ಗಂಗಾವತಿಯ ಡಾಲರ್ಸ್ ಕಾಲನಿಯಲ್ಲಿ ನೀಗದ ದಾಹ

KannadaprabhaNewsNetwork | Published : Mar 4, 2025 12:32 AM

ಸಾರಾಂಶ

ಈಗಾಗಲೇ ಗಂಗಾವತಿ ನಗರದಲ್ಲಿ ನಗರಸಭೆಯಿಂದ 6ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಒಂದೇ ಒಂದು ಪ್ರಾರಂಭವಾಗಿಲ್ಲ. ಇದರಲ್ಲಿ ಒಂದಾದ ಜಯನಗರದ 3ನೇ ವಾರ್ಡಿನ ಉದ್ಯಾನವನದಲ್ಲಿ ₹ 10 ಲಕ್ಷ ವ್ಯಯಿಸಿ ಘಟಕ ಸ್ಥಾಪಿಸಲಾಗಿದೆ.

ರಾಮಮೂರ್ತಿ ನವಲಿ

ಗಂಗಾವತಿ:

ಡಾಲರ್ಸ್ ಕಾಲನಿ ಎಂದೇ ಪ್ರಖ್ಯಾತಿಯಾಗಿರುವ ಇಲ್ಲಿಯ ಜಯನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಅಧೋಗತಿಯತ್ತ ಸಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಘಟಕ ನಿರ್ಮಿಸಲಾಗಿತ್ತು. ಆದರೆ, ಪ್ರಾರಂಭದಿಂದಲೇ ಇಲ್ಲಿಯ ಜನರು ಒಂದು ಹನಿ ನೀರು ಕಾಣದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.

10 ಲಕ್ಷ ವೆಚ್ಚ:

ಈಗಾಗಲೇ ಗಂಗಾವತಿ ನಗರದಲ್ಲಿ ನಗರಸಭೆಯಿಂದ 6ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಒಂದೇ ಒಂದು ಪ್ರಾರಂಭವಾಗಿಲ್ಲ. ಇದರಲ್ಲಿ ಒಂದಾದ ಜಯನಗರದ 3ನೇ ವಾರ್ಡಿನ ಉದ್ಯಾನವನದಲ್ಲಿ ₹ 10 ಲಕ್ಷ ವ್ಯಯಿಸಿ ಘಟಕ ಸ್ಥಾಪಿಸಲಾಗಿದೆ. ಇದಕ್ಕೆ ಅಂದಿನ ಶಾಸಕ ಪರಣ್ಣ ಮುನವಳ್ಳಿ ಕೆಕೆಆರ್‌ಡಿಬಿ ಯೋಜನೆಯಲ್ಲಿ ಅನುದಾನ ನೀಡಿದ್ದರು. ಇದರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದ ಭೂ ಸೇನಾ ನಿಗಮ ಘಟಕ ಸ್ಥಾಪಿಸಿ ಕೈತೊಳೆದುಕೊಂಡಿದೆ. ಆದರೆ, ಅದಕ್ಕೆ ಬೇಕಾದ ಕೊಳುವೆ ಬಾವಿ, ವಿದ್ಯುತ್ ಸಂಪರ್ಕವೂ ಇಲ್ಲ. ಈ ಯಾವ ಸೌಲಭ್ಯಗಳನ್ನು ನೀಡದೆ ತರಾತುರಿಯಲ್ಲಿ ಉದ್ಘಾಟಿಸಿ ನಿರ್ವಹಣೆ ಜವಾಬ್ದಾರಿಯನ್ನು ನಗರಸಭೆಗೆ ವಹಿಸಿದೆ. ಇದಾಗಿ ಮೂರು ವರ್ಷ ಕಳೆದರೂ ಜನರಿಗೆ ಹನಿ ನೀರು ದಕ್ಕಿಲ್ಲ.

ಜಂಗು ಹಿಡಿದ ಯಂತ್ರ:

ಡಾಲರ್ಸ್ ಕಾಲನಿ ಎಂದು ಕರೆಯಲಾಗುತ್ತಿದ್ದ ಜಯನಗರದ ಬಡವಾವಣೆಯ ಜನತೆ ಬಹುತೇಕ ತಮ್ಮ ಮನೆಗಳಲ್ಲಿ ಶುದ್ಧ ಕುಡಿಯುವ ಯಂತ್ರ ಅಳವಡಿಸಿಕೊಂಡಿದ್ದಾರೆ. ಇನ್ನು ಗುಡ್ಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ಕುಡಿಯುವ ನೀರು ಲಭ್ಯವಾಗದೆ ಘಟಕಗಳೇ ಮುಖ್ಯವಾಗಿದೆ. ಇದರ ನಡುವೆ ಘಟಕದ ಒಳಗೆ ಹಾಕಲಾಗಿದ್ದ ಯಂತ್ರಗಳು ಜಂಗು ಹಿಡಿದಿದ್ದು, ಇದರಿಂದ ಜನರು ಕಂಗಲಾಗಿದ್ದಾರೆ.

ಈಗ ಬೇಸಿಗೆ ಪ್ರಾರಂಭವಾಗಿದ್ದರೂ ಸಹ ಇನ್ನೂ ಶುದ್ಧ ಕುಡಿಯುವ ನೀರಿನ ಘಟಕ ಮಾತ್ರ ಮರೀಚಿಕೆಯಾಗಿ ಉಳಿದಿದೆ.ಜಯನಗರದ 3ನೇ ವಾರ್ಡಿನಲ್ಲಿ ಸ್ಥಾಪಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಕೆಕೆಆರ್‌ಡಿಬಿ ಯೋಜನೆಯಲ್ಲಿ ₹ 10 ಲಕ್ಷ ವ್ಯಯಿಸಲಾಗಿದೆ. ಕೇವಲ ಘಟಕ ನಿರ್ಮಿಸುವುದು ನಮ್ಮ ಜವಬ್ದಾರಿಯಾಗಿದೆ. ನೀರು ಪೂರೈಸುವುದು, ವಿದ್ಯುತ್ ಸಂಪರ್ಕ ಕಲ್ಪಿಸುವುದು ನಗರಸಭೆ ಕೆಲಸ ಎಂದು ಭೂ ಸೇನಾ ನಿಗಮದ ಎಇ ಕಾರ್ತಿಕ ಹೇಳಿದರು.

ಜಯನಗರದಲ್ಲಿ ಬಹುತೇಕವಾಗಿ ಆರ್ಥಿಕವಾಗಿರುವ ಜನರಿದ್ದಾರೆ. ಇವರು ತಮ್ಮ ಮನೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಜಯನಗರದ ಒಂದು ಭಾಗವಾಗಿರುವ ಗುಡ್ಡದ ಕ್ಯಾಂಪಿನಲ್ಲಿ ತೀರಾ ಹಿಂದುಳಿದ ಜನರಿದ್ದಾರೆ. ಇವರಿಗೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಇಲ್ಲಿ ಮೂರು ವರ್ಷ ಕಳೆದರೂ ಶುದ್ಧ ಕುಡಿಯುವ ನೀರಿನ ಘಟಕ ಮರೀಚಿಕೆಯಾಗಿ ಉಳಿದಿದೆ ಎಂದು ಸ್ಥಳೀಯ ನಿವಾಸಿ ತಿಮ್ಮಣ್ಣ ನಾಯಕ ದೂರಿದ್ದಾರೆ.

Share this article