ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿರುವ ಬರ ಪರಿಹಾರ ಹೆಚ್ಚಿಸಬೇಕು-ಮೇಟಿ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವ ಕಾರ್ಯ ಮಾಡದಿರುವುದು ಹಾಗೂ ಬರ ಪರಿಹಾರವಾಗಿ ಪ್ರತಿ ರೈತರಿಗೆ ರು. 2 ಸಾವಿರ ನೀಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.

ಲಕ್ಷ್ಮೇಶ್ವರ: ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವ ಕಾರ್ಯ ಮಾಡದಿರುವುದು ಹಾಗೂ ಬರ ಪರಿಹಾರವಾಗಿ ಪ್ರತಿ ರೈತರಿಗೆ ರು. 2 ಸಾವಿರ ನೀಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.

ಶನಿವಾರ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರು ಕೇವಲ ಬೆಂಗಳೂರಿಗೆ ಮಾತ್ರ ಸಚಿವರಾಗಿದ್ದಾರೆ. ಕೇವಲ ಬೆಂಗಳೂರನ್ನು ಕೇಂದ್ರೀಕರಿಸಿ ಆಡಳಿತ ನಡೆಸುತ್ತಿರುವುದು ಖಂಡನೀಯ. ರಾಜ್ಯದಲ್ಲಿ ರೈತರು ಬರದಿಂದ ಜೀವನ ಸಾಗಿಸಲು ಸಾಧ್ಯವಾಗದೆ ಸಾಲದ ಸುಳಿಯಲ್ಲಿ ಸಿಲುಕಿ ಸಾಯುತ್ತಿದ್ದಾರೆ. ಆದರೆ ರಾಜ್ಯದ ನೀರಾವರಿ ಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರು ರೈತರ ಬಗ್ಗೆ ಗಮನ ಹರಿಸುತ್ತಿಲ್ಲ, ಉತ್ತರ ಕರ್ನಾಟಕದಲ್ಲಿ ಪ್ರಮುಖ 6-7 ನದಿಗಳು ಹರಿಯುತ್ತಿದ್ದರೂ ರೈತರು ಬರಗಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟಾದರೂ ನೀರಾವರಿ ಸಚಿವರ ಗಮನಕ್ಕೆ ಇದು ಬರದಿರುವುದು ಖಂಡನೀಯ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ ಅವರನ್ನು ನೀರಾವರಿ ಖಾತೆಗೆ ರಾಜೀನಾಮೆ ಕೊಡಿಸಬೇಕು ಹಾಗೂ ಅವರ ಜಾಗೆಯಲ್ಲಿ ಸೂಕ್ತ ಮತ್ತು ಅರ್ಹ ನೀರಾವರಿ ಮಂತ್ರಿಗಳನ್ನು ನೇಮಕ ಮಾಡಬೇಕು ಎಂದು ಅವರು ಹೇಳಿದರು. ಕೃಷಿ ಇಲಾಖೆಗೆ ಸರ್ಕಾರ 5 ಸಾವಿರ ಕೋಟಿ ಹಣ ಮೀಸಲಿಟ್ಟಿರುವುದು ಯಾತಕ್ಕೂ ಸಾಲದಾಗಿದ್ದು, ಆ ಮೊತ್ತವನ್ನು 25 ಸಾವಿರಕೋಟಿ ಮೀಸಲು ಇಟ್ಟು ರೈತರ ಅಭಿವೃದ್ಧಿಗೆ ನೀಡಬೇಕು. ರೈತರಿಗೆ ಉಚಿತ ವಿದ್ಯುತ್ ಸಲಕರಣೆ ನೀಡಬೇಕು, ನಿರಂತರ ವಿದ್ಯುತ್ ನೀಡುವುದು, ರೈತರ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಕಾರ್ಯ ರಾಜ್ಯ ಸರ್ಕಾರ ಮಾಡಬೇಕು ಎಂದು ಅವರು ಆಗ್ರಹಿಸಿದರು. ಇದೆ ವೇಳೆ ಗದಗ ಜಿಲ್ಲಾ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರನ್ನಾಗಿ ಯಲ್ಲನಗೌಡ ಪಾಟೀಲ, ಶಿರಹಟ್ಟಿ ತಾಲೂಕಾ ಅಧ್ಯಕ್ಷರನ್ನಾಗಿ ಸುರೇಶ ತಳ್ಳಳ್ಳಿ ಹಾಗೂ ಲಕ್ಷ್ಮೇಶ್ವರ ತಾಲೂಕಾ ಅಧ್ಯಕ್ಷರನ್ನಾಗಿ ನಾಗರಾಜ ಶಿರಬಡಗಿ ಅವರನ್ನು ನೇಮಕ ಮಾಡಿ ಆದೇಶ ನೀಡಿದರು. ಈ ವೇಳೆ ಸಂಗಣ್ಣ ಬಾಗೇವಾಡಿ, ಎಫ್.ಕೆ. ಪೂಜಾರ, ಯಲ್ಲನಗೌಡ ಪಾಟೀಲ, ಸುರೇಶ ತಳ್ಳಳ್ಳಿ, ವಿಶ್ವನಾಥ ಚಿಂಚಲಿ, ನಿಂಗಪ್ಪಸಾಂದ್ಲಿ, ಹನಮಪ್ಪ ಕಬ್ಬೇರಹಳ್ಳಿ, ದೇವಪ್ಪ ಭಜಂತ್ರಿ, ಅಂದಾನೆಪ್ಪ ಚೂರಿ ಇದ್ದರು.

Share this article