ಕನ್ನಡಪ್ರಭ ವಾರ್ತೆ ಶಹಾಬಾದ್ ಮುಂಗಾರು ಮತ್ತು ಹಿಂಗಾರು ಬೆಳೆಗಳು ಸಂಪೂರ್ಣವಾಗಿ ಮಳೆ ಇಲ್ಲದೆ ಒಣಗುತ್ತಿವೆ, ಸಂಕಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಲು ಬರಗಾಲ ಘೋಷಣೆ ಮಾಡದ ಜಿಲ್ಲೆಯ ಮೂರು ಜನ ಸಚಿವರು ಇದ್ದರೂ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಶಾಸಕ ಬಸವರಾಜ ಮತ್ತಿಮುಡು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನ ವಾಡಿ ಕ್ರಾಸ್ ಬಳಿ ಬಿಜೆಪಿ ಹಾಗೂ ರೈತ ಮೋರ್ಚದ ವತಿಯಿಂದ ಬರಗಾಲ ಘೋಷಣೆಗೆ ಹಾಗೂ ವಿವಿಧ ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿ ಹಮ್ಮಿಕೊಂಡ ರಸ್ತಾರೋಕೋ ಚಳುವಳಿಯಲ್ಲಿ ಭಾಗವಹಿಸಿ ಮಾತನಾಡಿ, ರೈತರ ವಿಷಯದಲ್ಲಿ ತಾರತಮ್ಯ ಹಾಗೂ ರಾಜಕೀಯ ಮಾಡಬಾರದು ಅವರಿಗೆ ಸರ್ಕಾರದಿಂದ ನ್ಯಾಯಯುತವಾಗಿ ಸಿಗಬೇಕಾದ ಎಲ್ಲ ಸೌವಲತ್ತು ಪರಿಹಾರವನ್ನು ನೀಡಲು ಸರ್ಕಾರ ಕ್ರಮವಹಿಸಬೇಕು. ಕಳೆದ ಬಾರಿ ಅತಿಯಾದ ಮಳೆಯಿಂದ ಅನೇಕ ಗ್ರಾಮಗಳು ಜಲಾವೃತ್ತಗೊಂಡಿವೆ. ಇದುವರೆಗೂ ಆ ರೈತರ ಖಾತೆಗೆ ವಿಮೆ ಹಣ ಜಮೆ ಆಗಿಲ್ಲ. ಬಿಜೆಪಿ ಕ್ಷೇತ್ರದ ಗ್ರಾಮಗಳಿಗೆ ಕೇವಲ ಎಕರೆಗೆ 900 ರು. ನೀಡಿದ್ದಾರೆ ಕಾಂಗ್ರೆಸ್ ಕ್ಷೇತ್ರದ ಗ್ರಾಮಗಳಿಗೆ ಎಕರೆಗೆ 11 ಸಾವಿರಾರು ರು. ವಿಮೆ ಹಣ ಜಮಾವಣೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ರೈತರಿಗೆ ಸಿಗಬೇಕಾದ ನ್ಯಾಯಯುತ ವಿಮೆ ಹಣ ಜಮೆ ಮಾಡಬೇಕು, ರೈತರ ಸಾಲ ಮನ್ನಾ ಮಾಡಬೇಕು, ರೈತರಿಗೆ ಹೊಲಗಳಿಗೆ ಹೋಗಲು ಹಣದಿ ಹಾದಿಯ ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.