ಮಳೆ ಇಲ್ಲದೇ ಬರ, ಬಿಸಿಲಿಗೆ ಬೇಯುತ್ತಿದೆ ಬದುಕು

KannadaprabhaNewsNetwork |  
Published : Sep 19, 2026, 01:30 AM IST
18ಕೆಪಿಎಲ್ಎನ್ಜಿ01 & 02  | Kannada Prabha

ಸಾರಾಂಶ

ಮಳೆಗಾಲದಲ್ಲಿ ಮಳೆ ಬಾರದೇ ತಿಂಗಳುಗಳೇ ಉರುಳಿವೆ. ಬರದ ಬಾಧೆ ಒಂದಡೆಯಾದರೇ ರಣ ಬಿಸಿಲಿಗೆ ಜನ-ಜಾನುವಾರಗಳ ಬದುಕು ಬೇಯುತ್ತಿದೆ. ಬಿಸಿಲು ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಸಾಂಕ್ರಾಮಿಕ ರೋಗಳಿಂದ ಜನರು ತಲ್ಲಣಗೊಂಡಿದ್ದಾರೆ.

ಗುರುರಾಜ ಗೌಡೂರು

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಮಳೆಗಾಲದಲ್ಲಿ ಮಳೆ ಬಾರದೇ ತಿಂಗಳುಗಳೇ ಉರುಳಿವೆ. ಬರದ ಬಾಧೆ ಒಂದಡೆಯಾದರೇ ರಣ ಬಿಸಿಲಿಗೆ ಜನ-ಜಾನುವಾರಗಳ ಬದುಕು ಬೇಯುತ್ತಿದೆ. ಬಿಸಿಲು ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಸಾಂಕ್ರಾಮಿಕ ರೋಗಳಿಂದ ಜನರು ತಲ್ಲಣಗೊಂಡಿದ್ದಾರೆ.

ತಾಲೂಕಿನ ನಾಲ್ಕು ಕಂದಾಯ ಹೋಬಳಿ ಪೈಕಿ ಮುದಗಲ್ ಹೋಬಳಿ ಖುಷ್ಕಿ ಪ್ರದೇಶ, ಮಳೆ ಇಲ್ಲದೇ ಬೆಳೆಗಳು ಸಂಪೂರ್ಣ ಕೈಕೊಟ್ಟಿವೆ. ಬಿಸಿಲು ಹೆಚ್ಚಿದ್ದು ಬೆಳೆ ಗಳು ಒಣಗಲು ಆರಂಭಿಸಿವೆ. ಹತ್ತಿ ನೆತ್ತಿಯಿಂದ ಒಣಗಿವೆ. ಬರದಿಂದ ಬಹುತೇಕ ಹಳ್ಳಿಗಳಲ್ಲಿ ಕೂಲಿಕಾರರು ಗುಳೇ ಹೋಗಿದ್ದು, ಅತ್ತಿ ಬಿಡಿಸಲು ಕೂಲಿಕಾರರು ಸಿಗು ತ್ತಿಲ್ಲ. ಮಳೆ ಇಲ್ಲದೇ ಬಿಸಿಲ ತಾಪಮಾನ ಏರುಮುಖದಿಂದ ವಾತಾವರಣ ಬೇಸಿಗೆಯಂತಾಗಿದೆ. ಇನ್ನೂ ಗುರುಗುಂಟಾ ಭಾಗದ ಕೆಲ ಹಳ್ಳಿಗಳಲ್ಲಿ ಬಲದಂಡೆ ನಾಲೆ ನೀರಾವರಿ ಇದೆ. ಇನ್ನೂ ಗುಡ್ಡಗಾಡು ಪ್ರದೇಶದ ಹಳ್ಳಿಗಳಲ್ಲಿ ಬದುಕು ಸಂಪೂರ್ಣ ಮುರಿದು ಬಿದ್ದಿದೆ. ಮುಂಗಾರು ಬೆಳೆಗಳಾದ ಸಜ್ಜೆ, ತೊಗರಿ, ಹತ್ತಿ ಬೆಳೆಗಳು ದುಸ್ಥಿತಿಗೆ ಸಿಲುಕಿವೆ. ಮಳೆ ಇಲ್ಲದ ಪರಿಣಾಮ ಮೇವು ಕಮರಿ ಹೋಗಿದೆ. ಒಣ ನೆಲದಲ್ಲಿ ತಲೆ ಬಗ್ಗಿಸಿ ಮೇವಿಗೆ ಅರಸುವ ಮೂಕ ಪ್ರಾಣಿಗಳ ವೇದನೆ ಭೀಕರ ವಾಗಿದೆ. ಕುರಿಗಾಹಿಗಳು ಗದಗ, ರೋಣ, ನರಗುಂದ, ನವಲಗುಂದ, ಬಾಗಲಕೋಟೆ, ಜಮಖಂಡಿ, ಬೀಳಗಿ ಸೇರಿದಂತೆ ಕುರಿಗಳನ್ನು ಮೇಯಿಸಲು ಹೊಡೆದು ಕೊಂಡು ಹೋಗಿದ್ದಾರೆ.

ಲಿಂಗಸುಗೂರು ಹೋಬಳಿ ಸುತ್ತಮುತ್ತಲ ಜಮೀನುಗಳಿಗೆ ಬಲದಂಡೆ ನಾಲೆ, ರಾಂಪುರ ಏತ ನೀರಾವರಿ ನಾಲೆಗಳ ನೀರು ಸ್ವಲ್ಪ ಜೀವ ಜಲ ನೀಡಿದೆ. ಬೆಳೆಗಳು ಹಸಿರಾಗಿವೆ. ಆದರೆ ಬಿಸಿಲಿನ ತಾಪಮಾನ ಏರುತ್ತಿರುವುದರಿಂದ ನಾಲೆಗಳಿಂದ ಬೆಳೆಗಳಿಗೆ ದಿನಾಲು ನೀರು ಹರಿಸಬೇಕಿದೆ. ಇನ್ನೂ ನಾಗರಾಳ ಹೋಬಳಿಯಲ್ಲೂ ಪರಸ್ಥಿತಿ ಭಿನ್ನವಾಗಿಲ್ಲ.

ಅನಾರೋಗ್ಯ: ಬರು ಬಿಸಿಲು ಜನರ ಆರೋಗ್ಯದ ಮೇಲೆ ದುಸ್ಪರಿಣಾಮ ಬೀರಿದೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಬಿಸಿಲಿಂದ ಉಂಟಾಗುವ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಬರದ ನಾಡಲ್ಲಿ ಆಸ್ಪತ್ರೆಗಳು ಜನ-ಜಂಗುಳಿಯಿಂದ ತುಂಬಿ ತುಳುಕುತ್ತಿವೆ. ಚಳಿಗಾಲದ ಆರಂಭದಲ್ಲಿ ಮಳೆ ಇಲ್ಲದೇ ಭಾರಿ ಬಿಸಿಲು ಜನರ ಜೀವ ಹಿಂಡುತ್ತಿದೆ. ಮಳೆ, ಚಳಿಯ ಕಾಲದಲ್ಲಿ ಚಹಾದ ಬದಲು ಜನರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.

ಬರದಿಂದ ಬದುಕು ದುರ್ಬರವಾಗುತ್ತಿದೆ. ಅಲ್ಲೊಂದು ಇಲ್ಲೊಂದು ಎನ್ನುವಂತೆ ಜಿ ರಾಮ ಜಿ ಉದ್ಯೋಗ ಖಾತರಿ ಕೆಲಸಗಳು ನಡೆದಿವೆ. ಜನರಿಗೆ ನೆರವಾಗುವ ಯಾವುದೇ ಸರ್ಕಾರಿ ಯೋಜನೆಗಳು ಜನರ ನೆರವಿಗೆ ಬಂದಿಲ್ಲ.

ಬೆಲೆ ಬರೆ : ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹತ್ತಿ ಬೆಳೆ ಅಲ್ಪಸ್ವಲ್ಪ ಅರಳಿಯಾಗಿದೆ. ಹತ್ತಿ ಬಿಡಿಸಿದ ರೈತರು ಮಾರಾಟ ಮಾಡುತ್ತಿದ್ದಾರೆ. ಆರಂಭದಲ್ಲಿ 13,000 ಕ್ವಿಂಟಲ್ ಇದ್ದ ಹತ್ತಿ ಧಿಡೀರ್ 9,000ಕ್ಕೆ ಕ್ವಿಂಟಲ್ ಕುಸಿದಿದ್ದು ಬೆಲೆ ಬರದ ನಾಡಿನ ರೈತರಿಗೆ ಬರೆ ಎಳೆದಿದೆ. ಮಳೆ ಇಲ್ಲದೇ ಹಿಂಗಾರು ಭರವಸೆ ಕ್ಷೀಣ ಸುತ್ತಿದೆ. ಈಗಾಗಲೇ ಉತ್ತರಿ ಮಳೆ ಆರಂಭವಾಗಿದೆ. ‘ಉತ್ತರೆ ಹುಸಿದರೆ ಹೆತ್ತಮ್ಮ ಮುನಿದರೆ, ಸತ್ಯವಂತರು ಮಿತ್ಯ ನುಡಿದರೇ ಲೋಕ ಇನ್ನೆತ್ತ ಪೋಗುವುದು ಸರ್ವಜ್ಞ ಎನ್ನುವ ಅನುಭವದ ವಾಣಿ ನಂಬಿ ಜನರು ಮಳೆಗೆ ಪ್ರಾರ್ಥನೆ ಮಾಡುತ್ತಿದ್ದಾರೆ.

ಮಳೆ ಇಲ್ಲದೇ ಬೀಕರ ಬರ ಆವರಿಸಿದ ಕೆಟ್ಟ ಕಾಲವಾಗಿದೆ. ದುರ್ದಿನಗಳಲ್ಲಿ ಆಡಳಿತ ನೆರವಿಗೆ ಧಾವಿಸಬೇಕು. ರೈತರಿಗೆ ನೆರವಾಗುವ ಯೋಜನೆಗಳು ಕಾರ್ಯ ರೂಪಕ್ಕೆ ತರಬೇಕು. ಒಣ ಘೋಷಣೆ ಹೇಳಿಕೆಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ. ಕೂಡಲೇ ಬಡಜನರು, ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಗೌಡೂರು ರೈತ ರಾಚಯ್ಯಸ್ವಾಮಿ ಗಣಾಚಾರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಡಾಳು ಸ್ವರ್ಣಗೌರಮ್ಮ ದೇವಿ ದರ್ಶನಕ್ಕೆ ಭಕ್ತರ ದಂಡು
ಜನಮನ ಸೆಳೆದ ಕಲ್ಯಾಣ ಕರ್ನಾಟಕ ಉತ್ಸವ