ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು

KannadaprabhaNewsNetwork |  
Published : Dec 10, 2025, 03:30 AM ISTUpdated : Dec 10, 2025, 05:46 AM IST
Bengaluru Namma Metro

ಸಾರಾಂಶ

ಸದ್ಯ 96 ಕಿಮೀ ಉದ್ದದ ನಮ್ಮ ಮೆಟ್ರೋ ವ್ಯಾಪ್ತಿ ಮುಂದಿನ ಐದು ವರ್ಷದಲ್ಲಿ 175 ಕಿಮೀ ವಿಸ್ತಾರವಾಗಲಿದ್ದು, ಇದಕ್ಕೆ ತಕ್ಕಂತೆ ಪ್ರಯಾಣಿಕರ ಸಂಚಾರಕ್ಕೆ ಹೆಚ್ಚುವರಿ 100 ಕ್ಕೂ ಹೆಚ್ಚು ರೈಲುಗಳು ಸೇರ್ಪಡೆಯಾಗಲಿವೆ.

 ಬೆಂಗಳೂರು :  ಸದ್ಯ 96 ಕಿಮೀ ಉದ್ದದ ನಮ್ಮ ಮೆಟ್ರೋ ವ್ಯಾಪ್ತಿ ಮುಂದಿನ ಐದು ವರ್ಷದಲ್ಲಿ 175 ಕಿಮೀ ವಿಸ್ತಾರವಾಗಲಿದ್ದು, ಇದಕ್ಕೆ ತಕ್ಕಂತೆ ಪ್ರಯಾಣಿಕರ ಸಂಚಾರಕ್ಕೆ ಹೆಚ್ಚುವರಿ 100 ಕ್ಕೂ ಹೆಚ್ಚು ರೈಲುಗಳು ಸೇರ್ಪಡೆಯಾಗಲಿವೆ.

ಈಗಿನ ನೇರಳೆ, ಹಸಿರು ಮಾರ್ಗ ಹೊರತುಪಡಿಸಿ ಉಳಿದೆಲ್ಲ ಮಾರ್ಗಗಳಿಗೂ ಚಾಲಕ ರಹಿತವಾಗಿ ಓಡುವ ರೈಲುಗಳನ್ನೆ ಬಿಎಂಆರ್‌ಸಿಎಲ್‌ ಅಳವಡಿಸಿಕೊಳ್ಳುತ್ತಿರುವುದು ವಿಶೇಷ. ಸದ್ಯ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಮಾತ್ರ ಚಾಲಕ ರಹಿತ ರೈಲುಗಳಿವೆ. ಸದ್ಯ ಇಲ್ಲಿ ಚಾಲಕರಿಂದಲೆ ರೈಲು ಚಾಲನೆ ಆಗುತ್ತಿದ್ದರೂ ಹಂತಹಂತವಾಗಿ ಇದು ಚಾಲಕ ರಹಿತವಾಗಿ ಓಡಲಿದೆ.

ಇದರಂತೆ ಮುಂದಿನ ಕಾಳೇನ ಅಗ್ರಹಾರ-ನಾಗರವಾರ ಸಂಪರ್ಕಿಸುವ ಗುಲಾಬಿ ಮಾರ್ಗ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗ, ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ ಸಂಪರ್ಕಿಸುವ ಹಂತ ಹಾಗೂ ಹೊಸಹಳ್ಳಿಯಿಂದ ಕಡಬಗೆರೆ ಕಿತ್ತಳೆ ಮಾರ್ಗ ಮತ್ತು ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ಕೆಂಪು ಮಾರ್ಗದಲ್ಲಿ ಚಾಲಕ ರಹಿತ ರೈಲುಗಳನ್ನು ಓಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮವು ನಿರ್ಧರಿಸಿದೆ.

ಒಟ್ಟು 64 ರೈಲುಗಳಿವೆ

ನಮ್ಮ ಮೆಟ್ರೋ ಬಳಿ ಸದ್ಯ ಹಸಿರು, ನೇರಳೆ, ಹಳದಿ ಮಾರ್ಗ ಸೇರಿ ಒಟ್ಟು 64 ರೈಲುಗಳಿವೆ. ಆ ಪೈಕಿ ಹಸಿರು, ನೇರಳೆ ಮಾರ್ಗದಲ್ಲಿ 58 ರೈಲುಗಳಿದ್ದು, ಇವು ಡಿಟಿಜಿ (ಡಿಸ್ಟೆನ್ಸ್‌ ಟು ಗೋ ) ತಂತ್ರಜ್ಞಾನ ಅಂದರೆ ಚಾಲಕ ಸಹಿತವಾಗಿ ಓಡುವ ಸಿಗ್ನಲಿಂಗ್‌ ವ್ಯವಸ್ಥೆಯ ರೈಲುಗಳಾಗಿವೆ. ಇವೆರಡು ಮಾರ್ಗಕ್ಕೆ ಹೊಸದಾಗಿ 21 ಹೊಸ ರೈಲು ಸೇರ್ಪಡೆ ಆಗಲಿದ್ದು, ಇವು ಡಿಟಿಜಿ ತಂತ್ರಜ್ಞಾನದ ರೈಲಾಗಿರಲಿವೆ.

ಇನ್ನು ಹಳದಿ ಮಾರ್ಗದಲ್ಲಿ ಸಿಬಿಟಿಸಿ ( ಕಮ್ಯುನಿಕೇಶನ್‌ ಬೇಸ್ಡ್‌ ಟ್ರೈನ್‌ ಕಂಟ್ರೋಲ್‌) ತಂತ್ರಜ್ಞಾನ ಅಂದರೆ ಚಾಲಕ ರಹಿತವಾಗಿ ಓಡುವ ಸಾಮರ್ಥ್ಯದ 6 ರೈಲುಗಳು ಹಾಲಿ ಕಾರ್ಯಾಚರಣೆ ನಡೆಸುತ್ತಿವೆ. ಈ ಮಾರ್ಗಕ್ಕೆ ಕಲ್ಕತ್ತಾದ ಟಿಟಾಘರ್‌ ರೈಲ್‌ ಸಿಸ್ಟ್ಂ ಲಿ. ಕಂಪನಿಯಿಂದ 9 ರೈಲುಗಳು ಬರಬೇಕಿವೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜತೆಗೆ ಈಚೆಗೆ ಬಿಇಎಂಎಲ್‌ ಜತೆಗೆ ಒಪ್ಪಂದ ಮಾಡಿಕೊಂಡಿರುವ ಬಿಎಂಆರ್‌ಸಿಎಲ್‌ ಈ ಮಾರ್ಗಕ್ಕೆ ಆರು ರೈಲು ನೀಡುವಂತೆ ಒಪ್ಪಂದ ಮಾಡಿಕೊಂಡಿದೆ. ಅಲ್ಲಿಗೆ ಹಳದಿ ಮಾರ್ಗದಲ್ಲಿ 21 ರೈಲುಗಳು ಓಡಲಿವೆ.

ಮುಂದಿನ ವರ್ಷ ಆರಂಭವಾಗಬೇಕಿರುವ ಗುಲಾಬಿ ಮಾರ್ಗ ಸಂಪರ್ಕಿಸುವ ಮಾರ್ಗಗಳಿಗೆ 60 ರೈಲುಗಳನ್ನು ಒದಗಿಸುವಂತೆ ಬಿಎಂಎಲ್‌ಗೆ ಕಾರ್ಯಾದೇಶ​​ ನೀಡಲಾಗಿದೆ. ಬಿಇಎಂಎಲ್‌ ಶೀಘ್ರ ಸಿಬಿಟಿಸಿ ತಂತ್ರಜ್ಞಾನದ ಮೊದಲ ಮಾದರಿ (ಪ್ರೊಟೊಟೈಪ್‌) ರೈಲನ್ನು ಶೀಘ್ರವೇ ಬಿಡುಗಡೆ ಮಾಡುವ ಸಿದ್ಧತೆ ಮಾಡಿಕೊಂಡಿದೆ. 

 ಯಾವ ಮಾರ್ಗಕ್ಕೆ ಎಷ್ಟು ಹೊಸ ರೈಲು? 

 ಹಸಿರು​​ ಮತ್ತು ನೇರಳೆ​ ಮಾರ್ಗ 21 

ಹಳದಿ ಮಾರ್ಗ 15

ನೀಲಿ ಮಾರ್ಗ 37

ಗುಲಾಬಿ ಮಾರ್ಗ 33

( ನೀಲಿ ಮಾರ್ಗ -2ಎ ಸಿಲ್ಕ್ ಬೋರ್ಡ್ - ಕೆಆರ್ ಪುರ 16, ಮತ್ತು 2ಬಿ - ಕೆ.ಆರ್. ಪುರ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 21 ರೈಲು)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು