ತಂತ್ರಜ್ಞಾನ ಸದ್ಬಳಕೆಯಿಂದ ಬರ ನೀಗಬಹುದು

KannadaprabhaNewsNetwork |  
Published : Oct 31, 2026, 01:30 AM IST
ಪೋಟೋ: 30ಎಸ್‌ಎಂಜಿಕೆಪಿ01ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ “ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ” ಎಂಬ ಧೈಯವಾಕ್ಯದೊಂದಿಗೆ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026 ಕಾರ್ಯಕ್ರಮವನ್ನು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸಿದರು. | Kannada Prabha

ಸಾರಾಂಶ

Drought can be alleviated through the effective use of technology.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಬೆಳೆ ನಷ್ಟ ಅನುಭವಿಸಿದ ಪ್ರತಿಯೊಬ್ಬ ರೈತರಿಗೆ ಆರಂಭಿಕ ಪರಿಹಾರವಾಗಿ 2,500 ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ ಎಂಬ ಧೈಯವಾಕ್ಯದೊಂದಿಗೆ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026 ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿ, ನವೆಂಬರ್ ತಿಂಗಳಲ್ಲಿ ''''''''ನೇಗಲು ಯೋಗ'''''''' ಯೋಜನೆ ಅನುಷ್ಠಾನಗೊಳ್ಳಲಿದ್ದು, ಇದರ ಮೂಲಕ ಬರದಿಂದ ಕಂಗೆಟ್ಟಿರುವ ರೈತರಿಗೆ ಆರ್ಥಿಕ ಪುನಶ್ಚೇತನ ಮತ್ತು ಯಂತ್ರೋಪಕರಣಗಳನ್ನು ಬಳಸುವ ಜವಾಬ್ದಾರಿ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.

ಬರ ಮತ್ತು ಪ್ರಾಕೃತಿಕ ವಿಕೋಪಗಳ ನಡುವೆ ಕೃಷಿಯನ್ನು ಲಾಭದಾಯಕವಾಗಿ ಮತ್ತು ಯಶಸ್ವಿಯಾಗಿ ಮುನ್ನಡೆಸುವುದು ಹಾಗೂ ರೈತರಿಗೆ ಆರ್ಥಿಕ ಪುನಶ್ಚೇತನ ಮತ್ತು ಯಂತ್ರೋಪಕರಣಗಳ ಬಳಕೆಯ ಬಗ್ಗೆ ಅರಿವು ಮೂಡಿಸುವುದು ಕೃಷಿ ಮೇಳದ ಮುಖ್ಯ ಉದ್ದೇಶವಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳು, ಹವಾಮಾನ ವೈಪರೀತ್ಯ ತಡೆಯಬಲ್ಲ ತಳಿಗಳ ಹೊಸ ಆವಿಷ್ಕಾರಗಳು ಹಾಗೂ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳ ಬಗ್ಗೆ ಕೃಷಿ ಮೇಳದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು ಜೆ.ಆರ್.ಎಫ್. ಮತ್ತು ಎಸ್.ಆರ್.ಎಫ್. ಫಲಿತಾಂಶದಲ್ಲಿ 81 ಫೆಲೋಶಿಪ್‌ಗಳನ್ನು ಗಳಿಸುವ ಮೂಲಕ ರಾಜ್ಯದ ಐದು ವಿಶ್ವವಿದ್ಯಾಲಯಗಳಲ್ಲಿ ಅತ್ಯಧಿಕ ಸ್ಥಾನ ಪಡೆದಿದೆ. ಶಿವಮೊಗ್ಗದಲ್ಲಿ ಅಡಕೆ ಹಾಗೂ ಶುಂಠಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಂಬಾರು ಬೆಳೆಗಳು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಏಕ ಬೆಳೆಗಿಂತ ಮಿಶ್ರ ಬೆಳೆಗಳಿಗೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ:

ಕರ್ನಾಟಕ ಅಗ್ರಿಟೆಕ್ ಮಿಷನ್ 2026 ರ ಅಡಿಯಲ್ಲಿ ದೂರ ಸಂವೇದಿ ತಂತ್ರಜ್ಞಾನ, ಡ್ರೋನ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮುಂತಾದ ಆಧುನಿಕ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿ ರೈತರಿಗೆ ಸಲಹೆ ಮತ್ತು ಸೇವೆ ಒದಗಿಸಲು 35.99 ಕೋಟಿ ರು. ಅಂದಾಜು ಮೊತ್ತದಲ್ಲಿ ಅನುಮೋದನೆ ನೀಡಲಾಗಿದೆ. ಈಗಾಗಲೇ ಸುಮಾರು 27 ಲಕ್ಷದ 15 ಸಾವಿರ ಕೃಷಿ ಸಲಹಾ ಸಂದೇಶಗಳನ್ನು ರೈತರಿಗೆ ಯಶಸ್ವಿಯಾಗಿ ತಲುಪಿಸಲಾಗಿದೆ. ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗ ನಷ್ಟವಾಗುತ್ತಿರುವ ಸವಾಲುಗಳ ನಡುವೆ, ಕೃಷಿ ಕ್ಷೇತ್ರವನ್ನು ಬಲಪಡಿಸಲು ವಿಶ್ವವಿದ್ಯಾಲಯಗಳು ಹಾಗೂ ವಿವಿಧ ಎನ್‌ಜಿಒಗಳ ಸಹಯೋಗದೊಂದಿಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಬರ ನಿರ್ವಹಣೆ ನೇಗಿಲ ಮಿಡಿತ ವಿಶೇಷ ಸಂಚಿಕೆ ಹಾಗೂ ರೈತರ ಯಶೋಗಾಥೆ ಬಿಡುಗಡೆಗೊಳಿಸಿ ಮಾತನಾಡಿದರು. ಶಾಸಕಿ ಶಾರದಾ ಪೂರ್ಯಾನಾಯ್ಕ, ಶಾಸಕ ಎಸ್.ಎನ್. ಚನ್ನಬಸಪ್ಪ, ನಿಗಮಗಳ ಅಧ್ಯಕ್ಷರಾದ ಪಲ್ಲವಿ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ. ಚೇತನ್, ಕೃಷಿಕ ಸಮಾಜದ ನಗರದ ಮಹಾದೇವಪ್ಪ, ವಿಸ್ತರಣಾ ನಿರ್ದೇಶಕ ಡಾ. ರಾಘವೇಂದ್ರ ಕೆ. ಮೇಸ್ತ ವಿವಿಧ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಇದ್ದರು.

-----

ಬಾಕ್ಸ್‌...

ಕೃಷಿ ಮೇಳಕ್ಕೆ ರಾಜ್ಯದ ವಿವಿಧೆಡೆಯ ರೈತರ ಸ್ಪಂದನೆ

ಶಿವಮೊಗ್ಗ: ಇಲ್ಲಿನ ನವಿಲೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಚಾಲನೆ ದೊರೆತಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ರೈತರು ಕೃಷಿ ಕುರಿತ ಆಸಕ್ತರು ಕೃಷಿ ಮೇಳಕ್ಕೆ ಆಗಮಿಸಿ ಮಾಹಿತಿಗಳನ್ನು ಪಡೆಯುತ್ತಿದ್ದಾರೆ.

ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ ಎಂಬ ಧ್ಯೇಯವಾಕ್ಯದಡಿ ನ.2 ರವರೆಗೆ ಕೃಷಿ ಮೇಳವನ್ನು ಆಯೋಜಿಸಿದೆ. ಈ ಮೇಳದ ಅಂಗವಾಗಿ ಕೃಷಿ ಪರಿಕರಗಳು, ಬೀಜ-ರಸಗೊಬ್ಬರಗಳು, ಯಂತ್ರೋಪಕರಣಗಳು, ಸಸಿ ಮತ್ತು ಗಿಡಗಳು, ಪ್ರಾತ್ಯಕ್ಷಿಕೆಗಾಗಿ 600ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದ್ದು, ರೈತರು ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಮೇಳದ ಮೊದಲ ದಿನದಂದು ಬರಕ್ಕೆ ಹೆದರದ ನೈಸರ್ಗಿಕ ಕೃಷಿ: ಜೀವಂತ ಮಣ್ಣಿನ ಜೀವ ಶಕ್ತಿ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಮಾಹಿತಿ ನೀಡಲಾಯಿತು. ಅ.30ರಂದು ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಯುಕ್ತ ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ ಹಾಗೂ ನ.1: ಡಿಜಿಟಲ್ ಕೃಷಿ: ಅವಕಾಶಗಳು, ಸವಾಲುಗಳು ಮತ್ತು ಮುಂದಿನ ದಾರಿ ಎಂಬ ವಿಷಯಗಳ ಕುರಿತು ವಿಸ್ತೃತ ಚರ್ಚೆ ಮತ್ತು ಸಂವಾದಗಳು ನಡೆಯಲಿವೆ.

ಮೇಳದಲ್ಲಿ ಬೀಜ-ಸಸಿಗಳು-50, ಕೀಟನಾಶಕ-80, ಕೃಷಿ ಸಲಕರಣೆ-35, ಮೌಲ್ಯವರ್ಧಿತ ಆಹಾರ-40, ನರ್ಸರಿ-15, ಆಹಾರ ಮಳಿಗೆ-60 ಸೇರಿದಂತೆ 600ಕ್ಕೂ ಹೆಚ್ಚು ಮಳಿಗೆಗಳಿರಲಿವೆ.೧೫ಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳು, 80 ಸರ್ಕಾರಿ ಇಲಾಖೆಗಳು ಭಾಗವಹಿಸಿದ್ದವು.

ಬರ ನಿರ್ವಹಣಾ ವಿಭಾಗ, ಅಡಿಕೆ ವಿಭಾಗ, ಮೀನುಗಾರಿಕೆ, ಹೈನುಗಾರಿಕೆ, ಕುರಿ-ಮೇಕೆ ಸಾಕಣೆ, ಏಡಿ ಸಾಕಣೆ, ಮುತ್ತು ಕೃಷಿ, ಬ್ಲಾಕ್ ಸೋಲ್ಜರ್ - ಪ್ರದರ್ಶನ, ಮಲೆನಾಡಿನಲ್ಲಿ ಕಣ್ಮರೆಯಾಗುತ್ತಿರುವ ಕಬ್ಬಿನ ಗಾಣದ ಅಪರೂಪದ ಕೋಣದ ಕಣೆ ಪ್ರದರ್ಶನ ಕೃಷಿಮೇಳದ ವಿಶೇಷವಾಗಿತ್ತು. ಅಲ್ಲದೇ, ಶ್ವಾನ ಪ್ರದರ್ಶನ, ಹಸು-ಎಮ್ಮೆ, ಕುರಿ-ಆಡು ಸ್ಪರ್ಧೆ, ಸಿರಿಧಾನ್ಯ ಪಾಕ ಸ್ಪರ್ಧೆ, ಮೀನುಗಾರಿಕೆ ಇಲಾಖೆಯ ಮತ್ಸ್ಯಾಂಗಣ ಮೇಳದ ವಿಶೇಷ ಆಕರ್ಷಣೆಗಳಾಗಿದ್ದವು.

ಸಾವಯವ ಕೃಷಿ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ಇದೆ. ರೈತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಭೇಟಿ ನೀಡುತ್ತಿದ್ದಾರೆ. ಇಲ್ಲಿ ನೂರಕ್ಕೂ ಹೆಚ್ಚು ಬಗೆಯ ಭತ್ತದ ತಳಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜೈವಿಕ ಗೊಬ್ಬರ, ಜೈವಿಕ ನಿಯಂತ್ರಕ, ಜೇನು, ಹಲವು ಬಗೆಯ ಧಾನ್ಯಗಳನ್ನು ಇಲ್ಲಿ ಕಾಣಬಹುದಾಗಿದೆ.

--------

ಪೋಟೋ: 30ಎಸ್‌ಎಂಜಿಕೆಪಿ01

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ ಎಂಬ ಧೈಯವಾಕ್ಯದೊಂದಿಗೆ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕೆ ಮೇಳ-2026 ಕಾರ್ಯಕ್ರಮವನ್ನು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಡೆಯಾಜ್ಞೆ ಇದ್ದರೂ ಪೊಲೀಸರಿಂದ ಚಾರ್ಜ್‌ಶೀಟ್‌: ಹೈಕೋರ್ಟ್‌ ಗರಂ
ಪ್ರೀತಿಗೆ ಪೋಷಕರು ವಿರೋಧ: ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ