ರಾಮಕೃಷ್ಣ ದಾಸರಿ
ಒಂದು ಕಡೆ ಆವರಿಸಿರುವ ಬರ ಛಾಯೆ, ಮತ್ತೊಂದೆಡೆ ಬೇಡದ ವರವನ್ನು ಕರುಣಿಸಿರುವ ವರುಣದೇವ. ಹೀಗೆ ದ್ವಂದ್ವ ಸನ್ನಿವೇಶಕ್ಕೆ ರಾಯಚೂರು ಜಿಲ್ಲೆ ಸಾಕ್ಷಿಯಾಗಿ ನಿಂತಿದೆ.
ಕಳೆದ ಆರು ತಿಂಗಳಿನಿಂದ ಬೇಸಿಗೆ, ಅತೀ ಬೇಸಿಗೆ, ಶೆಖೆಯ ಅನುಭವ, ಬತ್ತಿದ ಅಂತರ್ಜಲ, ನದಿ, ಭಾವಿ, ಹಳ್ಳ- ಕೊಳ್ಳ, ಕೆರೆ-ಕಟ್ಟೆ, ಬರಡು ಭೂಮಿ ಹಾಗೂ ಒಣಗಿದ ಬೆಳೆ ಗಳನ್ನೇ ಕಾಣುತ್ತಿರುವ ಜನ ಸಾಮಾನ್ಯರು ವಾರದಿಂದ ಮಳೆ, ಮೋಡ ಕವಿದ ವಾತಾವರಣ,ತಪ್ಪು ಹಾಗೂ ಚಳಿಯ ಅನುಭೂತಿಯನ್ನು ಅನುಭವಿಸಲಾರಂಭಿಸಿದ್ದಾರೆ.ಇಷ್ಟು ದಿನ ಮಳೆ ಕೊರತೆ, ಬರದ ಛಾಯೆ ಪಸರಿಸುತ್ತಿದ್ದ ವೇಳೆಯಲ್ಲಿ ನಿರಂತರವಾಗಿ ಸುರಿದ ಮಳೆಯು ವಾರದಲ್ಲಿಯೇ ಸಂಪೂರ್ಣ ವಾತಾವರಣವನ್ನು ಬದಲಾಯಿಸಿದೆ. ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸುರಿಯುತ್ತಿರುವ ಮಳೆಯು ಇದು ಮಳೆಗಾಲವೇ ಬಿಡಿ ಎನ್ನುವುದನ್ನು ನೆನಪಿಸುವಂತೆ ಮಾಡಿದೆ.
ಕರಗುತ್ತಿದೆ ಮಳೆ ಕೊರತೆ ಪ್ರಮಾಣ : ತೀವ್ರ ಮಳೆಯ ಕೊರತೆಯನ್ನು ಎದುರಿಸುತ್ತಿರುವ ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಮಳೆಯು ಕೊರತೆ ಪ್ರಮಾಣವನ್ನು ಕರಗು ವಂತೆ ಮಾಡುತ್ತಿದೆ. ಮುಂಗಾರು ಹಂಗಾಮಿನಲ್ಲಿಯೇ ಶೇ.45 ರಷ್ಟು ಮಳೆಯ ಕೊರತೆ ಉಂಟಾಗಿ ಕೃಷಿ ಚಟುವಟಿಕೆಗಳಿಗೆ ತೀರಾ ಹಿನ್ನಡೆ, ನಗರ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿತ್ತು. ಇದೀಗ ಕಳೆದ ಜು.14 ರಿಂದ ಜು.22 ವರೆಗೆ ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ಶೇ.63 ಮಿಮೀ, ಲಿಂಗಸುಗೂರಿನಲ್ಲಿ 30, ಮಾನ್ವಿಯಲ್ಲಿ 53, ರಾಯಚೂರಿನಲ್ಲಿ 79, ಸಿಂಧನೂರಿನಲ್ಲಿ 17, ಮಸ್ಕಿಯಲ್ಲಿ 16,ಸಿರವಾದಲ್ಲಿ 33 ಮತ್ತು ಅರಕೇರಾ ತಾಲೂಕಿನಲ್ಲಿ ಶೇ.41 ಮಿಮೀ ನಷ್ಟು ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ವಾರದಲ್ಲಿ ವಾಡಿಕೆ ರೀತ್ಯ 23 ಮಿಮೀನಲ್ಲಿ 42 ಮಿಮೀ ನಷ್ಟು ಮಳೆ ಸುರಿದಿದ್ದು ಶೇ.83 ಮಿಮೀ ಮಳೆಯಾಗಿದೆ.
ಮುಂಗಾರು ಸಂಪೂರ್ಣ ವಿಫಲ ಬರ ಘೋಷಣೆಗೆ ಆಗ್ರಹ : ಮಳೆಯಾಶ್ರಿತ ಪ್ರದೇಶದಲ್ಲಿ ಅರೆಬರೆ ಬಿತ್ತನೆಯಾದರು ಆಗಿದೆ ಆದರೆ ನೀರಾವರಿ ಪ್ರದೇಶದ ಜಮೀನುಗಳಲ್ಲಿ ಬಿತ್ತನೆ ಮಾಡಿಲ್ಲ.ಮುಂಗಾರು ಸಂಪೂರ್ಣ ವಿಫಲ, ಮಳೆ ಅಭಾವದಿಂದ ಆವರಿಸಿರುವ ಬರ ಪರಿಸ್ಥಿತಿನ ನಡುವೆಯೂ ಕೇವಲ ಶೇ.44 ರಷ್ಟು ಮಾತ್ರ ಮುಂಗಾರು ಬಿತ್ತನೆ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಒಟ್ಟಾರೆ 5,72,375 ಹೆಕ್ಟೇರ್ ಕೃಷಿ ಭೂಮಿಯ್ಲಲಿ ಕೇವಲ 2,50,711 ಹೆಕ್ಟೇರ್ ಬಿತ್ತನೆಯಾಗಿದ್ದು, ಇದರಲ್ಲಿ ಖುಷ್ಕಿ 3,10,225 ಹೆಕ್ಟೇರ್ ಗುರಿಯಲ್ಲಿ 2,02,743 (ಶೇ.66) ರಷ್ಟು ಬಿತ್ತನೆ ಮಾಡಲಾಗಿದೆ. ನೀರಾವರಿ ಪ್ರದೇಶದಲ್ಲಿ ಒಟ್ಟು 2,62,150 ಹೆಕ್ಟೇರ್ ಗುರಿಯಲ್ಲಿ ಕೇವಲ 47,968 (ಶೇ.18) ರಷ್ಟು ಮಾತ್ರ ಬಿತ್ತೆಯಾಗಿದೆ.
ಬರ ಘೋಷಿಸಿ ಪರಿಹಾರ ಕೊಡಿ:
ರಾಯಚೂರು ಸೇರಿ ರಾಜ್ಯದ ಅರ್ಧಕ್ಕೂ ಹೆಚ್ಚು ಪ್ರದೇಶದಲ್ಲಿ ಮಳೆಯ ತೀವ್ರ ಅಭಾವ ಸೃಷ್ಠಿಯಾಗಿ ಮುಂಗಾರು ಹಂಗಾಮು ವೈಫಲ್ಯಗೊಂಡಿದೆ. ಇದರಿಂದಾಗಿ ರೈತರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ತಕ್ಷಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬರ ಪ್ರದೇಶವೆಂದು ಘೋಷಣೆ ಮಾಡಿ ಪರಿಷ್ಕೃತ ಪರಿಹಾರ ಒದಗಿಸಬೇಕು ಅದರ ಜೊತೆಗೆ ಗ್ರಾಮೀಣ ಭಾಗದ ಜನರಿಗೆ ಕೆಲಸ ಕೊಡುವುದರ ಮುಖಾಂತರ ಗುಳೆ ತಪ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.