ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯ ಬಡ ಪ್ರತಿಭಾವಂತ ಐಟಿಐ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಚಿವ ಎಂ.ಬಿ.ಪಾಟೀಲ ಅವರ ಆಶಯದಂತೆ ಟೊಯೊಟಾ ಕಂಪನಿ ವಿಜಯಪುರದಲ್ಲಿಯೇ ಎರಡು ದಿನಗಳ ಉದ್ಯೋಗ ಮೇಳ ಆಯೋಜಿಸಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಕಂಪನಿಗಳು ಉದ್ಯೋಗ ಮೇಳ ಏರ್ಪಡಿಸಲು ಸಚಿವರು ಕ್ರಮ ಕೈಗೊಂಡಿದ್ದಾರೆ ಎಂದು ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಸಂಗನಬಸವ ಪಾಲಿಟೆಕ್ನಿಕ್‌ನಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಎಂಜನಿಯರಿಂಗ್ ಮತ್ತಿತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲಾಗದೆ ಐಟಿಐ ಮತ್ತು ಡಿಪ್ಲೋಮಾ ಓದುತ್ತಾರೆ. ಈ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಇಂಥ ಉದ್ಯೋಗ ಮೇಳಗಳು ನೆರವಾಗಲಿವೆ. ಟೊಯೊಟಾ ಕಿರ್ಲೋಸ್ಕರ್ ಕಂಪನಿಯವರು ಮಾನವೀಯ ಮೌಲ್ಯಗಳೊಂದಿಗೆ ಸಿಬ್ಬಂದಿಯ ಹಿತ ಕಾಪಾಡುವ ಹೃದಯವಂತಿಕೆ ಹೊಂದಿದ್ದಾರೆ. ವೃತ್ತಿ ಕೌಶಲ್ಯಕ್ಕೆ ಆದ್ಯತೆ ನೀಡುವ ಜಪಾನ ಮೂಲದ ಈ ಕಂಪನಿಯಲ್ಲಿ ಕೆಲಸಕ್ಕೆ ಸೇರುವವರು ತಮ್ಮ ಸಾಮರ್ಥ್ಯದ ಮೂಲಕ ಉನ್ನತ ಸ್ಥಾನ ಅಲಂಕರಿಸಲು ಅವಕಾಶಗಳಿವೆ ಎಂದರು.ಡೀಮ್ಡ್ ವಿವಿ ರಜಿಸ್ಟಾರ್ ಡಾ ಆರ್.ವಿ ಕುಲಕರ್ಣಿ ಮಾತನಾಡಿ, ಮುಂಬರುವ ದಿನಗಳಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಸ್ಟಾರ್ಟ್ ಅಪ್ ಕಂಪನಿ ಪ್ರಾರಂಭಿಸಲಿದೆ. ಈ ಮೂಲಕ ಉದ್ಯಮಿಗಳಾಗಲು ಬಯಸುವ ಯುವಕರ ಸಬಲೀಕರಣಕ್ಕೆ ಕೈಜೋಡಿಸಲಿದೆ. ವೃತ್ತಿಪರ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳು ಕಾರ್ಯದಕ್ಷತೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಕಾರ್ಪೋರೆಟ್ ಕಂಪನಿಗಳಲ್ಲಿ ಉತ್ತಮ ಕೆಲಸ ಮತ್ತು ಸಂಬಳ ಹೊಂದಿರುವ ಹುದ್ದೆಗಳನ್ನು ಪಡೆಯಲು ನೆರವಾಗುತ್ತದೆ ಎಂದು ಹೇಳಿದರು.ಟೊಯೊಟಾ ಕಿರ್ಲೋಸ್ಕರ್ ಮೂಟರ್ಸ್ ನ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ದಯಾನಂದ, ರವಿ ದೊಡ್ಡಹಳ್ಳಿ, ಡಾ.ವಿ.ಜಿ.ಸಂಗಮ, ಪ್ರಾಚಾರ್ಯ ಡಾ.ಎಂ.ಡಿ.ಪಡಸಲಗಿ ಮುಂತಾದವರು ಇದ್ದರು. ಪ್ರಾಚಾರ್ಯ ಪಿ.ಬಿ.ಕಳಸಗೊಂಡ ಸ್ವಾಗತಿಸಿದರು. ಶಿಲ್ಪಾ ಜಗದಾಳೆ ನಿರೂಪಿಸಿದರು. ಪ್ರವೀಣ ತಮ್ಮಣ್ಣವರ ವಂದಿಸಿದರು.