ಧಾರವಾಡ:
ತಾಪಂ ಇಒ ಸುಭಾಸ ಸಂಪಗಾಂವಿ, ಗ್ರಾಮೀಣ ಕುಡಿಯುವ ನೀರು ಇಲಾಖೆ, ನರೇಗಾ ಎಡಿ ಮತ್ತು ಸಂಬಂಧಿಸಿದ ಇತರ ಅಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಸ್ಥಳ ಪರಿಶೀಲಿಸಿತು. ಹೆಬ್ಬಳ್ಳಿ ಗ್ರಾಮದಲ್ಲಿರುವ ಮೇಲ್ಮಟ್ಟದ ಜಲ ಸಂಗ್ರಹಗಾರ, ನೆಲಮಟ್ಟದ ಜಲ ಸಂಗ್ರಹಗಾರ ಹಾಗೂ ಅಮ್ಮಿನಭಾವಿಯಿಂದ ಕುಡಿಯುವ ನೀರು ಸರಬರಾಜು ಆಗುವ ಪೈಪ್‌ಲೈನ್ ವ್ಯವಸ್ಥೆ ಪರಿಶೀಲಿಸಿತು. ಗ್ರಾಮಸ್ಥರು ಪ್ರತಿನಿತ್ಯ ಕುಡಿಯುವ ನೀರಿನ ಸರಬರಾಜಿನಲ್ಲಿ ವಿಳಂಬ, ವ್ಯತ್ಯಯ ಆಗುತ್ತಿರುವುದನ್ನು ವಿವರಿಸಿದರು.
ಪ್ರಮುಖವಾಗಿ ಅಮ್ಮಿನಭಾವಿಯಿಂದ ಹೆಬ್ಬಳ್ಳಿಗೆ ನೀರು ಸರಬರಾಜು ಮಾಡುವ ಪೈಪ್‌ಗಳನ್ನು ಪರಿಶೀಲಿಸಬೇಕು. ಒಎಚ್‌ಟಿ ಬದಲಾಯಿಸಬೇಕು ಮತ್ತು ಗ್ರಾಮದ ಜನಸಂಖ್ಯೆ ಹೆಚ್ಚು ಇರುವುದರಿಂದ ಇನ್ನೊಂದು ದೊಡ್ಡ ಜಲಸಂಗ್ರಹಗಾರ ಕಟ್ಟಿಸಬೇಕೆಂದು ಗ್ರಾಮಸ್ಥರು ಅಧಿಕಾರಿಗಳ ತಂಡಕ್ಕೆ ಸಲಹೆ ನೀಡಿದರು.ಈ ಎಲ್ಲ ವಿಚಾರಗಳನ್ನು ತಹಸೀಲ್ದಾರ್ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಗಮನಕ್ಕೆ ದೂರವಾಣಿ ಮೂಲಕ ತಿಳಿಸಿದಾಗ, ಕುಡಿಯುವ ನೀರಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ತಕ್ಷಣ ತಾಲೂಕು ಟಾಸ್ಕ್‌ಪೊರ್ಸ್ ಸಮಿತಿಗೆ ಸಲ್ಲಿಸಿ, ಅನುಷ್ಠಾನಕ್ಕೆ ಅನುಮೋದನೆ ಪಡೆಯಬೇಕು. ಹೆಬ್ಬಳ್ಳಿ ದೊಡ್ಡ ಗ್ರಾಮ, ಅಂದಾಜು 20 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಗ್ರಾಮ. ಎರಡು ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಗಾರ ನಿರ್ಮಿಸಲು ಜಲ್ ಜೀವನ್ ಮಿಷನ್ ಯೋಜನೆಯಡಿ ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ. ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಇಂತಹ ಬರ ಪರಿಸ್ಥಿಯಲ್ಲಿಯೂ ತೊಂದರೆ ಆಗದಂತೆ ಕುಡಿಯುವ ನೀರು ಪೂರೈಕೆ ಮಾಡಲು ಗ್ರಾಮಸ್ಥರ, ಸಾರ್ವಜನಿಕರ ಸಹಕಾರ ಬೇಕು. ಈ ಕುರಿತು ಗ್ರಾಮಸ್ಥರಿಗೆ ಇನ್ನಷ್ಟು ಮನವರಿಕೆ ಮಾಡಲು ಮತ್ತು ಸದಾಕಾಲ ಜಿಲ್ಲಾಡಳಿತ, ತಾಲೂಕಾಡಳಿತ ನಿಮ್ಮೊಂದಿಗೆ ಇದೆ ಎಂದು ತಿಳಿಸಲು ತಹಸೀಲ್ದಾರ್‌ಗೆ ತಿಳಿಸಿದರು. ಜತೆಗೆ ತಾಂತ್ರಿಕ ಕಾರಣದಿಂದ ಕೆಟ್ಟಿದ್ದ ಬೋರ್‌ವೇಲ್ ದುರಸ್ತಿ ಮಾಡಿಸಿ, ಗ್ರಾಮಸ್ಥರ ಸಮ್ಮುಖದಲ್ಲಿ ಮರುಚಾಲನೆಗೊಳಿಸಿದರು.