ದಾಬಸ್‍ಪೇಟೆ: ಸೋಲೂರು ಹೋಬಳಿ ನೆಲಮಂಗಲ ತಾಲೂಕಿಗೆ ಸೇರ್ಪಡಿಸಸಬೇಕೆಂಬ 47 ವರ್ಷಗಳ ಜನತೆಯ ಕನಸನ್ನು ಶಾಸಕನಾದ 3 ವರ್ಷದಲ್ಲೇ ನನಸು ಮಾಡಿದ್ದೇನೆ. ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಬಗ್ಗೆ ನನಗೆ ಆತ್ಮತೃಪ್ತಿಯಿದೆ ಎಂದು ಶಾಸಕ ಶ್ರೀನಿವಾಸ್ ಭಾವನಾತ್ಮಕವಾಗಿ ಸಂತಸ ವ್ಯಕ್ತಪಡಿಸಿದರು.
13 ಇಲಾಖೆಗಳು ಶೀಘ್ರ ಸೇರ್ಪಡೆ:
ಸೋಲೂರು ಹೋಬಳಿಗೆ ಸಂಬಂಧಿಸಿದಂತೆ ಸುಮಾರು 18 ಇಲಾಖೆಗಳು ಈಗಾಗಲೇ ನೆಲಮಂಗಲ ತಾಲೂಕಿಗೆ ಸೇರಿಸಿದ್ದು, ಶಿಕ್ಷಣ, ಬೆಸ್ಕಾಂ, ಪೊಲೀಸ್, ಆರ್‌ಡಿಪಿಆರ್, ಕೃಷಿ ಇಲಾಖೆಗಳು ಸೇರಿದಂತೆ 13 ಇಲಾಖೆಗಳು ಸದ್ಯದಲ್ಲೇ ಸೇರ್ಪಡೆಯಾಗಲಿದೆ. ಸೋಲೂರು ಹೋಬಳಿಯ ಜನತೆಗೆ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯ ಸಿಗುವಂತೆ ತ್ವರಿತ ಕ್ರಮ ವಹಿಸಲಾಗುತ್ತಿದೆ ಎಂದರು.ಪ್ರಜಾ ಸೇವಾ ಆಂದೋಲನದ ಭಾಗವಾಗಿ ಸೋಲೂರಲ್ಲಿ ಮೊದಲ ಸಭೆ ಆಯೋಜಿಸಿದ್ದೇವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದು ಸೋಲೂರು ಜನತೆಯ ಸಮಸ್ಯೆಗಳನ್ನು ಆಲಿಸಲು ಬಂದಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಬರುವ ಅರ್ಜಿಗಳಿಗೆ ತ್ವರಿತ ಪರಿಹಾರ ಒದಗಿಸಲಾಗುವುದು. ತಾಲೂಕು ಕಚೇರಿ, ಕಸಬಾ ಹೋಬಳಿ, ಸೋಲೂರು ಗ್ರಾಪಂ ಮಟ್ಟದಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗುವುದು. ಅಲ್ಲಿಯೂ ಬಂದು ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು.
ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಜಾ ಸೇವಾ ಆಂದೋಲನ ಪ್ರತಿ ಶನಿವಾರ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ನಡೆಯಲಿದೆ. ಜನರ ಬಳಿಗೆ ಅಧಿಕಾರಿಗಳು ನೇರವಾಗಿ ತೆರಳಿ ಅವರ ಸಮಸ್ಯೆ, ಅಹವಾಲು ಆಲಿಸಿ ತ್ವರಿತ ಪರಿಹಾರ ಒದಗಿಸಲಿದ್ದಾರೆ. ಕಾನೂನು ಅಡಿಯಲ್ಲಿ ಬರುವ ಅರ್ಜಿಗಳಿಗೆ 21 ದಿನದಲ್ಲಿ ಪರಿಹಾರ ಮಾಡಲು ಕ್ರಮ ವಹಿಸಲಾಗುವುದು. ಸೋಲೂರು ಹೋಬಳಿಯ 6 ಗ್ರಾಪಂಗಳ 68 ಕಂದಾಯ ಗ್ರಾಮಗಳನ್ನು ಈಗಾಗಲೇ ನೆಲಮಂಗಲ ತಾಲೂಕಿಗೆ ಸೇರಿಸಲಾಗಿದೆ. ಸೋಲೂರಿನ ಜನರ ಸಮಸ್ಯೆ, ಅಹವಾಲು ಆಲಿಸಿ ಸರ್ಕಾರದ ಎಲ್ಲಾ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ. ವಾಸಂತಿ ಅಮರ್, ಉಪವಿಭಾಗಾಧಿಕಾರಿ ಮಂಜುನಾಥ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ತಹಸೀಲ್ದಾರ್ ಮಲ್ಲೇಶ್, ತಾಪಂ ಇಒ ಬಿಂದು, ಡಿವೈಎಸ್ಪಿ ಉಮಾರಾಣಿ, ಬಿಇಒ ರಮೇಶ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸೋಲೂರಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆಯನ್ನು ಶಾಸಕ ಶ್ರೀನಿವಾಸ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ, ಜಿಪಂ ಸಿಇಒ ಡಾ. ವಾಸಂತಿ ಅಮರ್ ಇತರರು ಹಾಜ್ರಿದ್ದರು.