‘ನ್ಯಾಚುರಲ್ ಐಸ್ ಕ್ರೀಮ್’ ಸ್ಥಾಪಕ ರಘುನಂದನ್ ಕಾಮತ್ ಇನ್ನಿಲ್ಲ

KannadaprabhaNewsNetwork |  
Published : May 19, 2024, 01:47 AM IST
ರಘುನಾಥ್‌ ಕಾಮತ್‌  | Kannada Prabha

ಸಾರಾಂಶ

15 ರಾಜ್ಯಗಳಲ್ಲಿ 160ಕ್ಕೂ ಹೆಚ್ಚಿನ ಬ್ರಾಂಚ್‌ಗಳಿಗೆ ನ್ಯಾಚುರಲ್ ಐಸ್‌ಕ್ರೀಂ ದೇಶದ ಪ್ರಖ್ಯಾತ ಬ್ಯಾಂಡ್‌ ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುದೇಶದ ಐಸ್‌ ಕ್ರೀಂ ಬ್ಯಾಂಡ್‌ಗಳಲ್ಲಿ ಚಿರಪರಿಚಿತ ಹೆಸರಾದ ‘ನ್ಯಾಚುರಲ್ಸ್ ಐಸ್‌ ಕ್ರೀಮ್’ ಸ್ಥಾಪಕ ರಘುನಂದನ್ ಕಾಮತ್ (75) ಶುಕ್ರವಾರ ಮುಂಬೈಯಲ್ಲಿ ನಿಧನರಾಗಿದ್ದಾರೆ.ನ್ಯಾಚುರಲ್ ಐಸ್‌ಕ್ರೀಂ ಹುಟ್ಟಿದ್ದು ಮುಂಬೈನಲ್ಲಾದರೂ, ಇಂದು ದೇಶದೆಲ್ಲೆಡೆ ವಿಶ್ವಾಸಾರ್ಹ, ಜನಪ್ರಿಯ ಬ್ಯಾಂಡ್ ಆಗಿ ಹೊರಹೊಮ್ಮಿರುವ ಕಂಪನಿಯನ್ನು ಆರಂಭಿಸಿದವರು ಮಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ರಘುನಂದನ್ ಕಾಮತ್. ರಘುನಂದನ್‌ ಕಾಮತ್‌ ಅವರ ಅಂತ್ಯಕ್ರಿಯೆ ಶನಿವಾರ ಮುಂಬೈನಲ್ಲಿ ನಡೆಯಿತು.

ಐಸ್ ಕ್ರೀಮ್ ಸಾಮ್ರಾಜ್ಯದ ದೊರೆ: ಕೆಲವೇ ಸ್ವಾದಗಳಿಗೆ ಸೀಮಿತವಾಗಿದ್ದ ಐಸ್ ಕ್ರೀಂ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ವಾದದ, ಹಣ್ಣಿನ ಐಸ್ ಕ್ರೀಂಗಳ ಮೂಲಕ ಸಂಚಲನ ಮೂಡಿಸಿದ್ದು ರಘುನಂದನ್‌ ಕಾಮತ್‌.ತಂದೆ ಜೊತೆ ಹಣ್ಣಿನ ವ್ಯಾಪಾರದ ಒಂದು ವರ್ಷಗಳ ಅನುಭವದೊಂದಿಗೆ 1984ರಲ್ಲಿ ಜುಹುವಿನ ಕೋಳಿವಾಡದಲ್ಲಿ ಸುಮಾರು 200 ಚದರ ಅಡಿ ಜಾಗದಲ್ಲಿ 6 ಟೇಬಲ್‌ಗಳೊಂದಿಗೆ ‘ನ್ಯಾಚುರಲ್ಸ್’ ಜನ್ಮತಾಳಿತು. ಪುಟ್ಟ ಹೋಟೆಲಲ್‌ನಲ್ಲಿ ಪಾವ್ ಬಾಜಿ ಜೊತೆ ನ್ಯಾಚುರಲ್ಸ್ ಹಣ್ಣಿನ ಐಸ್ ಕ್ರೀಂಗಳನ್ನು ಮಾರಲು ಆರಂಭಿಸಿದರು.

ರಘುನಂದನ್ ಕಾಮತ್ 1994ರಲ್ಲಿ ಐದು ಹೊಸ ಐಸ್ ಕ್ರೀಂ ಪಾರ್ಲ‌ರ್ ಗಳನ್ನು ಆರಂಭಿಸಿ ತಮ್ಮ ನ್ಯಾಚುರಲ್ಸ್‌ಗೆ ಉದ್ಯಮದ ರೂಪ ನೀಡಿದರು. ಮುಂದೆ ಜನಪ್ರಿಯತೆ ಇನ್ನೂ ಹೆಚ್ಚಾಗಿ ಫ್ರಾಂಚೈಸಿ ತೆರೆಯಬೇಕಾಯಿತು.ಮುಂಬೈ ಮಹಾನಗರವನ್ನು ದಾಟಿ ಬೇರೆ ಬೇರೆ ಊರುಗಳಿಗೂ ನ್ಯಾಚುರಲ್ಸ್ ಪಯಣ ಆರಂಭಿಸಿತು. ಆದರೆ, ಆಗಿನ ದಿನಗಳಲ್ಲಿ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರಲಿಲ್ಲ. ಹೀಗಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಐಸ್ ಕ್ರೀಂನ್ನು ಕೊಂಡೊಯ್ಯುವುದೇ ದೊಡ್ಡ ಸವಾಲಾಗಿತ್ತು. ಇದಕ್ಕೂ ಪರಿಹಾರ ಕಂಡುಕೊಂಡ ರಘುನಂದನ್ ಕಾಮತ್, ತಮ್ಮಸಂಸ್ಥೆಯಿಂದ ವಿಶಿಷ್ಟ ಥರ್ಮಾಕೋಲ್‌ ಪ್ಯಾಕೇಜಿಂಗ್ ಪರಿಚಯಿಸಿದರು.

ಈ ನ್ಯಾಚುರಲ್ಸ್‌ನ ಥರ್ಮಾಕೋಲ್ ಬಾಕ್ಸ್‌ಗಳು ಶೀಘ್ರದಲ್ಲೇ ದೇಶದೆಲ್ಲೆಡೆ ಕಾಣಿಸಿಕೊಳ್ಳಲಾರಂಭಿಸಿದವು. ನ್ಯಾಚುರಲ್ಸ್ ನ್ಯಾಷನಲ್ ಬ್ರಾಂಡ್ ಹೆಸರು ದೇಶದ ಉದ್ದಗಲಕ್ಕೂ ಹಬ್ಬಿತು.

ಇದರ ನಡುವೆ ಎಳನೀರಿನಿಂದ ಐಸ್ ಕ್ರೀಂ ಮಾಡುವ ಮೂಲಕ ಬೊಂಡ ಐಸ್ ಕ್ರೀಂನ್ನು ಮಂಗಳೂರಿನಲ್ಲಿ ಪರಿಚಯಿಸಿದರು. ಪ್ರಸಕ್ತ ನ್ಯಾಚುರಲ್ ಪುಟ್ಟ ಮಕ್ಕಳಿಂದ ಹಿಡಿದು ಮುದುಕರ ವರೆಗೆ ಎಲ್ಲರೂ ಇಷ್ಟಪಡುವ ಐಸ್ ಕ್ರೀಂ ಆಗಿ ಹೊರಹೊಮ್ಮಿದೆ. ತಾಜಾ, ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸುವ ಈ ಐಸ್ ಕ್ರೀಂಗಳು ತಮ್ಮ ಅಡಿ ಬರಹ ‘ಟೇಸ್ಟ್ ದಿ ಒರಿಜಿನಲ್‌’ ಗೆ ಅನ್ವರ್ಥನಾಮವಾಗಿ ಗುರುತಿಸಿಕೊಂಡಿವೆ.

ರಘುನಂದನ್‌ ಕಾಮತ್ ಅವರ ವಿಶಾಲ ದೃಷ್ಟಿಕೋನ, ಅವಿರತ ಶ್ರಮದ ಫಲವಾಗಿ ಜುಹುವಿನ ಸಣ್ಣ ಜಾಗದಲ್ಲಿ ಹುಟ್ಟಿಕೊಂಡ ನ್ಯಾಚರಲ್ಸ್ ಪ್ರಸ್ತುತ 300 ಕೋಟಿ ರು. ವಹಿವಾಟಿನ ಮೈಲುಗಲ್ಲು ದಾಟಿ ಮುನ್ನುಗ್ಗುತ್ತಿದೆ. ಅವರ ಪುತ್ರ ಸಿದ್ಧಾಂತ್ ಕಾಮತ್ ಕೂಡ ಜತೆಯಾಗಿದ್ದಾರೆ.

ಮಾವು, ಹಲಸು, ಚಿಕ್ಕು, ಗೇರು ಹೀಗೆ ವಿವಿಧ ಹಣ್ಣುಗಳ ಫ್ಲೇವರ್‌ನ ಐಸ್‌ಕ್ರೀಂ ತಯಾರಿಸಿದ್ದಲ್ಲದೇ ತಾವೇ ಸ್ವತಃ ಟೆರೇಸ್‌ ಗಾರ್ಡನ್‌ನಲ್ಲಿ ಹಣ್ಣು ಬೆಳೆಯುತ್ತಿದ್ದರು. ಕರಾವಳಿಯ ಹಲಸು ಬೆಳೆಗಾರರಿಂದ ಹಲಸು ಖರೀದಿಸುವ ಮೂಲಕ ಬೆಳೆಗಾರರಿಗೆ ಪ್ರೋತ್ಸಾಹ ನೀಡಿದ್ದರು.

15 ರಾಜ್ಯಗಳಲ್ಲಿ 160ಕ್ಕೂ ಹೆಚ್ಚಿನ ಬ್ರಾಂಚ್‌ಗಳಿಗೆ ನ್ಯಾಚುರಲ್ ಐಸ್‌ಕ್ರೀಂ ದೇಶದ ಪ್ರಖ್ಯಾತ ಬ್ಯಾಂಡ್‌ ಸ್ಥಾಪಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ