ಸೆಲ್ಫಿ ಪಾಯಿಂಟ್‌ಗೆ ಚಾಲನೆ, ಪೋಸ್ಟರ್‌ ಬಿಡುಗಡೆ

KannadaprabhaNewsNetwork | Published : Jan 25, 2024 2:05 AM

ಸಾರಾಂಶ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಸ್ಥಾಪಿಸಿರುವ ಸೆಲ್ಫಿ ಪಾಟಿಂಗ್‌ಗೆ ಶಾಸಕ ದೊಡ್ಡನಗೌಡ ಪಾಟೀಲ್ ಚಾಲನೆ ನೀಡಿ, ಫೋಟೋ ತೆಗೆಸಿಕೊಂಡಿದ್ದಾರೆ. ಕೊಪ್ಪಳ ಸಿಇಒ ದಂಪತಿ ರಾಹುಲ್‌ ರತ್ನಂ ಪಾಂಡೆ-ಕಾವ್ಯಾ ಚತುರ್ವೇದಿ ಸಹ ಫೋಟೋ ತೆಗೆಸಿಕೊಂಡರು.

ಕೊಪ್ಪಳ: ಹೆಣ್ಣು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ಪೋಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜ. 24ರಂದು ಭಾರತದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿಯೂ ವಿಶೇಷವಾಗಿ ಆಚರಣೆ ಮಾಡಲಾಯಿತು.

ಕೊಪ್ಪಳ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ-2024ರ ನಿಮಿತ್ತ ಸಿದ್ಧಪಡಿಸಲಾದ ಬೇಟಿ ಬಚಾವೋ ಬೇಟಿ ಪಢಾವೋ, ಹೆಣ್ಣು ಇಲ್ಲದಿದ್ದರೆ ಜಗತ್ತೇ ಮಣ್ಣು, ಹೆಣ್ಣನ್ನು ಉಳಿಸಿ ಹೆಣ್ಣನ್ನು ಬೆಳೆಸಿ, ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ, ಎಂಬ ಸಂದೇಶವನ್ನು ಸಾರುವ `ಸೆಲ್ಫಿ ಪಾಯಿಂಟ್’ಗೆ ಕುಷ್ಟಗಿ ಶಾಸಕ ದೊಡ್ಡನಗೌಡ ಹನುಮಗೌಡ ಪಾಟೀಲ ಚಾಲನೆ ನೀಡಿ, ಫೋಟೋ ತೆಗೆಸಿಕೊಂಡರು.

ಫೋಟೋ ತೆಗೆಸಿಕೊಂಡ ಸಿಇಒ ದಂಪತಿ:ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ನಿಮಿತ್ತ `ಸೆಲ್ಫಿ ಪಾಯಿಂಟ್’ನಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಹಾಗೂ ಅವರ ಪತ್ನಿ ಕಾವ್ಯಾ ಚತುರ್ವೇದಿ ಅವರು ತಮ್ಮ ಮಗಳೊಂದಿಗೆ ಫೋಟೋ ತೆಗೆಸಿಕೊಂಡರು.

ಪೋಸ್ಟರ್ ಬಿಡುಗಡೆ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಿದ್ದಪಡಿಸಲಾದ ಹೆಣ್ಣು ಮಕ್ಕಳ ಉಳಿವು, ಅವರ ರಕ್ಷಣೆ ಹಾಗೂ ಶಿಕ್ಷಣ ಕುರಿತಾದ `ನಮ್ಮ ಹೊಣೆಗಾರಿಕೆಗಳು ಮತ್ತು ಜವಾಬ್ದಾರಿಗಳು’ ಎಂಬ ಮಾಹಿತಿಯುಳ್ಳ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿ ನಳಿನ್ ಅತುಲ್ ಬಿಡುಗಡೆಗೊಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

Share this article