ಕಾರವಾರ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ವಿಶ್ವ ಹವ್ಯಕ ಸಮ್ಮೇಳನಕ್ಕೆ ಜ್ಯೋತಿಯನ್ನು ತರಲಾಗುತ್ತಿದ್ದು, ೨೩೦೦ ಕಿಮೀ ದೂರದಿಂದ ತರಲಿರುವ ಜ್ಯೋತಿಯಿಂದ ದೀಪ ಬೆಳಗುವ ಮೂಲಕ ಡಿ. ೨೭ರಂದು ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನೆ ನಡೆಯಲಿದೆ.
ಇದಕ್ಕೂ ಪೂರ್ವ ಉತ್ತರ ಕನ್ನಡದ ಹೈಗುಂದದಲ್ಲಿರುವ ದುರ್ಗಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ಅಹಿಚ್ಛತ್ರ ಜ್ಯೋತಿಯ ಯಾತ್ರೆ ಆರಂಭವಾಯಿತು. ವಿ.ಡಿ. ಭಟ್ ಮತ್ತು ತಂಡದವರು ಹೈಗುಂದದಿಂದ ಯಾತ್ರೆಯನ್ನು ಆರಂಭಿಸಿ, ಉತ್ತರ ಪ್ರದೇಶದ ಅಹಿಚ್ಛತ್ರಕ್ಕೆ ತೆರಳಿ ಅಲ್ಲಿಂದ ಅಖಂಡ ಜ್ಯೋತಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ.ಶತಮಾನಗಳ ಹಿಂದೆ ದ್ರಾವಿಡ ಬ್ರಾಹ್ಮಣ ಪಂಗಡಕ್ಕೆ ಸೇರಿದ ಹವ್ಯಕರ ಪೂರ್ವಜರ ಕುಟುಂಬಗಳನ್ನು ಕದಂಬ ವಂಶದ ದೊರೆ ರಾಜಾ ಮಯೂರವರ್ಮ ಯಾಗಾದಿ ಕಾರ್ಯಕ್ಕಾಗಿ ಅಹಿಚ್ಛತ್ರದಿಂದ ಪುನಃ ಬನವಾಸಿಗೆ ಕರೆದುಕೊಂಡು ಬಂದನು ಎನ್ನುವುದು ಇತಿಹಾಸ. ಹಾಗಾಗಿ ಅಹಿಚ್ಛತ್ರದಿಂದ ಜ್ಯೋತಿಯನ್ನು ತಂದು, ಐತಿಹಾಸಿಕ ವಿಶ್ವ ಹವ್ಯಕ ಸಮ್ಮೇಳನಕ್ಕೆ ಚಾಲನೆ ನೀಡಲಾಗುತ್ತಿದ್ದು, ಐತಿಹಾಸಿಕ ಕಾರ್ಯಕ್ರಮದಲ್ಲಿ ಇದು ಚರಿತಾರ್ಹ ಕಾರ್ಯಕ್ರಮವಾಗಲಿದೆ. ಡಿ. ೨೭ರಿಂದ ಡಿ. ೨೯ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ.ವಿಶ್ವ ಹವ್ಯಕ ಸಮ್ಮೇಳನದಲ್ಲಿ ಜಿ.ಎನ್. ಹೆಗಡೆಗೆ ಪ್ರಶಸ್ತಿ
ಯಲ್ಲಾಪುರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ. ೨೭, ೨೮, ೨೯ರಂದು ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ೮೧ ಶ್ರೇಷ್ಠ ಸಾಧಕರಿಗೆ ಹವ್ಯಕ ಸಾಧಕರತ್ನ ಪ್ರಶಸ್ತಿ ನೀಡಲಾಗುವುದು. ಇವರಲ್ಲಿ ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಒಬ್ಬರಾಗಿದ್ದಾರೆ.