ಕೂಡ್ಲಿಗಿ: ಇಂದು ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದ್ದು, ಪತ್ರಕರ್ತರು ಹೃದಯವಂತಿಕೆ ಮೂಲಕ ಸಮಾಜವನ್ನು ನೋಡುವ ದೃಷ್ಟಿಕೋನ ಬೆಳೆಸಿಕೊಂಡು ವೃತ್ತಿ ಮೌಲ್ಯಗಳನ್ನು ಉಳಿಸಿಕೊಳ್ಳಬೇಕೆಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಪತ್ರಕರ್ತರು ಸಮಾಜದ ಕನ್ನಡಿ ಇದ್ದಂತೆ ಸುದ್ದಿ ಮಾಡುವಾಗ ಯಾವುದೇ ಪೂರ್ವಗ್ರಹ ಪೀಡಿತರಾಗದೇ ವಾಸ್ತವ ಅಂಶಗಳನ್ನು ಕಟ್ಟಿಕೊಡುವ ಕಾರ್ಯ ಮಾಡಬೇಕಿದೆ. ಸಮಾಜದಲ್ಲಿನ ಅನೇಕ ಸಮಸ್ಯೆಗಳನ್ನು ಹೊರ ತಗೆದು ಅದಕ್ಕೆ ಸೂಕ್ತ ಪರಿಹಾರಗಳನ್ನು ಸಹ ನೀಡಲು ಪತ್ರಕರ್ತರು ಮುಂದೆ ಬರಬೇಕು. ಇದರಿಂದ ಕ್ಷೇತ್ರದ ಅನೇಕ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.
ಈಗಾಗಲೇ ತಾಲೂಕಿನ ಪತ್ರಕರ್ತರಿಗೆ ನಿವೇಶನವನ್ನು ನೀಡಲು ಮನವಿ ನೀಡಲಾಗಿತ್ತು. ಪಟ್ಟಣದ ಸರ್ಕಾರಿ ಐಟಿಐ ಕಾಲೇಜು ಬಳಿ ಜಾಗ ಗುರುತಿಸಲಾಗಿತ್ತು. ಆದರೆ ಅದು ಹಳ್ಳ ಎಂದು ಪಹಣಿಯಲ್ಲಿ ನಮೂದಿಸಲಾದ ಕಾರಣ ಅದಕ್ಕೆ ತಾಂತ್ರಿಕ ಅಡಚಣೆಯಾಗಿದೆ ಎಂದರು. ಇನ್ನು ಪತ್ರಕರ್ತರ ಕಚೇರಿಯನ್ನು ಒಂದು ವಾರದೊಳಗೆ ನೀಡಿ ಅದಕ್ಕೆ ಬೇಕಾದ ಪೂರಕ ಪರಿಕರಗಳನ್ನು ಸಹ ಕೊಡುವುದಾಗಿ ಶಾಸಕರು ಕಾರ್ಯಕ್ರಮದಲ್ಲಿ ಭರವಸೆ ವ್ಯಕ್ತಪಡಿಸಿದರು.ಬಿಡಿಸಿಸಿ ಬಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಬಿಡಿಸಿಸಿ ಬ್ಯಾಂಕ್ ಕೋಟ್ಯಂತರ ರುಪಾಯಿ ಲಾಭ ಗಳಿಸಲು ಪತ್ರಿಕೆಗಳು ಹೆಚ್ಚು ಸಹಕರಿಸಿವೆ ಎಂದು ಸ್ಮರಿಸಿದರು.
ನೋಂದಾಯಿತ ಪತ್ರಕರ್ತರಿಗೆ ಜಿಲ್ಲೆಯಲ್ಲಿ ಯಶಸ್ವಿನಿ ಕಾರ್ಡ್ ಗಳನ್ನು ಉಚಿತವಾಗಿ ನೀಡುತ್ತಿದ್ದು, ಪ್ರಸಕ್ತ ವರ್ಷದಲ್ಲಿಯೂ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಇನ್ನು ಮುಂಬರುವ ದಿನಗಳಲ್ಲಿ ಸಂಘದ ಶಾಖೆಗಳಲ್ಲಿ ಆದ್ಯತೆ ಹಾಗೂ ನಿಯಮಾವಳಿಗಳು ಮೂಲಕ ಸಾಲ, ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು.ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿ, ಕಾನಮಡಗು ದಾಸೋಹ ಮಠದ ಶರಣಾರ್ಯರು ಸಾನಿಧ್ಯ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಭೀಮಣ್ಣ ಗಜಾಪುರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ಹೂಡೇಂ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯಅತಿಥಿಗಳಾಗಿ ಡಿವೈಎಸ್ಪಿ ಮಲ್ಲೇಶ್ ನಾಯ್ಕ, ಬಿಇಒ ಮೈಲೇಶ್ ಬೇವೂರ್, ರಾಜ್ಯ ಪರಿಷತ್ತು ಸದಸ್ಯ ವೆಂಕೋಬ ನಾಯಕ, ಉಪಾಧ್ಯಕ್ಷ ಉಜ್ಜಿನಿ ರುದ್ರಪ್ಪ, ಕಾರ್ಯಕಾರಿಣಿ ಸದಸ್ಯರಾದ ವೀರೇಶ್ ಅಂಗಡಿ, ಕೆ.ಎಂ. ವೀರೇಶ್, ಪಪಂ ಮಾಜಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ಮುಖಂಡರಾದ ಸಾವಜ್ಜಿ ರಾಜೇಂದ್ರ ಪ್ರಸಾದ್, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನ ಗೌಡ, ಕಾಂಗ್ರೆಸ್ ಯುವ ಮುಖಂಡ ನೂರ್ ಅಹಮದ್, ತಾಪಂ ಮಾಜಿ ಸದಸ್ಯ ಹುಡೇಂ ಪಾಪನಾಯಕ, ಕೊಲುಮೆಹಟ್ಟಿ ವೆಂಕಟೇಶ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿಬಿ ಶಿವಾನಂದ, ದಲಿತ ಮುಖಂಡರಾದ ಎಸ್. ದುರುಗೇಶ್, ಕಂದಗಲ್ಲು ಪರಶುರಾಮ್, ಡಿ.ಎಚ್.ದುರುಗೇಶ್, ಬಿ.ಟಿ.ಗುದ್ದಿ ದುರುಗೇಶ್, ಬಿಜೆಪಿ ಮಹಿಳಾ ಮುಖಂಡರಾದ ಎಲ್. ಪವಿತ್ರಾ, ಹುಲಿಕೆರೆ ಗೀತಾ, ನೇತ್ರಾ ಮಂಜುನಾಥ, ಕಾಟೇರ ಹಾಲೇಶ್, ಮಯೂರ ಮಂಜುನಾಥ, ಕೂಡ್ಲಿಗಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಣವಿಕಲ್ಲು ರಾಜು, ಸೂಲದಹಳ್ಳಿ ಮಾರೇಶ್ ಇದ್ದರು. ಇದಕ್ಕೂ ಮುಂಚೆ ಡಿ.ಓ.ಮೊರಾರ್ಜಿ ಅವರ ಆರ್ಕೆಸ್ಟ್ರಾ ತಂಡದಿಂದ ಸುಮಧುರ ಭಾವಗೀತೆಗಳು ನೆರೆದಿದ್ದ ಪ್ರೇಕ್ಷಕರ ಮನಸೆಳೆಯಿತು.