ಕನ್ನಡಪ್ರಭ ವಾರ್ತೆ ಬೆಂಗಳೂರು
ಪಂತರ್ ಪಾಳ್ಯದ ಗುಣ (26) ಕೊಲೆಯಾದ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತನ ಸ್ನೇಹಿತ ವೇಣು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತ ವಿನೋದ್ ಬಂಧನವಾಗಿದೆ. ಮನೆ ಸಮೀಪ ಭಾನುವಾರ ರಾತ್ರಿ ಈ ಮೂವರು ಸ್ನೇಹಿತರು ಸೇರಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಬಿಎನಲ್ಲಿ ತ್ಯಾಜ್ಯ ವಿಲೇವಾರಿ ವಾಹನ ಚಾಲಕರಾಗಿದ್ದ ಗುಣ, ವೇಲು ಹಾಗೂ ವಿನೋದ್ ಸ್ನೇಹಿತರಾಗಿದ್ದು, ಪಂತರ್ ಪಾಳ್ಯದಲ್ಲಿ ಅವರು ನೆಲೆಸಿದ್ದರು. ಕಸದ ವಾಹನವಲ್ಲದೆ ಖಾಸಗಿಯಾಗಿ ಸಹ ಅವರು ಆಟೋ ಹೊಂದಿದ್ದರು. ತನ್ನ ಆಟೋದ ಗ್ಲಾಸ್ ಅನ್ನು ಒಡೆದು ಹಾಕಿದ್ದಾರೆ ಎಂದು ಗೆಳೆಯರ ವೇಲು ಹಾಗೂ ಗುಣ ಜತೆ ಭಾನುವಾರ ರಾತ್ರಿ ವಿನೋದ್ ಜಗಳ ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ತನ್ನ ಗೆಳೆಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಗುಣ ಮೃತಪಟ್ಟರೆ, ವೇಲು ತೀವ್ರವಾಗಿ ಗಾಯಗೊಂಡಿದ್ದಾನೆ. ಗಾಯಾಳು ಚಿಕಿತ್ಸೆಗೆ ಸ್ಪಂದಿಸಿದ್ದು, ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.