ಆಸ್ತಿ ತೆರಿಗೆ ಕಳ್ಳರ ಪತ್ತೆಗೆ ಡ್ರೋನ್‌ ಸರ್ವೇ

KannadaprabhaNewsNetwork |  
Published : Feb 27, 2026, 01:15 AM IST
ಕಕ | Kannada Prabha

ಸಾರಾಂಶ

ಚಿಕ್ಕಮಗಳೂರುಕೇಂದ್ರ ಸರ್ಕಾರದ ನಕ್ಷಾ ಯೋಜನೆಯಡಿ ನಗರದ ಎಲ್ಲಾ ಆಸ್ತಿಗಳನ್ನು ಡ್ರೋಣ್‌ ಆಧಾರಿತ ಸರ್ವೇ ನಡೆಸುವ ಮೂಲಕ ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿದವರ ಪತ್ತೆಗೆ ನಗರ ಸಭೆ ಮುಂದಾಗಿದೆ.

ನಕ್ಷಾ ಯೋಜನೆಯಡಿ ನಗರದ ಎಲ್ಲಾ ಆಸ್ತಿಗಳನ್ನು ಡ್ರೋಣ್‌ ಆಧಾರಿತ ಸರ್ವೇ ।

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕೇಂದ್ರ ಸರ್ಕಾರದ ನಕ್ಷಾ ಯೋಜನೆಯಡಿ ನಗರದ ಎಲ್ಲಾ ಆಸ್ತಿಗಳನ್ನು ಡ್ರೋಣ್‌ ಆಧಾರಿತ ಸರ್ವೇ ನಡೆಸುವ ಮೂಲಕ ಸುಳ್ಳು ಹಾಗೂ ತಪ್ಪು ಮಾಹಿತಿ ನೀಡಿದವರ ಪತ್ತೆಗೆ ನಗರ ಸಭೆ ಮುಂದಾಗಿದೆ.

ಭೂ ಸಂಪನ್ಮೂಲ ಇಲಾಖೆ ನಗರ ಭೂ ದಾಖಲೆಗಳ ಸೃಷ್ಟಿ ಮತ್ತು ನಿರ್ವಹಣೆಯಲ್ಲಿ ಕ್ರಾಂತಿಯನ್ನುಂಟು ಮಾಡಲು ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮದಡಿ ‘ನಕ್ಷಾ’ ನಗರ ಜನವಸತಿ ಪ್ರದೇಶದ ರಾಷ್ಟ್ರೀಯ ಭೂಗೋಳ ಜ್ಞಾನ ಆಧಾರಿತ ಭೂ ಸಮೀಕ್ಷೆ ಯೋಜನೆಯನ್ನು ಪ್ರಾರಂಭಿಸಿದೆ.

ಈ ಸಮೀಕ್ಷೆಯಿಂದ ಆಸ್ತಿಯ 3ಡಿ ಚಿತ್ರ, ಆಸ್ತಿಯ ವಿವರ, ಮಾಲೀಕರ ಹೆಸರು, ವಿಳಾಸ ಸೇರಿದಂತೆ ಎಲ್ಲವೂ ಡಿಜಿಟಲ್‌ ರೂಪದಲ್ಲಿ ಮಾಲೀಕರಿಗೆ ಲಭ್ಯವಾಗಲಿದೆ. 370.67 ಚದರ ಕಿ.ಮೀ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣದ ನಗರ ಸ್ಥಳೀಯ ಸಂಸ್ಥೆಗಳನ್ನು ಈ ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ದೇಶದ 26 ರಾಜ್ಯ ಹಾಗೂ 3 ಕೇಂದ್ರಾಡಳಿತ ಪ್ರದೇಶದ ಒಟ್ಟು 152 ನಗರಗಳ ಸ್ಥಳೀಯ ಸಂಸ್ಥೆಯಲ್ಲಿ ಸಮೀಕ್ಷೆ ನಡೆಸ ಲಾಗುತ್ತಿದೆ. ರಾಜ್ಯದ ಚಿಕ್ಕಮಗಳೂರು ನಗರ ಸಭೆ ಸೇರಿದಂತೆ ರಾಜ್ಯದ 10 ನಗರಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಕಳೆದ 2025ರ ಫೆಬ್ರವರಿಯಿಂದ ಈ ಕಾರ್ಯ ನಡೆಸಲಾಗುತ್ತಿದ್ದು, ಮುಂಬರುವ ಮಾರ್ಚ್‌ ಅಂತ್ಯದೊಳಗೆ ಸಮೀಕ್ಷೆ ಪೂರ್ಣ ಗೊಳಿಸುವುದಕ್ಕೆ ಚಿಕ್ಕಮಗಳೂರು ನಗರ ಸಭೆ ತೀರ್ಮಾನಿಸಿದೆ.

5 ವಾರ್ಡ್ ಅಷ್ಟೇ ಬಾಕಿ

ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಈ ಪೈಕಿ ಈಗಾಗಲೇ ಬಹುತೇಕ 26 ವಾರ್ಡ್‌ಗಳಲ್ಲಿ ಡ್ರೋಣ್‌ ಸರ್ವೇ ಕಾರ್ಯಪೂರ್ಣಗೊಳಿಸಲಾಗಿದೆ. ಬಾಕಿ ಇರುವ ಐದು ವಾರ್ಡ್‌ಗಳಲ್ಲಿ ಸಮೀಕ್ಷೆ ಕಾರ್ಯ ಮುಂದುವರಿಸಿದೆ. ಉಳಿದಂತೆ ಕೆಲವು ವಾರ್ಡ್‌ಗಳಲ್ಲಿ ಆಸ್ತಿ ಮಾಲೀಕರ ದಾಖಲೆ ಪಡೆದು ಈ ಯೋಜನೆಯಡಿ ಡಿಜಿಟಲೀಕರಣ ಸಹ ನಡೆಸಿದ್ದು, ಮಾರ್ಚ್‌ ಅಂತ್ಯ ದೊಳಗೆ ಸಮೀಕ್ಷೆ ಸಂಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಆಸ್ತಿ ತೆರಿಗೆ ₹20 ರಿಂದ 58 ಕೋಟಿ ಏರಿಕೆ

ನಗರದ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರಕ್ಕೂ ಅಧಿಕ ಆಸ್ತಿಗಳಿವೆ ಎಂದು ಅಂದಾಜಿಸಲಾಗಿದೆ. ಈ ಆಸ್ತಿಗಳಿಗೆ ಪ್ರಸ್ತುತ ನಗರ ಸಭೆಗೆ ವಾರ್ಷಿಕ ₹20 ಕೋಟಿ ಯಷ್ಟು ಆಸ್ತಿ ತೆರಿಗೆ ಸಂಗ್ರಹದ ನಿರೀಕ್ಷೆಇದೆ. ನಕ್ಷಾ ಸಮೀಕ್ಷೆ ಪೂರ್ಣಗೊಂಡ ನಗರದಲ್ಲಿ ತಪ್ಪು ಹಾಗೂ ಸುಳ್ಳು ಆಸ್ತಿ ವಿವರ ನೀಡಿದ ಮಾಲೀಕರು ಪತ್ತೆ ಆಗಲಿದ್ದು, ಆಗ ವಾರ್ಷಿಕ ಆಸ್ತಿ ತೆರಿಗೆ ಸಂಗ್ರಹ ಮೊತ್ತ ಬರೋಬ್ಬರಿ ₹58.30 ಕೋಟಿಗೆ ಏರಿಕೆ ಆಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಪ್ರಿಲ್‌ ನಿಂದ ಪರಿಷ್ಕೃತ ಡಿಮ್ಯಾಂಡ್‌ ನೋಟಿಸ್‌ ವಿತರಣೆ

ಮಾರ್ಚ್‌ ಅಂತ್ಯದೊಳಗೆ ಸಮೀಕ್ಷೆ, ದತ್ತಾಂಶ ಸಂಗ್ರಹಣೆ ಸೇರಿದಂತೆ ಎಲ್ಲಾ ಕಾರ್ಯಪೂರ್ಣಗೊಂಡು ನಗರದ ಎಲ್ಲ ಆಸ್ತಿ ಮಾಲೀಕರ ವಿವರ ಲಭ್ಯವಾಗಲಿದೆ. ಆ ಮಾಹಿತಿ ಆಧರಿಸಿ ಆಸ್ತಿ ಮಾಲೀಕರಿಗೆ ಡಿಮ್ಯಾಂಡ್‌ ನೋಟ್‌ ನೀಡಲಾಗುವುದು. ಈವರೆಗೆ ಸರಿಯಾದ ಆಸ್ತಿ ವಿಸ್ತೀರ್ಣ ಘೋಷಣೆ ಮಾಡಿ ಆಸ್ತಿ ತೆರಿಗೆ ಪಾವತಿಸಿದವರಿಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದರೆ ಪರಿಷ್ಕೃತ ಆಸ್ತಿ ತೆರಿಗೆ ಪಾವತಿಸಬೇಕಿದೆ ಎಂದು ನಗರಸಭೆ ಪೌರಾಯುಕ್ತ ಬಸವರಾಜ್‌ ತಿಳಿಸಿದರು.

---ಬಾಕ್ಸ್‌---

ಮಾಲೀಕರಿಗೆ ಆಸ್ತಿ ವಿವರದ ಸ್ಮಾರ್ಟ್‌ ಕಾರ್ಡ್‌ ವಿತರಣೆ

ನಕ್ಷೆ ಕೇವಲ ಆಡಳಿತ ಉದ್ದೇಶಕ್ಕೆ ಮಾತ್ರವಲ್ಲದೇ ಆಸ್ತಿ ಮಾಲೀಕರಿಗೂ ಅನುಕೂಲ. ಆಸ್ತಿಯ ಸಂಪೂರ್ಣ ದಾಖಲೆಗಳು ಡಿಜಿಟಲೀರಣ ಆಗಲಿವೆ. ಸಮೀಕ್ಷೆ ಪೂರ್ಣಗೊಂಡ ಬಳಿಕೆ ಆಸ್ತಿ ಮಾಲೀಕರಿಗೆ ನೀಡುವ ಕ್ಯೂಆರ್‌ ಕೋಡ್‌ ಇರುವ ಸ್ಮಾರ್ಟ್‌ ಕಾರ್ಡ್‌ ಸ್ಕ್ಯಾನ್‌ ಮಾಡಿದರೆ ಆಸ್ತಿಯ 3 ಡಿ ಚಿತ್ರದಿಂದ ಮಾಲೀಕರ ಹೆಸರು, ಪಿಐಡಿ ಸಂಖ್ಯೆ, ವಿಳಾಸ, ಕಂದಾಯ ಎಷ್ಟು ಪಾವತಿಸಲಾಗಿದೆ. ಕಟ್ಟಡ ಎಷ್ಟು ಮಹಡಿ ಹೊಂದಿದೆ ಎಂಬ ಎಲ್ಲ ಮಾಹಿತಿ ಕೈಬೆರಳಿನಲ್ಲಿ ಸಿಗಲಿದೆ. ಹೀಗಾಗಿ, ಸಮೀಕ್ಷೆ ಭಾಗವಾಗಿ ದಾಖಲಾತಿ ಸಂಗ್ರಸಲು ಅಧಿಕಾರಿ ಬಂದರೆ ವಿವರ ನೀಡುವಂತೆ ನಗರಸಭೆ ಪೌರಾಯುಕ್ತರು ಮನವಿ ಮಾಡಿದ್ದಾರೆ.

---ಬಾಕ್ಸ್‌--

ಮೂರು-ಹಂತದ ಸಮೀಕ್ಷೆ

1. ಡ್ರೋನ್ ಸಮೀಕ್ಷೆ ಮತ್ತು ಡೇಟಾ ಸಂಗ್ರಹಣೆ ಸಮೀಕ್ಷೆ ಪ್ರದೇಶವನ್ನು ಆಯ್ಕೆಮಾಡಿ ಮತ್ತು ಡ್ರೋನ್ ಸಮೀಕ್ಷೆಗಾಗಿ ಹಾರಾಟ ಯೋಜನೆಯನ್ನು ರಚಿಸಲು ಡ್ರೋನ್‌ಗಳು ಚಿತ್ರಗಳನ್ನು ಸೆರೆಹಿಡಿಯುತ್ತವೆ. ಇದರಿಂದ ಡೇಟಾ ಹೊರತೆಗೆಯಲಾಗುತ್ತದೆ.

2. ಕ್ಷೇತ್ರ ಸಮೀಕ್ಷೆ ಮತ್ತು ದತ್ತಾಂಶ ಪರಿಶೀಲನೆ ಆಸ್ತಿ ತೆರಿಗೆ, ಮಾಲೀಕತ್ವ ಮತ್ತು ನೋಂದಣಿ ದಾಖಲೆಗಳ ಭೂ ಪರಿಶೀಲನೆ. 2ಡಿ/3ಡಿ ಮಾದರಿ ರಚಿಸಲಾಗುತ್ತದೆ. ಕರಡು ಭೂ ಮಾಲೀಕತ್ವದ ವಿವರಗಳನ್ನು ಪ್ರಕಟಿಸಲಾಗುತ್ತದೆ.

3. ಸಾರ್ವಜನಿಕ ವಿಮರ್ಶೆ ಮತ್ತು ಅಂತಿಮಗೊಳಿಸುವಿಕೆ ಸಾರ್ವಜನಿಕ ಮತ್ತು ಆಸ್ತಿ ಮಾಲೀಕರ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುತ್ತದೆ. ಕುಂದುಕೊರತೆ ಪರಿಹಾರ ಮಾಡಿ, ಅಂತಿಮ ನಕ್ಷೆಗಳನ್ನು ಪ್ರಕಟಿಸಲಾಗುತ್ತದೆ.--- ಕೋಟ್‌ ---

ನಗರ ಸಭೆ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ನಕ್ಷಾ ಯೋಜನೆಯಡಿ ಡ್ರೋಣ್‌ ಸರ್ವೇ ಮಾಡಲಾಗುತ್ತಿದ್ದು, ಈ ಮೂಲಕ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಆಸ್ತಿ ಮಾಲೀಕರಿಗೆ ಆಸ್ತಿಯ ಸ್ಮಾರ್ಟ್‌ ಕಾರ್ಡ್‌ ನೀಡಲಾಗುವುದು. ನಗರ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಸಂಪೂರ್ಣ ವಿವರ ಲಭ್ಯವಾಗಲಿದೆ. ತಪ್ಪು, ಸುಳ್ಳು ವಿವರ ನೀಡಿದ ಆಸ್ತಿ ಮಾಲೀಕರು ಪತ್ತೆ ಆಗಲಿದ್ದಾರೆ. ಈ ಸರ್ವೇ ಪೂರ್ಣಗೊಂಡರೆ ಕೇಂದ್ರ ಸರ್ಕಾರದಿಂದ ಸಹ ನಗರ ಸಭೆಗೆ ಸಹಾಯಧನ ಲಭ್ಯವಾಗಲಿದೆ.

- ಬಸವರಾಜ್‌, ಪೌರಾಯುಕ್ತರು, ನಗರಸಭೆ ಚಿಕ್ಕಮಗಳೂರು

---ಬಾಕ್ಸ್‌ ----

ಏನಿದು ನಕ್ಷಾ ಯೋಜನೆ?

ಗ್ರಾಮೀಣಾಭಿವೃದ್ಧಿ ಸಚಿವಾಲಯದಡಿಯಲ್ಲಿರುವ ಭೂ ಸಂಪನ್ಮೂಲ ಇಲಾಖೆಯ ಉಪಕ್ರಮವಾದ ನಗರ ಜನವಸತಿ ಪ್ರದೇಶದ ರಾಷ್ಟ್ರೀಯ ಭೂಗೋಳ ಜ್ಞಾನ ಆಧಾರಿತ ಭೂ ಸಮೀಕ್ಷೆ (ನಕ್ಷಾ) ಭೂಮಾಲೀಕತ್ವದ ನಿಖರ ದಾಖಲಾತಿ ರಚಿಸಲು ಮತ್ತು ನವೀಕರಿಸಲು, ಭೂ ವಿವಾದಗಳನ್ನು ಪರಿಹರಿಸಲು, ಆಸ್ತಿ ದಾಖಲೆ ಸುಗಮಗೊಳಿಸಲು ಮತ್ತು ನಗರ ಯೋಜನೆ ಹೆಚ್ಚಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಸಂಪೂರ್ಣ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಸ್‌ ಕೋರ್ಸ್‌ ಸ್ಥಳಾಂತರಕ್ಕೆ ಪ್ರಭಲ ವಿರೋಧ
ವೈಜ್ಞಾನಿಕ ಚಿಂತನೆ ಬದುಕಿನ ಭಾಗವಾಗಿರಬೇಕು