರು- ಬೀರೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಭದ್ರಾ ಕುಡಿಯುವ ನೀರು ಯೋಜನೆ ಪೈಪ್ ಲೈನ್ ಗಳಿಗೆ ವಾಲ್ವ್ ಹಾಕಿ ನೀರು ಸೋರಿಕೆಯಾಗುವಂತೆ ಮಾಡಿ, ಅದನ್ನು ಅಡಕೆ ತೋಟಗಳಿಗೆ ಅನಧಿಕೃತ ವಾಗಿ ಹಾಯಿಸಿಕೊಳ್ಳುತ್ತಿರುವವರ ವಿರುದ್ಧ ಪುರಸಭೆಯಿಂದ ಮಂಗಳವಾರ ದೂರು ನೀಡಲಾಗಿದೆ.
2-3 ದಿನಗಳಿಂದ ನೀರು ಪೂರೈಕೆಯಾಗದ ಕಾರಣ ಅನುಮಾನಗೊಂಡ ಪುರಸಭೆ ನೀರುಗಂಟಿಗಳು ಹಾಗೂ ನೌಕರರು ಪೈಪ್ ಲೈನ್ ನ ಪರಿಶೀಲನೆಗೆ ತೆರಳಿದಾಗ ತರೀಕೆರೆ ಸಮೀಪದ ಬಾವಿಕೆರೆ, ಅಜ್ಜಂಪುರ ಕ್ರಾಸ್, ಕುಡ್ಲೂರು ಸಮೀಪದ ಕೋರನಹಳ್ಳಿ, ಕೊರಟೀಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮ ನೀರು ಸಂಗ್ರಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನಿಸಿದ ಪುರಸಭೆ ಸಿಬ್ಬಂದಿ ಮೇಲೆ ಕೆಲವರು ಹಲ್ಲೆಗೆ ಮುಂದಾಗಿದ್ದಾರೆ. ಕಡೂರು ಪುರಸಭೆ ಮುಖ್ಯಾಧಿಕಾರಿ ಭಾಗ್ಯಮ್ಮ ಮತ್ತು ಬೀರೂರು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಪ್ರಕಾಶ್ ಪುರಸಭೆ ಆಡಳಿತಾಧಿಕಾರಿ ತರೀಕೆರೆ ಉಪವಿಭಾಗಾಧಿಕಾರಿ ಯನ್ನು ಸಂಪರ್ಕಿಸಿ ಪ್ರಕರಣದ ವಿವರ ನೀಡಿದ್ದು, ಕಡೂರು ಪುರಸಭೆ ಮುಖ್ಯಾಧಿಕಾರಿ, ಉಪ ವಿಭಾಗಾಧಿಕಾರಿ ನಿರ್ದೇಶನದಂತೆ ತರೀಕೆರೆ ಡಿವೈಎಸ್ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.
ಬಾಕ್ಸ್--‘ಕಾನೂನು ಕ್ರಮಕ್ಕೆ ಆಗ್ರಹ’
‘ಅವಳಿ ಪಟ್ಟಣಗಳಿಗೆ ನೀರು ಪೂರೈಸುವ ಯೋಜನೆಗೆ ಹಾನಿ ಎಸಗಿದವರ ವಿರುದ್ಧ ಎರಡೂ ಪುರಸಭೆ ಮುಖ್ಯಾಧಿಕಾರಿಗಳು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲಿದ್ದು, ಈ ರೀತಿ ಅಕ್ರಮ ನೀರು ಪೂರೈಕೆ ಮಾಡಿಕೊಳ್ಳುತ್ತಿರುವ ಸ್ಥಳಗಳನ್ನು ಗುರುತಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ’ ಎಂದು ಬೀರೂರು ಪುರಸಭೆ ಪ್ರಭಾರ ಮುಖ್ಯಾಧಿ ಕಾರಿ ಪ್ರಕಾಶ್ ಹೇಳಿದರು.‘ಈಗಾಗಲೇ 4-5 ಸ್ಥಳಗಳಲ್ಲಿ ಅಕ್ರಮ ನೀರು ಪೂರೈಕೆ ಮಾಡಿರುವುದನ್ನು ಗುರುತಿಸಿದ್ದೇವೆ. ಈ ಅಕ್ರಮ ತರೀಕೆರೆ ಪೊಲೀಸರ ವ್ಯಾಪ್ತಿಗೆ ಬರುವುದರಿಂದ ತರೀಕೆರೆ ಡಿವೈಎಸ್ಪಿ ಗಮನಕ್ಕೂ ತರಲಾಗುವುದು ಎಂದು ಪುರಸಭೆ ಎಂಜಿನಿಯರ್ ವೀಣಾ ಹೇಳಿದರು.
26 ಬೀರೂರು 1ಅಮೃತಾಪುರ ಗೇಟ್ ಬಳಿ ವಾಲ್ವ್‌ಗೆ ಹಾನಿ ಮಾಡಿ ನೀರು ಸಂಗ್ರಹವಾಗುವಂತೆ ಮಾಡಿರುವುದು
26 ಬೀರೂರು 2ನೀರನ್ನು ಅಕ್ರಮವಾಗಿ ತೋಟಗಳಿಗೆ ಹಾಯಿಸಲು ಕೋರನಹಳ್ಳಿ ಗೇಟ್ ಬಳಿ ಪಂಪ್‌ಸೆಟ್ ಅಳವಡಿಸಿರುವುದು