ನನೆಗುದಿಗೆ ಬಿದ್ದ ಹಾವೇರಿಯ 291 ಗ್ರಾಮಗಳ ಕುಡಿಯುವ ನೀರು ಯೋಜನೆ

KannadaprabhaNewsNetwork | Published : May 17, 2025 2:31 AM
Follow Us

ಸಾರಾಂಶ

ಜಿಲ್ಲೆಯ ಹಮ್ಮಿಗಿ ಬ್ಯಾರೇಜ್‌ನಲ್ಲಿ ಗುಮ್ಮಗೋಳ ಗ್ರಾಮದ ಬಳಿ ನಿರ್ಮಾಣವಾಗುವ ಜಾಕ್‌ವೆಲ್‌ನಿಂದ ಪಕ್ಕದ ಹಾವೇರಿ ಜಿಲ್ಲೆಯ 291 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನನೆಗುದಿಗೆ ಬಿದ್ದಿದೆ. ಹಲವೆಡೆ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಇನ್ನೂ ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದ್ದರೂ ಅದು ಕೂಡಾ ಕಳಪೆಯಾಗಿದೆ.

ಶಿವಕುಮಾರ ಕುಷ್ಟಗಿ ಕನ್ನಡಪ್ರಭ ವಾರ್ತೆ ಗದಗಜಿಲ್ಲೆಯ ಹಮ್ಮಿಗಿ ಬ್ಯಾರೇಜ್‌ನಲ್ಲಿ ಗುಮ್ಮಗೋಳ ಗ್ರಾಮದ ಬಳಿ ನಿರ್ಮಾಣವಾಗುವ ಜಾಕ್‌ವೆಲ್‌ನಿಂದ ಪಕ್ಕದ ಹಾವೇರಿ ಜಿಲ್ಲೆಯ 291 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನನೆಗುದಿಗೆ ಬಿದ್ದಿದೆ. ಹಲವೆಡೆ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಇನ್ನೂ ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದ್ದರೂ ಅದು ಕೂಡಾ ಕಳಪೆಯಾಗಿದೆ.

36 ಎಂಎಲ್‌ಡಿ ನೀರು: ತುಂಗಭದ್ರಾ ನದಿಗೆ ಅಡ್ಡವಾಗಿ ಹಮ್ಮಿಗಿ ಬಳಿ ನಿರ್ಮಿಸಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಜಲಾಶಯ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ಜಾಕ್ ವೆಲ್‌ನಿಂದ ಪಕ್ಕದ ಜಿಲ್ಲೆಯ ಹಾವೇರಿ, ಶಿಗ್ಗಾಂವಿ, ಸವಣೂರು ಹಾಗೂ ಹಾನಗಲ್ಲ ತಾಲೂಕುಗಳಿಗೆ ದಿನಕ್ಕೆ 36 ಎಂಎಲ್‌ಡಿ (ಮಿಲಿಯನ್ ಲೀಟರ್ ಪ್ರತಿದಿನ) ನೀರು ಎತ್ತುವಳಿ ಮಾಡಿ ಶುದ್ಧೀಕರಿಸಿ ಪೂರೈಸುವ ಯೋಜನೆ ಇದಾಗಿದೆ.

ಯೋಜನೆ ವಿಳಂಬ: ಈ ಯೋಜನೆ ಬಗ್ಗೆ 2022ರಲ್ಲಿಯೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದ್ದು 2024ರ ಆಗಸ್ಟ್ ವೇಳೆಗೆ ಯೋಜನೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ 2025ರ ಆಗಸ್ಟ್ ಸಮೀಪಿಸುತ್ತಿದ್ದರೂ ಕಾಮಗಾರಿ ಪೂರ್ಣವಾಗಿಲ್ಲ. ಗುತ್ತಿಗೆ ಪಡೆದಿರುವ ಮೇಘಾ ಕಂಪನಿಯವರು ಮಾತ್ರ ಕಾಮಗಾರಿ ಪ್ರಗತಿಯ ಬಗ್ಗೆ ಗಮನ ಹರಿಸದೇ ಇರುವ ಹಿನ್ನೆಲೆಯಲ್ಲಿ ಶಾಶ್ವತ ನೀರಿನ ಸಮಸ್ಯೆ ನಿವಾರಣೆಗಾಗಿ ಕಾಯುತ್ತಿರುವ ಹಾವೇರಿ ಜಿಲ್ಲೆಯ ಜನರು ಪರದಾಡುವಂತಾಗಿದೆ. ಹೆಚ್ಚು ವೆಚ್ಚ ಕಡಿಮೆ ಪ್ರಗತಿ: ಒಟ್ಟು 600 ಕೋಟಿ ರು. ವೆಚ್ಚದ ಈ ಯೋಜನೆಯ ಅಡಿಯಲ್ಲಿ 900 ಕಿಮೀ (ಸಣ್ಣ ದೊಡ್ಡ ಎಲ್ಲಾ ಪೈಪ್‌ಲೈನ್ ಸೇರಿ) ಉದ್ದದ ಪೈಪ್‌ಲೈನ್‌ ಹಾಕಬೇಕಿದೆ. ಆದರೆ ಇದುವರೆಗೆ 670 ಕಿಮೀ ಮಾತ್ರ ಪೂರ್ಣಗೊಂಡಿದೆ. ಕಾಮಗಾರಿ ವಿಳಂಬದಿಂದಾಗಿ ವೆಚ್ಚ ಹೆಚ್ಚಳವಾಗುತ್ತಿದೆ. ಇನ್ನು ಈ ಯೋಜನೆಯ ಪ್ರಾರಂಭಿಕ ಹಂತವಾಗಿ ಗದಗ ಜಿಲ್ಲೆಯಲ್ಲಿ 27 ಕಿಮೀ ಉದ್ದದ ಮುಖ್ಯ ನೀರು ಸಂಗ್ರಹ ಪೈಪ್‌ಲೈನ್‌ ಕಾಮಗಾರಿ‌ ಆಗಬೇಕಿದೆ. ಆದರೆ ಅದು ಕೂಡಾ ಅಲ್ಲಲ್ಲಿ ಬಾಕಿ ಉಳಿದಿದ್ದು ಈಗ ಮಳೆಗಾಲದಲ್ಲಿ ಮತ್ತೆ ಕಾಮಗಾರಿ ಪ್ರಾರಂಭಿಸಿದ್ದಾರೆ.

ಕಳಪೆ ಗುಣಮಟ್ಟದ ಕೆಲಸ: ಪ್ರಸ್ತುತ ಪೈಪ್‌ಲೈನ್ ಕಾಮಗಾರಿ ಗದಗ ಜಿಲ್ಲೆಯ ತಂಗೋಂಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹೊರವಲಯದಲ್ಲಿ ನಡೆಸುತ್ತಿದ್ದು ಅದು ಕೂಡಾ ಅತ್ಯಂತ ಕಳಪೆಯಾಗಿದೆ. ಬೃಹತ್ ನೀರು ಪೂರೈಕೆ ಮಾಡುವ ಪೈಪ್‌ಲೈನ್ ಗಳ ಗುಣಮಟ್ಟ ಮತ್ತು ಅವುಗಳ ಅಳವಡಿಕೆಯ ವೇಳೆಯಲ್ಲಿ ಪಾಲಿಸಬೇಕಾದ ನಿಯಮಗಳು ಪಾಲನೆಯಾಗಿಲ್ಲ ಎನ್ನುವುದು ಕಾಮಗಾರಿಗಳು ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡುವವರಿಗೆ ತಿಳಿದು ಬರುವ ಸತ್ಯವಾಗಿದೆ. ನೀರು, ನಿರೀಕ್ಷೆಯಲ್ಲಿ ಗ್ರಾಮಗಳು: ಈ ಯೋಜನೆಯ ವಿಳಂಬದಿಂದಾಗಿ ಪಕ್ಕದ ಹಾವೇರಿ ಜಿಲ್ಲೆಯ ನೂರಾರು ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಪ್ರತಿ ಬೇಸಿಗೆಯಲ್ಲಿಯೂ ವ್ಯಾಪಕ ಪ್ರಮಾಣದಲ್ಲಿ ತೊಂದರೆ ಅನುಭವಿಸುತ್ತಿರುವ ಈ ಗ್ರಾಮಗಳಿಗೆ ನದಿ ಮೂಲದ ಶಾಶ್ವತ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಕಾಳಜಿಯಿಂದ ರೂಪಿತವಾಗಿರುವ ಈ ಯೋಜನೆ ಇಂದಿಗೂ ಅನುಷ್ಠಾನದ ಹಾದಿಯಲ್ಲಿಯೇ ಇರುವುದು ವಿಪರ್ಯಾಸ.

ಈ ಬಗ್ಗೆ ನಮಗೇನು ಗೊತ್ತಿಲ್ಲ, ನಾವು ಮಾಧ್ಯಮಗಳಿಗೆ ಹೇಳಿಕೆ ನೀಡುವುದಿಲ್ಲ, ನಮ್ಮ ಕಂಪನಿಯ ಹಿರಿಯ ಅಧಿಕಾರಿಗಳಿಂದಲೇ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಎಂದು ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಅಧಿಕಾರಿ ಅಮರಾಥ ರೆಡ್ಡಿ ಹೇಳಿದರು.

ಹೌದು ಕಾಮಗಾರಿ ವಿಳಂಬವಾಗಿದೆ. ಕೆಲವು ರೈತರ ಜಮೀನುಗಳಲ್ಲಿಯೇ ಪೈಪ್‌ಲೈನ್ ಅಳವಡಿಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಅಲ್ಪ ವಿಳಂಬವಾಗಿದೆ. ಕಾಮಗಾರಿಯ ಗುಣಮಟ್ಟ ಪರಿಶೀಲನೆಗೆ ಥರ್ಡ್‌ ಪಾರ್ಟಿ ಇರುತ್ತದೆ ನಾವು ಕೂಡಾ ಪರಿಶೀಲನೆ ಮಾಡುತ್ತೇವೆ. ಈ ಕುರಿತು ನಮ್ಮ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಎಂದು ಹೆಸರು ಹೇಳಲು ಇಚ್ಛಿಸಿದ ಇಲಾಖೆ ಅಧಿಕಾರಿ ಹೇಳಿದರು.