ಪ್ರಾಣಿ-ಪಕ್ಷಿಗಳಿಗೂ ಮಾನವನಂತೆ ಬದುಕುವ ಹಾಗೂ ಸ್ವತಂತ್ರವಾಗಿ ಜೀವಿಸುವ ಹಕ್ಕಿದ್ದು, ಅವುಗಳನ್ನು ರಕ್ಷಿಸುವ ಮೂಲಕ ಜೀವಿಸಲು ನಾವು ಸಹಕರಿಸಬೇಕಿದೆ ಎಂದು ಪ್ರಾಣಿದಯಾ ಸಮಿತಿ ಅಧ್ಯಕ್ಷ ಹಾಗೂ ಪರಿಸರ ಚಿಂತಕ ಮುರಿಗೆಪ್ಪ ಶೆಟ್ಟರ ಅಭಿಪ್ರಾಯಪಟ್ಟರು.
ಬ್ಯಾಡಗಿ: ಪ್ರಾಣಿ-ಪಕ್ಷಿಗಳಿಗೂ ಮಾನವನಂತೆ ಬದುಕುವ ಹಾಗೂ ಸ್ವತಂತ್ರವಾಗಿ ಜೀವಿಸುವ ಹಕ್ಕಿದ್ದು, ಅವುಗಳನ್ನು ರಕ್ಷಿಸುವ ಮೂಲಕ ಜೀವಿಸಲು ನಾವು ಸಹಕರಿಸಬೇಕಿದೆ ಎಂದು ಪ್ರಾಣಿದಯಾ ಸಮಿತಿ ಅಧ್ಯಕ್ಷ ಹಾಗೂ ಪರಿಸರ ಚಿಂತಕ ಮುರಿಗೆಪ್ಪ ಶೆಟ್ಟರ ಅಭಿಪ್ರಾಯಪಟ್ಟರು.
ಪಟ್ಟಣದ ತೆರೆದಹಳ್ಳಿ ರಸ್ತೆಯ ಬಳಿಕ ಪುರಸಭೆ ಯುಜಿಡಿ ಘಟಕದ ಬಳಿ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅರಣ್ಯದಲ್ಲಿ ವಾಸಿಸುವ ಪ್ರಾಣಿಗಳಿಂದ ಹಿಡಿದು ಮಾನವನ ಮಧ್ಯೆ ಬದುಕುವ ಎಲ್ಲ ಪ್ರಾಣಿಗಳಿಗೂ ಸ್ವಚ್ಛಂದವಾಗಿ ಜೀವಿಸುವ ಹಕ್ಕಿದೆ. ಆದರೆ ಮನುಷ್ಯರಿಂದ ಅವುಗಳಿಗೆ ಆಗಾಗ ತೊಂದರೆಯಾಗುತ್ತಿರುವ ಹಿನ್ನೆಲೆ ದಾಳಿಗೆ ಯತ್ನಿಸುತ್ತಿವೆ. ಪಟ್ಟಣದ ಬೀದಿನಾಯಿಗಳನ್ನು ಎಲ್ಲ ನಾಗರಿಕರು ರಕ್ಷಿಸಬೇಕು. ಅವುಗಳಿಗೆ ಬದುಕಲು ಬಿಡಬೇಕು ಎಂದು ಹೇಳಿದರು. ಕೆಲವು ನಾಯಿಗಳು ಸಾರ್ವಜನಿಕರಿಗೆ ತೊಂದರೆ ನೀಡಿದ ಕಾರಣಕ್ಕೆ ಉಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಆಧರಿಸಿ ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮೂಲಕ ನಿಯಂತ್ರಿಸಲು ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಿದೆ. ಸರ್ಕಾರ, ಸಾರ್ವಜನಿಕ ಸೇವಾ ಸಂಸ್ಥೆಗಳು ಬೀದಿನಾಯಿಗಳನ್ನು ಸಾಕುವ ಸಂಘ-ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಮಾತನಾಡಿ, ಹಲವು ವರ್ಷಗಳಿಂದ ಬೀದಿನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಪುರಸಭೆಗೆ ಸಾಕಷ್ಟು ದೂರುಗಳು ಬಂದಿವೆ. ಆದರೆ ಸರ್ಕಾರದ ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲಿಸಬೇಕಿದೆ. ಅವುಗಳಿಗೆ ಯಾವುದೇ ಜೀವಹಾನಿ, ತೊಂದರೆ ಮಾಡಲು ಬರುವುದಿಲ್ಲ. ಪಟ್ಟಣದಲ್ಲಿ ಸುಮಾರು 400ಕ್ಕೂ ಅಧಿಕ ಬೀದಿನಾಯಿಗಳಿರಬಹುದೆಂದು ಅಂದಾಜಿಸಲಾಗಿದೆ. ನಾಯಿಗಳನ್ನು ಬಂಧಿಸಿ ಚಿಕಿತ್ಸೆ ನೀಡಲು ಶೆಡ್ ನಿರ್ಮಾಣ, ವೈದ್ಯಕೀಯ ಕೊಠಡಿ ಸೇರಿದಂತೆ ಆಹಾರ, ಬೆಳಕು, ನೀರಿನ ವ್ಯವಸ್ಥೆ ಕಲ್ಪಿಸಿದ್ದೇವೆ. ಇದಕ್ಕಾಗಿ ಟೆಂಡರ್ ಮೂಲಕ ವೈದ್ಯಕೀಯ ತಂಡಕ್ಕೆ ಜವಾಬ್ದಾರಿ ನೀಡಲಾಗಿದ್ದು, ಅವರು ಜವಾಬ್ದಾರಿಯಿಂದ ಕ್ರಮಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಈ ವೇಳೆ ಪಶುವೈದ್ಯರಾದ ಡಾ. ವರುಣ ದೂಪ, ಡಾ.ಎನ್.ಬಿ. ಅಂಗಡಿ, ಡಾ. ಕಾಂತೇಶ ಭಜಂತ್ರಿ, ಪುರಸಭೆ ಸಿಬ್ಬಂದಿ ಚನ್ನಪ್ಪ ಅಂಗಡಿ, ಶ್ರುತಿ ವಾಲೀಕಾರ, ಮಹಾಂತೇಶ ಹಳ್ಳಿ ಇತರರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.