ಕನ್ನಡಪ್ರಭ ವಾರ್ತೆ ಸುರಪುರ
ತರಬೇತಿ ಶಿಬಿರಗಳು ಕಾವಲು ಸಮಿತಿಗಳ ಕಾರ್ಯಕ್ಷಮತೆ ಬಲಪಡಿಸಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಹೆಚ್ಚಿಸಲು ಸಹಕಾರಿಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವೀರನಗೌಡ ಪಾಟೀಲ್ ತಿಳಿಸಿದರು.ನಗರದ ಆದಿತಿ ಹೋಟೆಲ್‌ನ ಸಭಾಂಗಣದಲ್ಲಿ ಕೆಎಚ್‌ಪಿಟಿ ಸಂಸ್ಥೆಯು ಸರಕಾರದ ಸಹಭಾಗಿತ್ವದೊಂದಿಗೆ ತಾಲೂಕಿನ ಆಯ್ದ ಮಹಿಳೆಯರ, ಮಕ್ಕಳ ರಕ್ಷಣೆ ಕಾವಲು ಸಮಿತಿಗಳಿಗೆ ಆಯೋಜಿಸಿದ್ದ ಎರಡು ದಿನ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾವಲು ಸಮಿತಿ ಸದಸ್ಯರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸುವುದು ಶಿಬಿರದ ಉದ್ದೇಶ. ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸರ್ವ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಸಜ್ಜನ್ ಮಾತನಾಡಿ, ಮಕ್ಕಳ ಮತ್ತು ಮಹಿಳೆಯ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಕಾವಲು ಸಮಿತಿಗಳು ಕಾರ್ಯನಿರ್ವಹಿಸಬೇಕಾಗಿದೆ. ತರಬೇತಿಯಲ್ಲಿ ಗ್ರಾಮ ಪಂಚಾಯಿತಿಗಳ ಎಲ್ಲ ಕಾವಲು ಸಮಿತಿ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನಿಲ್ ಕಾಂಬ್ಳಿ ಮಾತನಾಡಿ, ಕೆಎಚ್‌ಪಿಟಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳ ಸಮಿತಿಯ ಪಾತ್ರ, ಸದಸ್ಯರ ಜವಾಬ್ದಾರಿ, ಕಾರ್ಯಚಟುವಟಿಕೆಗಳು ಮತ್ತು ಸಭೆಗಳನ್ನು ಹಮ್ಮಿಕೊಳ್ಳುವುದು, ಮಹಿಳೆಯರು ಹಾಗೂ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಸಮಿತಿ ಏನು ಮಾಡಬೇಕು, ಮಹಿಳೆಯರು ಹಾಗೂ ಮಕ್ಕಳಿಗೆ ಸ್ಥಳೀಯ ಮಟ್ಟದಲ್ಲಿ ಲಭ್ಯವಿರುವ ಕಾನೂನು ಸೇವೆಗಳು, ಸ್ಥಳೀಯ ಬೆಂಬಲ ವ್ಯವಸ್ಥೆಗಳ ಕುರಿತು ಅವರು ವಿವರಿಸಿದರು.ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಚಿಂತನ್, ಅಂಗನವಾಡಿ ಮೇಲ್ವಿಚಾರಕಿಯರು, ಪಿಡಿಓಗಳು, ಬೀಟ್ ಪೊಲೀಸ್‌ರು ಮತ್ತು ಕೆಎಚ್‌ಪಿಟಿ ಸಂಸ್ಥೆಯವರು ಇದ್ದರು.
ಕಾವಲು ಸಮಿತಿ ನಿರ್ಣಾಯಕ ಪಾತ್ರ2019ರಲ್ಲಿ ಕರ್ನಾಟಕ ಸರಕಾರವು ಮಹಿಳಾ ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವಿಕೆ, ಬಾಲ್ಯ ವಿವಾಹ ನಿಷೇಧ ಹಾಗೂ ಸಮಗ್ರ ಮಕ್ಕಳ ರಕ್ಷಣೆಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾಗಿರುವ ಮಕ್ಕಳ ರಕ್ಷಣಾ ಸಮಿತಿಯನ್ನು ವಿಲೀನಗೊಳಿಸಿ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ರಚಿಸಲು ಆದೇಶ ಹೊರಡಿಸಿತು. ಈ ಕಾವಲು ಸಮಿತಿಯು ಮಹಿಳಾ ಮತ್ತು ಮಕ್ಕಳ ಹಕ್ಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರಕ್ಷಿಸಲು ಹಾಗೂ ಅವರಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಲು ಗ್ರಾಪಂ ಮಟ್ಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಕೆಎಚ್‌ಪಿಟಿ ಸಂಪನ್ಮೂಲ ವ್ಯಕ್ತಿಗಳು ವಿವರಿಸಿದರು.