ಹೊಸಕೋಟೆ: ನಗರದ ಕೆಇಬಿ ಸರ್ಕಲ್ ಬಳಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಸೇರಿದ ಜಾಗದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿ ಮಳಿಗೆಗೆಳನ್ನು ನಗರಸಭೆ, ಕಂದಾಯ ಇಲಾಖೆ ಹಾಗೂ ಪೊಲೀಸರ ಸಹಯೋಗದಲ್ಲಿ ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ಮಾಡಲಾಯಿತು.
ದೂರಿನ ಅನ್ವಯ ಕಂದಾಯ ಇಲಾಖೆಯಿಂದ ಮೂರು ವರ್ಷಗಳ ಹಿಂದೆಯೇ ಸರ್ವೇ ಮಾಡಿಸಿ ಅಂಗಡಿ ಮುಂಗಟ್ಟು ಮಾಲೀಕರಿಗೆ ತೆರವು ಮಾಡಲು 2 ವರ್ಷದ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಆದರೆ ಅಂಗಡಿಗಳ ಮಾಲೀಕರು ಅನವಶ್ಯಕವಾಗಿ ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕೋರ್ಟ್ ಮೊರೆ ಹೋಗಿದ್ಡು ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ ಎನ್ನಲಾಗಿದೆ.
ತೆರವು ಕಾರ್ಯಾಚರಣೆಗೆ ಪ್ರತಿಕ್ರಯಿಸಿದ ತಹಸೀಲ್ದಾರ್ ಟಿ.ಎಸ್.ಶೀತಲ್, ಸರ್ವೇ ನಂ.೩೧೬ರ ಜಾಗವನ್ನು ಈ ಹಿಂದೆ ಪಶು ವೈದ್ಯಕೀಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದರೆ ಕೆಲ ಖಾಸಗಿ ವ್ಯಕ್ತಿಗಳು ಈ ಜಾಗವನ್ನು ಹಲವು ವರ್ಷಗಳಿಂದ ಒತ್ತುವರಿ ಮಾಡಿಕೊಂಡು ಅಂಗಡಿಗಳು ನಿರ್ಮಿಸಿಕೊಂಡು ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯನ್ನುಂಟು ಮಾಡಿದ್ದರು. ಅದ್ದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕಳೆದ ಎರಡು ವರ್ಷಗಳಿಂದ ಎಷ್ಟೋ ಸರ ಒತ್ತುವರಿ ತೆರವು ಮಾಡಿ ಎಂದು ಮನವಿ ಮತ್ತು ನೋಟಿಸ್ ನೀಡಿದ್ದರೂ ತೆರವು ಮಾಡಿರಲಿಲ್ಲ. ಅದಕ್ಕೀಗ ಸರ್ಕಾರಿ ನಿಯಮಗಳಡಿ ಒತ್ತುವರಿ ತೆರವು ಮಾಡಿಸಲಾಗಿದೆ. ಇತ್ತೀಚೆಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಒತ್ತುವರಿಗೊಳಿಸುವಂತೆ ಮನವಿ ಸಲ್ಲಿಸಿದ್ದರಿಂದ ಮೂಲ ದಾಖಲೆಗಳನ್ನು ಪರಿಶೀಲಿಸಿ, ಆರ್‌ಟಿಸಿ ಪಶು ವೈದ್ಯಕೀಯ ಇಲಾಖೆಯ ಹೆಸರಿನಲ್ಲೇ ಇರುವುದನ್ನು ಆಧರಿಸಿ ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದು ಹೇಳಿದರು.ಫೋಟೋ: ೪ ಹೆಚ್‌ಎಸ್‌ಕೆ ಹೊಸಕೋಟೆಯ ಕೆಇಬಿ ವೃತ್ತದ ಬಳಿ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಜೆಸಿಬಿ ಮೂಲಕ ತಹಸೀಲ್ದಾರ್ ಟಿ.ಎಸ್.ಶೀತಲ್, ನಗರಸಭೆ ನಗರಸಭೆ ಆಯುಕ್ತ ನೀಲಲೋಚನ ಪ್ರಭು, ಪಶುಪಾಲನಾ ಇಲಾಖೆಯ ಪಶು ವೈದ್ಯಾಧಿಕಾರಿ ಎಂ.ಕೆ. ಮಂಜುನಾಥ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.