ಕನ್ನಡಪ್ರಭ ವಾರ್ತೆ ತುಮಕೂರು
ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಬಸ್ ನಿಲ್ದಾಣದಿಂದ ಗುಬ್ಬಿ ಗೇಟ್ ಮಾರ್ಗವಾಗಿ ರಾಷ್ಟ್ರಿಯ ಹೆದ್ದಾರಿ ಮೂಲಕ ಶಿರಾ ಗೇಟ್‌ವರೆಗೂ ಪ್ರತಿ 20 ನಿಮಿಷಕ್ಕೊಮ್ಮೆ ನಗರ ಸಾರಿಗೆ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ-೪ರಲ್ಲಿ ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಕಾಮಗಾರಿ ಪ್ರಗತಿ ಕುರಿತ ಸಭೆಯಲ್ಲಿ ಮಾತನಾಡಿದರು.ಪ್ರತಿ ದಿನ ದುಡಿಯುವ ಕಾರ್ಮಿಕ ವರ್ಗದವರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮತ್ತು ತುಮಕೂರು ನಗರದ ಬಸ್ ನಿಲ್ದಾಣದಿಂದ ಗುಬ್ಬಿಗೇಟ್ ಮಾರ್ಗವಾಗಿ ರಾಷ್ಟ್ರಿಯ ಹೆದ್ದಾರಿ ಮೂಲಕ ಶಿರಾಗೇಟ್‌ವರೆಗೂ ಪ್ರತಿ 20 ನಿಮಿಷಕ್ಕೊಮ್ಮೆ ಪ್ರತಿ ದಿನ ಬೆಳಿಗ್ಗೆ 7 ರಿಂದ ನಗರ ಸಾರಿಗೆ ಮಿನಿ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ-4ರ ಸರಪಳಿ 71.29 ಕಿ.ಮೀ.ನಲ್ಲಿ ಅಮಾನಿಕರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಯು ಪ್ರಸ್ತುತ ಫೌಂಡೇಷನ್ ಬೆಡ್‌ವರೆಗೂ ಕಾಂಕ್ರೀಟ್ ಪ್ರಗತಿಯಾಗಿರುವ ಬಗ್ಗೆ ಪರಿಶೀಲಿಸಿದ ಅವರು, ಕಾಮಗಾರಿ ಪೂರ್ಣಗೊಳ್ಳಲು ಸುಮಾರು 120 ದಿನಗಳು ಅಗತ್ಯವಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.ಕೈಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿ ಬಳಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮವಹಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿ ಪೂರ್ಣಗೊಳ್ಳುವವರೆಗೂ ಪ್ರತಿ ದಿನ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು. ಲಘು ವಾಹನ ಸಂಚಾರಕ್ಕೆ ಅವಕಾಶ: ವಾಹನ ದಟ್ಟಣೆ ನಿವಾರಿಸುವ ನಿಟ್ಟನಲ್ಲಿ ನಗರದ ಅಮಾನಿಕೆರೆ ಕೋಡಿ ಹಳ್ಳಕ್ಕೆ ಕೈಗೊಂಡಿರುವ ಸೇತುವೆ ನಿರ್ಮಾಣ ಕಾಮಗಾರಿ ಸರ್ವೀಸ್ ರಸ್ತೆಯನ್ನು ಇನ್ನು7 ದಿನಗಳೊಳಗಾಗಿ ಪೂರ್ಣಗೊಳಿಸಬೇಕು. ಶಿರಾ ಹಾಗೂ ಮಧುಗಿರಿ ಕಡೆಯಿಂದ ತುಮಕೂರು ನಗರಕ್ಕೆ ಬರುವ ಬ್ಯೆಕ್, ಆಟೋದಂತಹ ಎಲ್ಲಾ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವಿಗೆ ಸೂಚಿಸಿದರು. ಲಘು ವಾಹನಗಳ ಸಂಚಾರಕ್ಕೆ ಮುಕ್ತವಾದ ನಂತರ ವ್ಯವಸ್ಥಿತವಾಗಿ ಲಘು ವಾಹನಗಳ ಸುಗಮ ಸಂಚಾರಕ್ಕೆ ಕಲ್ಪಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ವಿದ್ಯುತ್ ದೀಪ ಅಳವಡಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ವರ್ತುಲ ರಸ್ತೆ ಮೂಲಕ ಸಂಚರಿಸುತ್ತಿರುವ ಭಾರಿ ವಾಹನಗಳು ಸುಗಮವಾಗಿ ಸಂಚಾರಿಸುವ ನಿಟ್ಟಿನಲ್ಲಿ ರಸ್ತೆಯನ್ನು ಸಮತಟ್ಟುಗೊಳಿಸಬೇಕು. ಮಳೆ ಬಂದಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿದರು. ಮಹಾನಗರಪಾಲಿಕೆ ಆಯುಕ್ತೆ ಅಶ್ವಿಜ, ಡಿಡಿಎಲ್‌ಆರ್ ನಿರಂಜನ್ ಎಂ.ಎನ್., ಡಿವೈಎಸ್‌ಪಿ ಚಂದ್ರಶೇಖರ್, ಎಇಇ ವಿನಯ್, ಉಪ ವಿಭಾಗಾಧಿಕಾರಿ ಸಪ್ತಶ್ರೀ, ಗೋಟೂರು ಶಿವಪ್ಪ, ತಹಸೀಲ್ದಾರ್ ಎಂ. ಸಿದ್ದೇಶ್, ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.