ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ಘಟಕಕ್ಕೆ ಚಾಲನೆ

KannadaprabhaNewsNetwork |  
Published : Dec 20, 2025, 02:15 AM IST
19ಎಚ್‌ವಿಆರ್‌3, 3ಎ | Kannada Prabha

ಸಾರಾಂಶ

ಬೀದಿ ನಾಯಿಗಳ ಹಾವಳಿ ತಡೆಗೆ ನಗರಸಭೆ ಮುಂದಾಗಿದ್ದು, ಶುಕ್ರವಾರ ನಗರದ ಗುತ್ತಲ ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ಘಟಕಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಶಸ್ತ್ರಚಿಕಿತ್ಸಾ ಘಟಕಕ್ಕೆ ಚಾಲನೆ ನೀಡಿದರು.

ಹಾವೇರಿ: ಬೀದಿ ನಾಯಿಗಳ ಹಾವಳಿ ತಡೆಗೆ ನಗರಸಭೆ ಮುಂದಾಗಿದ್ದು, ಶುಕ್ರವಾರ ನಗರದ ಗುತ್ತಲ ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ಘಟಕಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಶಸ್ತ್ರಚಿಕಿತ್ಸಾ ಘಟಕಕ್ಕೆ ಚಾಲನೆ ನೀಡಿದರು.ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಹಾವೇರಿ ನಗರಸಭೆ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ಹೆಚ್ಚಾಗಿದ್ದ ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕಲು ಸ್ಥಳೀಯ ನಗರಸಭೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿದೆ.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಪೌರಾಯುಕ್ತ ಎಚ್.ಕಾಂತರಾಜು, ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೧,೫೬೨ಕ್ಕೂ ಹೆಚ್ಚು ನಾಯಿಗಳು ಇವೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೀದಿನಾಯಿಗಳಿಗೆ ಕಡಿವಾಣ ಹಾಕಬೇಕೆಂಬ ಒತ್ತಡವೂ ಸಾರ್ವಜನಿಕರಿಂದ ಕೇಳಿ ಬಂದಿತ್ತು. ಈ ಹಿನ್ನೆಲೆ ಬೀದಿನಾಯಿಗಳಿಗೆ ಕಡಿವಾಣ ಹಾಕಿಸಲು ನಾಲ್ಕೈದು ಬಾರಿ ಟೆಂಡರ್ ಕರೆದರೂ ಯಾರೂ ಬಿಡ್‌ ಮಾಡಿರಲಿಲ್ಲ. ಜಿಲ್ಲಾಧಿಕಾರಿಗಳು ನಗರಸಭೆ ಆಡಳಿತ ವಹಿಸಿಕೊಂಡ ಮೇಲೆ ವೆಟರ್ನರಿ ಇಲಾಖೆ ಸಹಯೋಗದೊಂದಿಗೆ ಕ್ರಮಕ್ಕೆ ಮುಂದಾಗಿದ್ದೇವೆ. ಎಪಿಎಂಸಿಯಲ್ಲಿ ಆಪರೇಶನ್ ಘಟಕ ತೆರೆಯಲಾಗಿದ್ದು, ನಾಯಿಗಳನ್ನು ಸುರಕ್ಷಿತವಾಗಿ ಹಿಡಿದುಕೊಂಡು ಬಂದು ಶಸ್ತ್ರಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಗ್ಗೆ ಮತ್ತು ರಾತ್ರಿ ತಲಾ ಇಬ್ಬರು ಆರೋಗ್ಯ ನಿರೀಕ್ಷಕರನ್ನು ಉಸ್ತುವಾರಿಗೆ ನೇಮಕ ಮಾಡುತ್ತೇವೆ. ನಾಯಿ ಹಿಡಿಯಲಿಕ್ಕೆ ೧೫ ಜನ ಪೌರ ಕಾರ್ಮಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾಯಿಗಳಿಗೆ ಊಟ, ಶಸ್ತ್ರಚಿಕಿತ್ಸೆಗೆ ಬೇಕಾದ ಉಪಕರಣಗಳೆಲ್ಲವನ್ನು ನೋಡಿಕೊಳ್ಳುತ್ತಾರೆ ಎಂದರು.ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಶಿವಯೋಗಿ ಎಲಿ ಮಾತನಾಡಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ವಯ ಬೀದಿನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಆಪರೇಶನ ಮುಗಿದ ಬಳಿಕ ಮೂರು ದಿನ ಆರೈಕೆ ಮಾಡಬೇಕಾಗುತ್ತದೆ. ನಂತರ ಅವುಗಳನ್ನು ಎಲ್ಲಿಂದ ತಂದಿದೆಯೋ ಅಲ್ಲಿಗೆ ಬಿಟ್ಟು ಬರಲಾಗುತ್ತದೆ. ಶಾಲಾ ಕಾಲೇಜುಗಳು, ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಹೀಗೆ ವಿವಿಧೆಡೆ ಹೆಚ್ಚಿರುವ ಬಗ್ಗೆ ಮಾಹಿತಿ ತೆಗೆದುಕೊಂಡು ಒಂದು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ನಂತರ ಆಶ್ರಯ ತಾಣಗಳಲ್ಲಿಟ್ಟು ಸಾಕಬೇಕು. ಈಗಾಗಲೇ ಜಿಲ್ಲೆಯ ಬ್ಯಾಡಗಿ, ರಾಣೇಬೆನ್ನೂರು, ಹಾನಗಲ್‌ನಲ್ಲಿ ತಲಾ ೫೦ರಂತೆ ಯಶಸ್ವಿಯಾಗಿ ಮಾಡಿದ್ದೇವೆ. ಬೇರೆ ಬೇರೆ ಎನ್‌ಜಿಓಗಳು ಬಂದು ಸೌಲಭ್ಯ ನೋಡಿಕೊಂಡು ತಾವೇ ಮಾಡುವುದಾಗಿ ತಿಳಿಸಿದ್ದರಿಂದ ಅವರಿಗೆ ನಿರ್ವಹಣೆಗೆ ವ್ಯವಸ್ಥೆ ಮಾಡಿದೆ. ಒಂದು ಬೀದಿನಾಯಿ ಶಸ್ತ್ರಚಿಕಿತ್ಸೆಗೆ ಸರ್ಕಾರ ೧,೬೫೦ ರು.ಕೊಡುತ್ತದೆ. ಈ ಬಗ್ಗೆ ನಗರಸಭೆ, ಪುರಸಭೆ, ಪಪಂ, ಗ್ರಾಪಂಗಳ ಮೇಲೆ ಹೊಣೆಗಾರಿಕೆ ಹೆಚ್ಚಿದೆ ಎಂದು ತಿಳಿಸಿದರು.ಮೂಲ ಸೌಕರ್ಯ ವ್ಯವಸ್ಥೆ: ಬೀದಿನಾಯಿಗಳ ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಎಪಿಎಂಸಿ ಶಸ್ತ್ರಚಿಕಿತ್ಸಾ ಘಟಕದಲ್ಲಿ ಕಲ್ಪಿಸಲಾಗಿದೆ. ಆಪರೇಶನ್ ರೂಂ., ಐಸಿಯು ಮಾದರಿಯಲ್ಲಿ ಎಸಿ ವ್ಯವಸ್ಥೆ, ಆಪರೇಶನ್ ಬಳಿಕ ಆರೈಕೆಗೆ ೧೨ ಶೆಲ್ಟರ್‌ಗಳು, ಕುಡಿಯುವ ನೀರು, ಆಹಾರ ವ್ಯವಸ್ಥೆ, ನಾಯಿಗಳು ಹೊರಬರದಂತೆ ತಂತಿ ಬೇಲಿ, ಬೆಳಕಿನ ವ್ಯವಸ್ಥೆ ಇತ್ಯಾದಿ ಸೌಲಭ್ಯ ಕಲ್ಪಿಸಿದೆ. ಜತೆಗೆ ಶಸ್ತ್ರಚಿಕಿತ್ಸೆ ಮಾಡುವ ವೈದ್ಯಕೀಯ ಸಿಬ್ಬಂದಿಗಳಿಗೂ ವಿಶ್ರಾಂತಿ ಕೊಠಡಿ, ಆಶ್ರಯ ತಾಣದ ವ್ಯವಸ್ಥೆಯೂ ಇದೆ.ಸುಪ್ರೀಂ ಕೋರ್ಟ್ ನಿರ್ದೇಶನ ಪ್ರಕಾರ ಬೀದಿನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಈಗಾಗಲೇ ಬ್ಯಾಡಗಿ, ರಾಣೇಬೆನ್ನೂರು, ಹಾನಗಲ್‌ನಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಹಾವೇರಿಯಲ್ಲೂ ಕೂಡ ಮೊದಲನೇ ದಿನ ಮಟನ್ ಮಾರ್ಕೆಟ್‌ನಲ್ಲಿ ಕಾರ್ಯಾಚರಣೆ ನಡೆಸಿ ಬೀದಿನಾಯಿಗಳನ್ನು ಹಿಡಿದು ತಂದು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಬುದ್ಧ ಭಾರತ ನಿರ್ಮಾಣ ಕನಸು ಕಂಡವರು ಅಂಬೇಡ್ಕರ್‌: ಪ್ರೊ. ವಿಶ್ವನಾಥ
ಅಕ್ಷಯ ಪಾತ್ರೆಗೆ ಆಧುನಿಕ ತಂತ್ರಜ್ಞಾನದ ಯಂತ್ರ