ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ
ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಈ ಬಾರಿ ಶೇಂಗಾ ಹೆಚ್ಚು ಬಿತ್ತನೆಗೊಂಡಿದೆ. ಯಲಬುರ್ಗಾ ಹೋಬಳಿ-೨೬೫೦ ಹೆಕ್ಟೇರ್, ಹಿರೇವಂಕಲ ಕುಂಟಾ-೩೫೬೦ ಹೆಕ್ಟೇರ್, ಮಂಗಳೂರು-೧೭೫೦ ಹೆಕ್ಟೇರ್ ಸೇರಿ ಒಟ್ಟು ೭೮೬೦ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಗೊಂಡಿದೆ. ಕಳೆದ ಬಾರಿಗಿಂತ ಈ ಸಲ ಶೇಂಗಾ ಬೆಳೆಗೆ ರೋಗ, ಕೀಟಬಾಧೆ ಕಡಿಮೆ ಇದೆ.
ಸಮಗ್ರ ರೋಗ ನಿರ್ವಹಣಾ ಕ್ರಮಗಳು: ಶೇಂಗಾ ಬಿತ್ತನೆ ಮಾಡುವ ಮುಂಚೆ ಟ್ರೈಕೊಡರ್ಮಾ, ಸುಡೊಮೊನಾಸ್ ಜೈವಿಕ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಬೇಕು. ಎಲೆಚುಕ್ಕೆ, ತುಕ್ಕು ರೋಗಗಳ ನಿರ್ವಹಣೆಗೆ ೨ ಗ್ರಾಂ ಕ್ಲೊರೋಥ್ಯಾಲೋನಿಲ್ ೭೫ ಡಬ್ಲುಪಿ ಅಥವಾ ೧ ಮಿಲೀ ಡೈಫೆನ್ ಕೊನಾಜೋಲ್ ೨೫ ಇಸಿ ಅಥವಾ ೧ಮಿಲೀ ಹೆಕ್ಸಾಕೊನಜೊಲ್ ೫ ಇಸಿ ಅಥವಾ ೦.೫ ಗ್ರಾಂ ಮೈಕೊಬುಟಾನಿಲ್ ೧೦ ಡಬ್ಲುಪಿ ಶಿಲೀಂಧ್ರ ನಾಶಕಗಳನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ರೋಗ ಕಂಡು ಬಂದ ಕೂಡಲೇ ಸಿಂಪಡಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಸ್ಪ್ರಿಂಕ್ಲರ್‌ಗೆ ಹೆಚ್ಚು ಬೇಡಿಕೆ: ತಾಲೂಕಿನಲ್ಲಿ ರೈತರು ನಾನಾ ಬೆಳೆಗೆ ಸರ್ಕಾರವು ಸಹಾಯಧನದ ಮೂಲಕ ಕೊಡುವ ಸ್ಪ್ರಿಂಕ್ಲರ್ (ಹನಿ ನೀರಾವರಿ ಪದ್ಧತಿ) ಘಟಕಕ್ಕೆ ರೈತರಿಂದ ಹೆಚ್ಚು ಬೇಡಿಕೆ ಇದೆ.
ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ ರೈತರಿಗೆ ಬೇಡಿಕೆಗೆ ಅನುಗುಣವಾಗಿ ಸೂಕ್ಷ್ಮ ನೀರಾವರಿ ಘಟಕ ವಿತರಣೆ ಮಾಡಲಾಗಿದ್ದು, ಯಲಬುರ್ಗಾ ಹೋಬಳಿ-೫೮೦ ಸೆಟ್, ಹಿರೇವಂಕಲಕುಂಟಾ-೫೫೦ ಸೆಟ್, ಕುಕನೂರು-೯೦ ಸೆಟ್, ಮಂಗಳೂರು-೧೫೦ ಸೆಟ್ ಸ್ಪ್ರಿಂಕ್ಲರ್ ಸೆಟ್ ವಿತರಿಸಲಾಗಿದೆ.ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಯಡಿ ಕೆರೆಗಳು ತುಂಬಿದ್ದು, ರೈತರ ಕೊಳವೆಬಾವಿ ನೀರು ಮರುಪೂರಣಗೊಂಡಿವೆ. ರೈತರು ಶೇಂಗಾ ಬೆಳೆಯಲು ಹೆಚ್ಚಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಹೆಚ್ಚು ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಕಳೆದ ಬಾರಿಗಿಂತ ಶೇಂಗಾ ಬೆಳೆ ಈ ಸಲ ಉತ್ತಮವಾಗಿದೆ. ಶೇಂಗಾ ಬೆಳೆಗೆ ಕಾಣಿಸಿಕೊಳ್ಳುವ ಎಲೆಚುಕ್ಕೆ, ಕತ್ತುಕೊಳೆ, ಬೀಜಕೊಳೆ ಮತ್ತು ತುಕ್ಕು ರೋಗಗಳ ನಿರ್ವಹಣೆಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ರೋಗಗಳ ಹತೋಟಿಗೆ ತರಲು ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧಿ ಲಭ್ಯವಿದೆ. ರೈತರು ಅಗತ್ಯ ಮಾಹಿತಿ ಪಡೆದು ನಿರ್ವಹಣೆ ಕೈಗೊಳ್ಳಬೇಕು ಎಂದು ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದ್ದಾರೆ.ಕಳೆದ ವರ್ಷ ಶೇಂಗಾ ಬಿತ್ತನೆ ಮಾಡಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ಸಲ ಶೇಂಗಾ ಸಮೃದ್ಧವಾಗಿ ಬೆಳೆದಿದೆ. ಬೆಳೆಗೆ ರೋಗಬಾಧೆ ತಗುಲದಂತೆ ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡಿಸಲಾಗುತ್ತಿದೆ ಎಂದು ಹಿರೇವಂಕಲಕುಂಟಾ ರೈತ ಹನುಮೇಶ ತಿಳಿಸಿದ್ದಾರೆ.