ಹಿಮೋಫಿಲಿಯಾ ರೋಗಿಗಳಿಗೆ ಚಿಕಿತ್ಸೆ, ಆ್ಯಂಬುಲೆನ್ಸ್‌ ಸೇವೆ

Published : Feb 26, 2026, 09:43 AM IST
DK Shivakumar

ಸಾರಾಂಶ

‘ಹಿಮೋಫಿಲಿಯಾ ರೋಗಿಗಳಿಗಾಗಿ ದೇಶದಲ್ಲಿ ರಾಜ್ಯವೇ ಮೊದಲ ಬಾರಿಗೆ ಸಹಾಯಹಸ್ತ ಚಾಚಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.   ‘ಕುಸುಮ ಸಂಜೀವಿನಿ’ ಹೆಸರಲ್ಲಿ  ರೋಗ ನಿರೋಧಕ ಚಿಕಿತ್ಸೆ ಹಾಗೂ 108 ಆ್ಯಂಬುಲೆನ್ಸ್ ಸೇವೆಗಳನ್ನು ಡಿಸಿಎಂ ಶಿವಕುಮಾರ್ ಅವರು ಉದ್ಘಾಟಿಸಿದರು.

  ಬೆಂಗಳೂರು :  ‘ಹಿಮೋಫಿಲಿಯಾ ರೋಗಿಗಳಿಗಾಗಿ ದೇಶದಲ್ಲಿ ರಾಜ್ಯವೇ ಮೊದಲ ಬಾರಿಗೆ ಸಹಾಯಹಸ್ತ ಚಾಚಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಬುಧವಾರ ‘ಕುಸುಮ ಸಂಜೀವಿನಿ’ ಹೆಸರಲ್ಲಿ ಹಿಮೋಫಿಲಿಯ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಹಾಗೂ 108 ಆ್ಯಂಬುಲೆನ್ಸ್ ಸೇವೆಗಳನ್ನು ಡಿಸಿಎಂ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

‘ಹಿಮೋಫಿಲಿಯಾಬಾಧಿತ ರೋಗಿಗೆ ಚುಚ್ಚುಮದ್ದು ನೀಡಲು ವರ್ಷಕ್ಕೆ ಐದು ಲಕ್ಷ ರುಪಾಯಿ ಖರ್ಚಾಗುತ್ತದೆ. ಹಿಮೋಫಿಲಿಯಾದಂತಹ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಬದುಕಿನಲ್ಲಿ ಭರವಸೆ ಮೂಡಿಸಬೇಕು, ಅವರ ಬದುಕಿಗೆ ಶಕ್ತಿ ತುಂಬಬೇಕು ಎಂದು ನಮ್ಮ ಸರ್ಕಾರ ಹೊರಟಿದೆ. ಈ ರೋಗ ಬಂದ ತಕ್ಷಣ ಭವಿಷ್ಯವೇ ಇಲ್ಲ ಎಂದು ಭರವಸೆ ಕಳೆದುಕೊಳ್ಳಬಾರದು. ಇಡೀ ದೇಶದಲ್ಲಿ ನಾವು ಮೊದಲ ಬಾರಿಗೆ ಸಹಾಯಹಸ್ತ ಚಾಚಿದೆ’ ಎಂದರು.

‘ರಾಜ್ಯದಿಂದ ಪ್ರತಿವರ್ಷ 13,940 ವೈದ್ಯರು ತಯಾರಾಗುತ್ತಿದ್ದಾರೆ. ಸುಮಾರು 3 ಸಾವಿರ ವೈದ್ಯರು ಎಂಡಿ ಪದವಿ ಪಡೆಯುತ್ತಿದ್ದಾರೆ. 70 ಮೆಡಿಕಲ್‌ ಕಾಲೇಜು ಹೊಂದಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಮೆಡಿಕಲ್‌ ಕಾಲೇಜುಗಳಿವೆ. ಸುಮಾರು 1 ಲಕ್ಷ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳು ಪ್ರತಿವರ್ಷ ಸೇವೆಗೆ ಸಜ್ಜಾಗುತ್ತಿದ್ದಾರೆ. ಪ್ರಪಂಚದ ಯಾವುದೇ ದೇಶಕ್ಕೆ ಹೋದರೂ ನಮ್ಮ ಕರ್ನಾಟಕದ ವೈದ್ಯರು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.

ಸುಲಭವಾಗಿ ಪಡೆಯಬಹುದಾದ ಚಿಕಿತ್ಸೆ ಲಭ್ಯ

ಸಚಿವ ದಿನೇಶ್‌ ಗುಂಡೂರಾವ್ ಮಾತನಾಡಿ, ಈ ಮೊದಲು ಪದೇಪದೇ ರಕ್ತನಾಳದ ಮೂಲಕ ನೋವಿನ ಇಂಜೆಕ್ಷನ್ ಪಡೆಯಬೇಕಾಗಿದ್ದ ಹಿಮೋಫಿಲಿಯಾ ರೋಗಿಗಳಿಗೆ ಸರ್ಕಾರ ಈಗ ತಿಂಗಳಿಗೊಮ್ಮೆ ಚರ್ಮದ ಅಡಿಯಲ್ಲಿ ಸುಲಭವಾಗಿ ಪಡೆಯಬಹುದಾದ ಚಿಕಿತ್ಸೆ ಲಭ್ಯವಾಗಿಸಿದೆ ಎಂದರು.

‘ಹಿಮೋಫಿಲಿಯಾ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ಪಡೆಯುವಂತೆ 108 ಆ್ಯಂಬುಲೆನ್ಸ್ ಸೇವೆಯನ್ನು ಮನೆಬಾಗಿಲಿಗೆ ಒದಗಿಸಲಾಗುತ್ತಿದೆ. ‘ರಕ್ತಸ್ರಾವ ಮುಕ್ತ’ (Zero Bleeds) ಹಾಗೂ ‘ಅಂಗವೈಕಲ್ಯ ಮುಕ್ತ’ ಕರ್ನಾಟಕ ನಿರ್ಮಾಣ ಸರ್ಕಾರದ ಸಂಕಲ್ಪವಾಗಿದೆ. ಈ ಯೋಜನೆ ಯಶಸ್ವಿಗೊಂಡರೆ ನಮ್ಮ ಬದುಕು ಕೂಡ ಸಾರ್ಥಕವಾಗುತ್ತದೆ’ ಎಂದು ತಮ್ಮ ಮಹತ್ವಾಕಾಂಕ್ಷಿ ಯೋಜನೆ ಕುರಿತು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ, ಹಿಮೋಫಿಲಿಯಾ ರೋಗಿಗಳಿಗಾಗಿ ತಮ್ಮ ವೃತ್ತಿ ಜೀವನ ಮುಡಿಪಾಗಿಟ್ಟ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಸುರೇಶ್ ಹನಗವಾಡಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿ, ತಮ್ಮ ಅನುಭವ ಹಂಚಿಕೊಂಡ ಅವರು, ‘ರೋಗನಿರೋಧಕ ಚಿಕಿತ್ಸೆಗೆ’ ಆದ್ಯತೆ ನೀಡಿರುವುದು ರೋಗಿಗಳ ಜೀವನದಲ್ಲಿ ಪರಿವರ್ತನಾತ್ಮಕ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ, ರೋಶ್ ಫಾರ್ಮಾ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಜ್ವಿಂದರ್ (ರಾಜಿ) ಮೆಹ್ವಾನ್ ಮಾತನಾಡಿದರು. ಈವೇಳೆ ಹಿಮೋಫಿಲಿಯಾ ಅನುಭವಿಸುತ್ತಿರುವ ಬೆಂಗಳೂರಿನ 3 ಮಕ್ಕಳಿಗೆ ಸಾಂಕೇತಿಕವಾಗಿ ಚಿಕಿತ್ಸೆ ನೀಡಲಾಯಿತು.

₹ 42.55 ಕೋಟಿ ಅನುದಾನ: ದಿನೇಶ್‌ ಗುಂಡೂರಾವ್‌

‘ಹಿಮೋಫಿಲಿಯಾ ‘ಎ’ ರೋಗಿಗಳಿಗೆ ವಾರ್ಷಿಕ ₹5 ಲಕ್ಷ ವೆಚ್ಚವಾಗುವ ‘ಸಬ್ಕ್ಯುಟೇನಿಯಸ್’ ಚುಚ್ಚುಮದ್ದನ್ನು ರಾಜ್ಯ ಸರ್ಕಾರ ಉಚಿತವಾಗಿ ಒದಗಿಸುತ್ತಿದೆ. ಸರ್ಕಾರ ಇದಕ್ಕಾಗಿ ₹42.55 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ ₹17 ಕೋಟಿ ಅನುದಾನವನ್ನು ಔಷಧಿಗಾಗಿ ಬಳಸಲಾಗುತ್ತಿದೆ. ಈಗಾಗಲೇ 2,600 ಹಿಮೋಫಿಲಿಯಾ ರೋಗಿಗಳನ್ನು ಗುರುತಿಸಿದ್ದು, 200 ಜನರಿಗೆ ಈ ಹೊಸ ಮಾದರಿಯ ಚುಚ್ಚುಮದ್ದು ನೀಡಿ ಪರೀಕ್ಷಿಸಲಾಗಿದೆ. ಈ ಯೋಜನೆ ಪರಿಣಾಮಕಾರಿಯಾಗಿರುವುದರಿಂದ ಇನ್ನೂ ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ದವಿದೆ" ಎಂದು ಆರೋಗ್ಯ ಸಚಿವರು ತಿಳಿಸಿದರು.

 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಒಂದೇ ವರ್ಷದಲ್ಲಿ ರನ್ಯಾಳಿಂದ 1.27 ಕ್ವಿಂಟಲ್‌ ಚಿನ್ನ ಸ್ಮಗ್ಲಿಂಗ್!
ಬೆಂಗಳೂರಿಗೆ 3 ಜಿಲ್ಲೆಯಿಂದಲೇ ಅಧಿಕ ತರಕಾರಿ ಪೂರೈಕೆ: ಗುಣಮಟ್ಟ ಪರಿಶೀಲನೆಗೆ ಆಗ್ರಹ