- ಎಚ್.ಕೆ.ಬಿ. ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬಸೊರಬ ತಾಲೂಕಿನ ಹೊಳೆ ಜೋಳದಗುಡ್ಡೆ ಗ್ರಾಮದಲ್ಲಿ ಜಲಜೀವನ್ ಯೋಜನೆಯಡಿ ನಿರ್ಮಾಣ ಆಗಿರುವ ನೀರು ಸಂಗ್ರಹಣೆ ಟ್ಯಾಂಕ್ ಉದ್ಘಾಟನೆಗೂ ಮೊದಲೇ ಸೋರುತ್ತಿದೆ. ಗುತ್ತಿಗೆದಾರನ ನಿರ್ಲಕ್ಷ್ಯ, ಜನಪ್ರತಿನಿಧಿಗಳ ನಿಷ್ಕಾಳಜಿ ಪರಿಣಾಮ ಈಗ ಲಕ್ಷಾಂತರ ರು. ವೆಚ್ಚದ ಯೋಜನೆ ಕಳಪೆಯಾಗಿ, ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ಈ ಟಾಂಕ್‌ಗೆ ಸುಣ್ಣ-ಬಣ್ಣ ಬಳಿದು, ಕಂಗೊಳಿಸುವಂತೆ ಮಾಡಿ, ನೋಡುಗರ ಕಣ್ಣಿಗೆ ಮಣ್ಣೆರಚಲಾಗಿದೆ. ಉದ್ಘಾಟನೆಗೆ ಸಜ್ಜುಗೊಂಡಿರುವ ನೀರಿನ ಟ್ಯಾಂಕ್‌ನ್ನು ಚಂದ್ರಗುತ್ತಿ ಗ್ರಾಮ ಪಂಚಾಯಿತಿ ತನ್ನ ವಶಕ್ಕೆ ಪಡೆದು ಹೊಳೆಜೋಳದಗುಡ್ಡೆ ಗ್ರಾಮದ ಪ್ರತಿ ಮನೆಗಳ ನಲ್ಲಿಗಳಿಗೆ ನೀರು ಸರಬರಾಜು ಮಾಡುವ ದೃಷ್ಠಿಯಿಂದ ವಿದ್ಯುತ್ ಕೊಳವೆಬಾವಿ ಮೂಲಕ ಟ್ಯಾಂಕ್‌ಗೆ ನೀರು ತುಂಬಿಸಿದೆ. ಆಗ ಜಿಪಂ ಗುತ್ತಿಗೆದಾರ, ಶಿಕಾರಿಪುರದ ಗುರುಪ್ರಸಾದ್ ಶೆಟ್ಟಿ ಎಂಬವರು ಕಟ್ಟಿದ ಈ ಟ್ಯಾಂಕ್‌ನ ಕಳಪೆ ಕಾಮಗಾರಿ ಬಯಲಾಗಿದೆ. ಟ್ಯಾಂಕ್ ನಿರ್ಮಾಣಕ್ಕೆ ಅಧಿಕ ಸಾಮರ್ಥ್ಯದ ಕಬ್ಬಿಣ, ಗುಣಮಟ್ಟದ ಸಿಮೆಂಟ್, ಮರಳು, ಜಲ್ಲಿಯನ್ನು ಬಳಸದೇ ನಿರ್ಮಿಸಲಾಗಿದೆ. ನೀರು ತುಂಬಿಸಿದಾಗ, ಟ್ಯಾಂಕ್ ಸಂಪೂರ್ಣ ಒದ್ದೆಯಾಗುತ್ತದೆ, ಅಲ್ಲಲ್ಲಿ ನೀರು ಒಸರುತ್ತಿದೆ.ತಾಲೂಕಿನ ಚಂದ್ರಗುತ್ತಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಹೊಳೆಜೋಳದಗುಡ್ಡೆ ಗ್ರಾಮದಲ್ಲಿ ಸುಮಾರು 100 ಮನೆಗಳಿವೆ. ಪ್ರತಿ ಮನೆಗಳಿಗೂ ಜಲಜೀವನ್ ಯೋಜನೆಯಡಿ ನಲ್ಲಿಗಳ ಅಳವಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಆಶಯದೊಂದಿಗೆ ಜಲಜೀವನ್ ಯೋಜನೆ ಆರಂಭಿಸಿದ್ದಾರೆ. ಈ ಯೋಜನೆ 2024ರ ವೇಳೆಗೆ ಗಾಮೀಣ ಭಾರತದ ಪ್ರತಿಯೊಂದು ಮನೆಗೆ ನಲ್ಲಿ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ.
₹35 ಲಕ್ಷ ವೆಚ್ಚದ ಕಾಮಗಾರಿ:ಹೊಳೆ ಜೋಳದಗುಡ್ಡೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಕೇಂದ್ರ ಸರ್ಕಾರದ ಜಲಜೀವನ್ ಯೋಜನೆಯಡಿ ಸುಮಾರು ₹35 ಲಕ್ಷ ವೆಚ್ಚದಲ್ಲಿ 1 ಲಕ್ಷ ಲೀಟರ್ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ನೀರಿನ ಟ್ಯಾಂಕ್ ಕಾಮಗಾರಿ 2022-23ರಲ್ಲಿ ಪ್ರಾರಂಭಗೊಂಡು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಪೂರ್ಣಗೊಂಡಿದೆ. ನೀರು ತುಂಬಿಸಿದರೆ ಟ್ಯಾಂಕ್ ಒದ್ದೆಯಾಗುತ್ತದೆ. ಅಲ್ಲಲ್ಲಿ ನೀರು ಒಸರುವುದರಿಂದ ಕೆಲವೇ ದಿನಗಳಲ್ಲಿ ಟ್ಯಾಂಕ್‌ಗೆ ಪಾಚಿಕಟ್ಟಿ, ಶಿಥಿಲವಾಗಿ, ಟ್ಯಾಂಕ್ ಬಿರುಕು ಬಿಡುವ ಅಪಾಯ ಇದೆ.
ಪೈಪ್‌ಲೈನ್, ವಾಲ್ವ್‌ಗಳೂ ಅವ್ಯವಸ್ಥೆ:ಅಲ್ಲದೇ, ನೀರು ಸರಬರಾಜು ಆಗಲು ಎರಡೂವರೆ ಇಂಚು ಸುತ್ತಳತೆಯ ಪಿವಿಸಿ ಪೈಪ್ ಅಳವಡಿಸುವ ಬದಲು, 2 ಇಂಚು ಅಳತೆಯ ಪೈಪ್‌ಗಳ ಬಳಸಿದ್ದಾರೆ. ಅವಶ್ಯವಿದ್ದ ಕಡೆ ವಾಲ್ವ್ ಬಳಸಿಲ್ಲ. ಇದರಿಂದ ನೀರಿನ ರಭಸ ಕಳೆದುಕೊಂಡು, ಎತ್ತರದ ಪ್ರದೇಶದ ಮನೆಗಳ ನಲ್ಲಿಗಳಿಗೆ ನೀರು ಸರಿಯಾಗಿ ಸರಬರಾಜು ಆಗುವುದಿಲ್ಲ ಎನ್ನುವುದು ಗ್ರಾಮಸ್ಥರ ಆಕ್ರೋಶ. ಈಗಾಗಲೇ ಗ್ರಾಮದಲ್ಲಿ ನೀರಿನ ಅಭಾವ ಉಂಟಾಗಿದೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಳಪೆ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಬೇಕು. ಕಳಪೆ ಟ್ಯಾಂಕ್‌ನಿಂದ ಮುಂದಾಗುವ ಅಪಾಯ ತಪ್ಪಿಸಲು ಮನವಿ ಮಾಡಿದ್ದಾರೆ.
- - - ಕೋಟ್ಸ್ಕಳೆದ 10 ದಿನಗಳ ಹಿಂದೆ ಪೂರ್ಣಗೊಂಡ ನೀರಿನ ಟ್ಯಾಂಕ್ ಉದ್ಘಾಟನೆಗೆ ಮೊದಲೇ ನೀರು ತೊಟ್ಟಿಕ್ಕುತ್ತಿದೆ. ಗುಣಮಟ್ಟದ ಪರಿಕರಗಳನ್ನು ಬಳಸಿಲ್ಲ. ಕ್ಯೂರಿಂಗ್ ಸಹ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಾರೂ ಭೇಟಿ ನೀಡಿಲ್ಲ. ಟ್ಯಾಂಕ್ ಗುಣಮಟ್ಟ ಸರಿಯಾದ ಮೇಲೆ ಗ್ರಾಮದ ನಲ್ಲಿಗಳಿಗೆ ಸರಬರಾಜು ಮಾಡಬೇಕು. ಇಲ್ಲವಾದಲ್ಲಿ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು
– ತುಳಸಮ್ಮ ಚಂದ್ರಪ್ಪ ಅಂಗಡಿ, ಗ್ರಾಪಂ ಸದಸ್ಯೆ, ಹೊಳೆಜೋಳದಗುಡ್ಡೆಟ್ಯಾಂಕ್ ಕಾಮಗಾರಿ ಗುಣಮಟ್ಟ ಕಾಯ್ದುಕೊಂಡು ಸಮರ್ಪಕವಾಗಿ ನಿರ್ವಹಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಟ್ಯಾಂಕ್‌ಗೆ ನೀರು ಸರಬರಾಜು ಮಾಡಿದ್ದು, ಎಲ್ಲಿಯೂ ಸೋರುತ್ತಿಲ್ಲ. ಯಾವುದೇ ಕಟ್ಟಡ ಮತ್ತು ನೀರಿನ ಟ್ಯಾಂಕ್‌ಗಳು ಹೊಸದರಲ್ಲಿ ನೀರನ್ನು ಹೀರಿಕೊಳ್ಳುವುದು, ಒದ್ದೆ ಆಗುವುದು ಸಾಮಾನ್ಯ. ಮುಂದಿನ ದಿನಗಳಲ್ಲಿ ಸರಿಯಾಗಲಿದೆ
– ಗಣಪತಿ ನಾಯ್ಕ್, ಕಿರಿಯ ಅಭಿಯಂತರ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗ, ಸೊರಬಹೊಳೆಜೋಳದಗುಡ್ಡೆ ನೀರಿನ ಟ್ಯಾಂಕ್‌ಗೆ ಸೋರುತ್ತಿದ್ದು, ಈ ಕಾರಣದಿಂದ ಗ್ರಾಮಕ್ಕೆ ನೀರು ಸರಬರಾಜು ನಿರ್ವಹಣೆ ಮಾಡಲು ಹಸ್ತಾಂತರ ಮಾಡಿಕೊಂಡಿಲ್ಲ. ಅಲ್ಲದೇ, ಸರಿಯಾದ ಅಳತೆಯ ಪೈಪ್, ವಾಲ್ವ್‌ಗಳನ್ನು ಬಳಸಿಲ್ಲ. ಮುಂದಿನ ಒಂದು ವಾರ ಕಾದು ನಂತರ ಹಸ್ತಾಂತರ ಬಗ್ಗೆ ತೀರ್ಮಾನಿಸಲಾಗುವುದು
- ನಾರಾಯಣಮೂರ್ತಿ, ಪಿಡಿಒ, ಚಂದ್ರಗುತ್ತಿ ಗ್ರಾಪಂ- - - -05ಕೆಪಿಸೊರಬ01: ಹೊಳೆಜೋಳದಗುಡ್ಡೆ ನೂತನ ನೀರಿನ ಟ್ಯಾಂಕ್.