ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಹಾಪ್‌ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ 24 ರಿಂದ 26ರ ವರೆಗೆ ಮಡಿಕೇರಿಯಲ್ಲಿ ‘ಮಾವು ಮತ್ತು ಹಲಸಿನ ಮೇಳ’ ನಡೆಯಲಿದೆ. ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ನಗರದ ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಮುಖ್ಯ ಕಚೇರಿಯ ಆವರಣದಲ್ಲಿ ಅತ್ಯಪರೂಪದ ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣಿನ ಮೇಳ ನಡೆಯಲಿದೆ. ಬೆಳೆಗಾರರಿಗೆ ತಾವು ಬೆಳೆದ ಹಣ್ಣುಗಳ ಮಾರಾಟಕ್ಕೆ ಅನುವು ಮಾಡಿಕೊಡುವ ಮತ್ತು ವಿವಿಧ ತಳಿಯ, ವಿಭಿನ್ನ ರುಚಿಯ ಮಾವು ಹಲಸನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದರು.24ರಂದು ಬೆಳಗ್ಗೆ 10.30ಕ್ಕೆ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ್ ಮೇಳ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ತೋಟಗಾರಿಕೆ ಉಪನಿರ್ದೇಶಕ ಎಚ್.ಆರ್ ಯೋಗೇಶ್ ಪಾಲ್ಗೊಳ್ಳಲಿದ್ದು, ಸ್ಥಳೀಯ ಬೆಳೆಗಾರರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.ಕೊಡಗು ಜಿಲ್ಲಾ ಹಾಪ್ ಕಾಮ್ಸ್ ತೋಟಗಾರಿಕೆಯ ಇಲಾಖೆಯ ಅಂಗ ಸಂಸ್ಥೆಯಾಗಿದ್ದು, ಇದು ಸಹಕಾರ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಹಾಮಂಡಳಿಯ ಮಾರಾಟ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಮಡಿಕೇರಿ ನಗರದ ಮುಖ್ಯರಸ್ತೆಯಲ್ಲಿರುವ ಅಂಚೆ ಕಚೇರಿಯ ಮುಂಭಾಗದಲ್ಲಿ ಹಾಪ್ ಕಾಮ್ಸ್ ಕೇಂದ್ರ ಕಚೇರಿ ಹಾಗೂ ಮಾರಾಟ ಮಳಿಗೆ ಇದೆ. ಈಗಾಗಲೇ ರೈತರಿಂದ ನಿಗದಿತ ದರದಲ್ಲಿ ಹಣ್ಣು, ತರಕಾರಿ ಖರೀದಿಸಿ ಗ್ರಾಹಕರಿಗೆ ಅರ್ಹ ದರದಲ್ಲಿ ವಿತರಿಸಲಾಗುತ್ತಿದೆ. ಸಂಘದಲ್ಲಿ ಒಟ್ಟು 1333 ಸದಸ್ಯರಿದ್ದು, ಕಳೆದ ವರ್ಷಗಳಿಂದ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.ಮಳೆ ಬೆಳೆಗಾರರ ಸಂಖ್ಯೆ ಇಳಿಮುಖ: ಜಿಲ್ಲಾ ಹಾಪ್ ಕಾಮ್ಸ್ ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ ಮಾತನಾಡಿ, ರಾಜ್ಯದಲ್ಲಿ ಮಾವು ಬೆಳೆಯುವವರ ಸಂಖ್ಯೆ ಶೇ.40 ಕಡಿಮೆಯಾಗಿದೆ. ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲೆಡೆ ಮಾವು ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ನಡೆಯುವ ಮಾವು ಮೇಳದಲ್ಲಿ 10-15 ತಳಿಗಳು ಇರಲಿದೆ. ಅಲ್ಲದೆ ಇದೇ ಸಂದರ್ಭ ಕಸಿಗಿಡಗಳ ಮಾರಾಟ, ವಿವಿಧ ಬಗೆಯ ಮಾವು ಮತ್ತು ಹಲಸು ಹಣ್ಣಿನ ಪ್ರದರ್ಶನ ಕೂಡಾ ನಡೆಯಲಿದೆ ಎಂದರು.ನಿರ್ದೇಶಕರಾದ ಕೆ.ಎಂ.ಮನೋಹರ್, ಹಾಪ್ ಕಾಮ್‌ಸ್‌ನ ಎಸ್.ಪಿ.ಪೊನ್ನಪ್ಪ, ಹೆಚ್.ಎಂ.ಸುಧೀರ್, ಸಿಇಓ ರೇಷ್ಮ ಸುದ್ದಿಗೋಷ್ಠಿಯಲ್ಲಿದ್ದರು.