ಜಮೀರ್‌ರನ್ನು ತಕ್ಷಣ ಸಂಪುಟದಿಂದ ಕೈಬಿಡಿ: ಸಂಸದ ಕೋಟ ಒತ್ತಾಯ

KannadaprabhaNewsNetwork | Published : Nov 22, 2024 1:15 AM

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ದಿನಪೂರ್ತಿ ಧರಣಿ ಸತ್ಯಾಗ್ರಹ ನಡೆಯಿತು. ಸಚಿವ ಜಮೀರ್‌ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸರ್ಕಾರಿ, ಕೃಷಿ ಮತ್ತು ಧಾರ್ಮಿಕ ಕೇಂದ್ರಗಳ ಭೂಮಿಯನ್ನು ವಕ್ಫ್ ಹೆಸರಿಗೆ ದಾಖಲಿಸುವಂತೆ ಸಚಿವ ಜಮೀರ್​ ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅಧಿಕಾರಿಗಳಿಗೆ ಪರೋಕ್ಷ ಬೆದರಿಕೆ ಹಾಕಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಹೇಳಿದರು.

ಜಿಲ್ಲಾ ಬಿಜೆಪಿಯಿಂದ ವಕ್ಫ್​ ಬೋರ್ಡ್​ ಅಕ್ರಮಕ್ಕೆ ಕುಮ್ಮಕ್ಕು ನೀಡಿರುವ ಕಾಂಗ್ರೆಸ್​ ಸರ್ಕಾರದ ವಿರುದ್ಧ ‘ನಮ್ಮ ಭೂಮಿ ನಮ್ಮ ಹಕ್ಕು’ ಅಭಿಯಾನದಡಿ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ದಿನಪೂರ್ತಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಆದ್ದರಿಂದ ಈ ಜನವಿರೋಧಿ ಸಚಿವ ಒಂದು ಕ್ಷಣ ಅಧಿಕಾರದಲ್ಲಿ ಮುಂದುವರಿಯಲು ಲಾಯಕ್ಕಿಲ್ಲ. ಸಚಿವ ಜಮೀರ್​ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಅವಧಿಯಲ್ಲೂ ರೈತರ ಭೂಮಿಗೆ ವಕ್ಪ್‌ ನೋಟೀಸ್​ ನೀಡಲಾಗಿದೆ ಎಂಬುದಾಗಿ ಪ್ರಿಯಾಂಕ ಖರ್ಗೆ ಹೇಳುತ್ತಿದ್ದಾರೆ. ಬಿಜೆಪಿ ಅವಧಿಯಲ್ಲೂ ವಕ್ಫ್ ಮಂಡಳಿಯಲ್ಲಿ ಕಾಂಗ್ರೆಸ್​ ನೇಮಿಸಿದ ಸದಸ್ಯರೆ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ವಕ್ಫ್‌ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಕ್ಪ್ ತಿದ್ದುಪಡಿ ಮಸೂದೆ ಜಾರಿಗೊಳಿಸುತ್ತಿದೆ. ಜಂಟಿ ಸಂಸದೀಯ ಸಮಿತಿಯನ್ನೂ ರಚಿಸಿದೆ. ಆದರೆ ಕಾಂಗ್ರೆಸ್​ ಸದಸ್ಯರು ಸಭೆ ನಡೆಸಲು ಬಿಡುತ್ತಿಲ್ಲ ಎಂದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸುನೀಲ್​ ಕುಮಾರ್​, ಗುರುರಾಜ್​ ಗಂಟಿಹೊಳೆ, ಸುನಿಲ್​ ಕುಮಾರ್​, ಕಿರಣ್​ ಕುಮಾರ್​ ಕೊಡ್ಗಿ, ಸುರೇಶ್​ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್​, ಪ್ರಮೋದ್​ ಮಧ್ವರಾಜ್​, ವಿಭಾಗ ಪ್ರಭಾರಿ ಉದಯ್​ ಕುಮಾರ್​ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಕುಯಿಲಾಡಿ ಸುರೇಶ್​ ನಾಯಕ್​, ಪ್ರ. ಕಾರ್ಯದರ್ಶಿ ಹೆರ್ಗ ದಿನಕರ ಶೆಟ್ಟಿ, ಮುಖಂಡರಾದ ಶಿಲ್ಪಾ ಸುವರ್ಣ, ಶಿವಕುಮಾರ್​ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ ಮತ್ತು ಪಕ್ಷದ ಮುಖಂಡರು ಭಾಗವಹಿಸಿದ್ದರು. ರೇಶ್ಮಾ ಉದಯ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share this article