ತಾಲೂಕಿನಲ್ಲಿ ಮುಂಗಾರು ಪೂರ್ವ ಸುರಿದ ಮಳೆಯಿಂದ ಪುಳಕಿತರಾಗಿದ್ದ ರೈತರು ಹೆಸರು ಹತ್ತಿ, ತೊಗರಿ ಶೇಂಗಾ, ಸೂರ್ಯಕಾಂತಿ ಬಿತ್ತನೆ ಮಾಡಿ ಸಂತಸಗೊಂಡಿದ್ದರು.ಆದರೆ ಕಳೆದ ಒಂದುವರೆ ತಿಂಗಳಿಂದ ಮಳೆ ಮಾಯವಾದ ಪರಿಣಾಮ,ಬೆಳವಣಿಗೆಯ ಹಂತದಲ್ಲಿಯೇ ಪೈರುಗಳು ಬಾಡುತ್ತಿದ್ದು,ರೈತರ ನಿದ್ದೆಗೆಡಿಸಿವೆ. ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಬಿಂದುಮಾಧವ ಮಣ್ಣೂರ

ಕನ್ನಡಪ್ರಭ ವಾರ್ತೆ ಅಫಜಲಪುರ

ತಾಲೂಕಿನಲ್ಲಿ ಮುಂಗಾರು ಪೂರ್ವ ಸುರಿದ ಮಳೆಯಿಂದ ಪುಳಕಿತರಾಗಿದ್ದ ರೈತರು ಹೆಸರು ಹತ್ತಿ, ತೊಗರಿ ಶೇಂಗಾ, ಸೂರ್ಯಕಾಂತಿ ಬಿತ್ತನೆ ಮಾಡಿ ಸಂತಸಗೊಂಡಿದ್ದರು.ಆದರೆ ಕಳೆದ ಒಂದುವರೆ ತಿಂಗಳಿಂದ ಮಳೆ ಮಾಯವಾದ ಪರಿಣಾಮ,ಬೆಳವಣಿಗೆಯ ಹಂತದಲ್ಲಿಯೇ ಪೈರುಗಳು ಬಾಡುತ್ತಿದ್ದು,ರೈತರ ನಿದ್ದೆಗೆಡಿಸಿವೆ. ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಮಳೆಯಾಶ್ರಿತ ಭೂಮಿ ಹೊಂದಿರುವ ರೈತರು ಮಳೆಗಾಗಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ. ಮಳೆಯ ಕೊರತೆಯಿಂದಾಗಿ ತಾಲೂಕಿನಲ್ಲಿ ಬಿತ್ತಿದ ವಿವಿಧ ಬೆಳೆಗಳು ಬಾಡುತ್ತಿರುವುದರಿಂದ ರೈತರು ಕಂಗಾಲಾಗಿದ್ದು, ಹೇಗಾದರೂ ಮಾಡಿ ಬೆಳೆ ಉಳಿಸಿಕೊಂಡ್ರೆ ಒಪ್ಪೊತ್ತಿನ ಗಂಜಿಯಾದ್ರು ಸಿಗುತ್ತೆ ಅನ್ನೋ ಕನಸು ಕಂಡಿರೋ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ

ಬೆಳಗ್ಗೆಯಿಂದ ಸಂಜೆಯವರೆಗೆ ಆಕಾಶದಲ್ಲಿ ದಟ್ಟ ಮೋಡಗಳು ಆವರಿಸಿದ್ದರೂ, ಬೀಸುವ ಗಾಳಿಗೆ ಕರಗಿ ಮುಂದೆ ಸಾಗುತ್ತಿರುವುದು ರೈತರಲ್ಲಿ ತೀವ್ರ ನಿರಾಸೆ ಮೂಡಿಸುತ್ತಿದೆ.ಮೆಣಸಿನಕಾಯಿ ಈರುಳ್ಳಿ, ಹತ್ತಿ ಮತ್ತು ಮೆಕ್ಕೆಜೋಳ ಶೇಂಗಾ ಬೆಳೆಯುವ ನೀರಾವರಿ ಜಮೀನಿನ ರೈತರಲ್ಲೂ ಆತಂಕ ಹಾಗೂ ದುಗುಡ ಮನೆಮಾಡಿದೆ. ಮುಂದೇನು ಮಾಡುವುದು?’ ಎನ್ನುವ ಚಿಂತೆಯಲ್ಲಿ ರೈತರು ದಿನ ದೂಡುವಂತಾಗಿದೆ.

ಮಳೆ ಸುರಿದ ದಿನಗಳು ಕಡಿಮೆಯಾದ ಕಾರಣ ಭೂಮಿಯಲ್ಲಿ ತೇವಾಂಶ ಆರುತ್ತಿದೆ.ಬಿತ್ತನೆಯ ನಂತರದ ದಿನಗಳಲ್ಲಿ ಮುಂಗಾರು ಕೈಕೊಟ್ಟಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಆರಂಭದಲ್ಲಿ ಭರವಸೆ ಮೂಡಿಸಿದ್ದ ಮುಂಗಾರು ಮಳೆ ತದನಂತರದಲ್ಲಿ ಉತ್ತಮವಾಗಿ ಸುರಿಯದೇ ಇರುವುದರಿಂದ ಹೆಸರು ತೊಗರಿ,ಹತ್ತಿ ಸೂರ್ಯಕಾಂತಿ ಬೆಳೆಗಳು ತೇವಾಂಶ ಕೊರತೆಯಿಂದ ಕಮರಿಹೋಗುತ್ತಿದ್ದು ರೈತರಲ್ಲಿ ಆತಂಕವನ್ನು ಸಷ್ಟಿಸಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಮಣ್ಣೂರ ಶೇಷಗಿರಿ ಹೊಸೂರ ಶಿವಬಾಳನಗರ ಉಪ್ಪಾರವಾಡಿ ದೇವಪ್ಪ ನಗರ ರಾಮನಗರ ದಯಾನಂದನಗರ ಕುಡಗನೂರ ಶಿವೂರ ಕರಜಗಿ ಮಾಶಾಳ ಉಡಚಣ ಹಿರಿಯಾಳ ಭೋಸಗಾ ದುದ್ದಣಗಿ ಮಂಗಳೂರ ಅಳ್ಳಗಿ ಗೌರ ((ಸಿ)ಶಿರವಾಳ ಮಾತೋಳಿ ಮಲ್ಲಾಬಾದ ಚಿಂಚೋಳಿ ಬಡದಾಳ ರೇವೂರ ಕೋಗನೂರ ಆನೂರ ಬಿಲ್ವಾಡ ತೆಲ್ಲೂರ ಕೆರಕನಹಳ್ಳಿ ಬಂದರವಾಡ ಹಸರಗುಂಡಗಿ ಚಿಣಮಗೇರಾ ದೇವಲ ಗಾಣಗಾಪುರ ಸ್ಟೇಷನ್ ಗಾಣಗಾಪುರ ಗುಡೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮುಂಗಾರು ಮಳೆಯ ಆರಂಭದ ಭರವಸೆ ಮೇರೆಗೆ ಬಹುತೇಕ ರೈತರು ತೊಗರಿ, ಹತ್ತಿ ಶೇಂಗಾ,ಸೂರ್ಯಕಾಂತಿ ಬಿತ್ತನೆ ಮಾಡಿದ್ದರು ಆದರೆ ಈಗ ಮಳೆ ಅಭಾವ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.ಜೋರು ಮಳೆ ಇಲ್ಲ: ಮುಂಗಾರು ಹಂಗಾಮಿನ ಬಿತ್ತನೆ ಸಂದರ್ಭದಲ್ಲಿ ಸುರಿದ ಮಳೆಯಿಂದಾಗಿ ಭೂಮಿ ಹದವಾಗಿದ್ದರಿಂದ ರೈತರು ಖುಷಿಯಿಂದ ತೊಗರಿ, ಹತ್ತಿ ಸೇರಿದಂತೆ ಇತರೆ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ. ಬಿತ್ತನೆಗೈದು ಎರಡು ತಿಂಗಳು ಕಳೆದರೂ ಮಳೆ ಬಾರದ್ದರಿಂದ ಬೆಳೆದು ನಿಂತ ಬೆಳೆಗಳು ಮಳೆ ಇಲ್ಲದೇ ಬಾಡಿ ಹೋಗುತ್ತಿವೆ. ಆಗಾಗ ಜಿಟಿ ಜಿಟಿ ಮಳೆ ಬಂದರೂ ಅದು ಬೆಳೆಗಳಿಗೆ ತೇವಾಂಶ ತರುವಷ್ಟು ಸುರಿಯುತ್ತಿಲ್ಲ. ಬಿತ್ತ್ತನೆಗಾಗಿ ಸಾವಿರಾರು ರೂಪಾಯಿ ಖರ್ಚು

ಮಾಡಿದ ರೈತರ ಮುಖದಲ್ಲಿ ಚಿಂತೆಯ ಕಾರ್ಮೋಡಗಳು ಕವಿಯಲಾರಂಬಿಸಿವೆ. ಬಿತ್ತನೆ ಸಂದರ್ಭದಲ್ಲಿ ಮಳೆಯಾಗಿದ್ದರಿಂದ ಹಸಿಯಾಗಿದ್ದ ಭೂಮಿಯಲ್ಲಿ ಬೀಜಗಳು ಮೊಳಕೆ ಒಡೆದು ನೆಲ ಬಿಟ್ಟು ಮೇಲೆ ಬಂದಿದ್ದು ಈ ಸಂದರ್ಭದಲ್ಲಿ ಮಳೆಯಾಗದಿದ್ದರೆ ಬೆಳೆಗಳು ತೇವಾಂಶ ಕೊರತೆಯಿಂದಾಗಿ ಬಿಸಿಲಿಗೆ ಕಮರಿ ಹೋಗುತ್ತಿರುವುದು ನಡೆದಿದೆ..ಒಂದು ವಾರದೊಳಗೆ ಭೂಮಿ ಹಸಿಯಾಗುವಷ್ಟು ಮಳೆ ಬಾರದಿದ್ದರೆ ಬೆಳೆದು ನಿಂತ ಬೆಳೆಗಳು ಕಮರಿ ಹೋಗಲಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದು ಮಳೆ ಬಾರದಿದ್ದರೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ಬರಲಿದೆ. ಎಲ್ಲೆಲ್ಲೋ ಮಳೆಯಾಗುವ ಬಗ್ಗೆ ಕೇಳುತ್ತಿದ್ದೇವೆ ಇಲ್ಲಿ ಮಾತ್ರ ಒಂದು ಹನಿ ಮಳೆಯಾಗುತ್ತಿಲ್ಲ.ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ ಅಂತರ್ಜಲ ಮಟ್ಟ ಕುಸಿತ: ತಾಲೂಕಿನ ವಿವಿಧ ಗ್ರಾಮದ ರೈತರು ಬೋರವೆಲ್‌ಗಳ ಆಶ್ರಯದಿಂದ ಬೆಳೆಗಳಿಗೆ ನೀರು ಹರಿಸುತ್ತಿದ್ದರು. ಸದ್ಯ ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟಕಡಿಮೆ ಆಗಿ ಬೋರವೆಲ್‌ನಲ್ಲಿಯೂ ನೀರು ಕಡಿಮೆಯಾಗುತ್ತಿವೆ. ಇದ್ದ ನೀರನ್ನು ಬಳಸಿಕೊಳ್ಳಬೇಕೆಂದರೆ ಸಮರ್ಪಕ ವಿದ್ಯುತ್‌ ಪೂರೈಕೆ ಇಲ್ಲ.ಇದು ರೈತರಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ಸರ್ಕಾರ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಿ ರೈತರ ಪರವಾಗಿ ನಿಲ್ಲಬೇಕಾಗಿದೆ.

ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ.ಸರಕಾರ ರೈತರಿಗೆ ಪರಿಹಾರ ಒದಗಿಸಿ ರೈತರ ಹಿತ ಕಾಪಾಡಬೇಕಾಗಿದೆ ಎಂದು ತಾಲೂಕಿನ ಮಣ್ಣೂರ ಗ್ರಾಮದ ರೈತರಾದ ಕಲ್ಲಪ್ಪ ಅಲ್ಲಾಪೂರ ಕಾಶಿನಾಥ ಜೇವೂರ ಲಗಶೆಪ್ಪ ಭಾಸಗಿ ವೇಣುಮಾಧವ ಅವಧಾನಿ ಸಂಜೀವ ನನ್ನಾಜಿ ಶಿವಪುತ್ರ ನಿವರಗಿ ಸೋಮಯ್ಯ ಸಾಲೂಟಗಿ ಸಂತೋಷ ಅಲ್ಲಾಪೂರ ಭೀಮಾಶಂಕರ ಪೂಜಾರಿ ಮಹಮದ್ ಕರೀಮ ಮಂಗಲಗಿರಿ ಮಲಕಪ್ಪ ಕರಜಗಿ ಆಗ್ರಹಿಸಿದ್ದಾರೆ