ಬರ ಪರಿಹಾರ, ಬೆಳೆ ವಿಮೆ ತಾರತಮ್ಯಕ್ಕೆ ಅನ್ನದಾತರ ಆಕ್ರೋಶ

KannadaprabhaNewsNetwork |  
Published : May 23, 2024, 01:08 AM ISTUpdated : May 23, 2024, 12:49 PM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಬರ ಪರಿಹಾರ, ಬೆಳೆ ವಿಮೆ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

 ಚಿತ್ರದುರ್ಗ :  ಬರ ಪರಿಹಾರ ಮತ್ತು ಬೆಳೆ ವಿಮೆ ತಾರತಮ್ಯ ನಿವಾರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾನಿರತ ರೈತರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸುಮಾರು ಅರ್ಧ ಗಂಟೆಗಳ ಕಾಲ ವಾಹನಗಳ ಸಂಚಾರವನ್ನು ತಡೆದು ಆಕ್ರೋಶ ಹೊರ ಹಾಕಿದರು.

ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ತೆರೆಯಲಾಗಿರುವ ಬರ ಪರಿಹಾರ ಸಹಾಯವಾಣಿ ಕೇಂದ್ರದಲ್ಲಿ ರೈತರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ದಾಖಲೆಗಳನ್ನು ಕೊಡಿ ಪರಿಶೀಲಿಸಿ ಹೇಳುತ್ತೇವೆಂಬ ಉತ್ತರ ಕೊಡುತ್ತಿದ್ದಾರೆ. ಬೋರ್ ಕೊರೆಸಿರುವ ರೈತರ ಜಮೀನುಗಳನ್ನು ನೀರಾವರಿ ಎಂದು ನಮೂದಿಸಿರುವುದರಿಂದ ಅನೇಕರಿಗೆ ಬೆಳೆ ವಿಮೆ, ಬರ ಪರಿಹಾರದ ಹಣ ಕೈಸೇರುತ್ತಿಲ್ಲ. ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ರೈತರು ದೂರಿದರು.

ಗೋಮಾಳ, ಅರಣ್ಯ ಭೂಮಿ, ಬಗರ್ ಹುಕುಂ, ಹುಲ್ಲುಬನ್ನಿ ಖರಾಬ್, ಸೇಂದಿವನ ಸಾಗುವಳಿ ಮಾಡಿರುವ ರೈತರೂ ಬರದಿಂದ ತತ್ತರಿಸಿದ್ದಾರೆ. ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ತೊಗರಿ, ರಾಗಿ, ಸಜ್ಜೆ, ಹತ್ತಿ, ಸೂರ್ಯಕಾಂತಿ, ತೋಟಗಾರಿಕೆ ಬೆಳೆಗಳು, ಹೂವು ಬೆಳೆಯುವಂತ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಮೂವತ್ತೈದು ಸಾವಿರ ರು.ಗಳನ್ನು ಶೀಘ್ರವಾಗಿ ನೀಡುವಂತೆ ರೈತರು ಒತ್ತಾಯಿಸಿದರು.

ಪ್ರತಿಭಟನಾನಿರತ ರೈತರ ಬಳಿ ಬಂದು ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಲ್ಲೆಲ್ಲಿ ಸಮಸ್ಯೆ, ವ್ಯತ್ಯಾಸವಾಗಿದೆ ಎನ್ನುವುದನ್ನು ಸರಿಪಡಿಸಿ ಕೂಡಲೇ ರೈತರ ಖಾತೆಗಳಿಗೆ ಬೆಳೆವಿಮೆ, ಬರ ಪರಿಹಾರ ಹಣವನ್ನು ಜಮ ಮಾಡಲಾಗುವುದು. ಕೆಲವು ಕಡೆ ಐಎಫ್ಎಸ್.ಸಿ ಕೋಡ್‍ಗಳಲ್ಲಿ ವ್ಯತಾಸವಿದೆ. ಮತ್ತೆ ಕೆಲವು ರೈತರ ಜಮೀನುಗಳು ನೀರಾವರಿ ಎಂದು ನಮೂದಾಗಿರುವುದರಿಂದ ಹಣ ಜಮ ಮಾಡುವಲ್ಲಿ ವಿಳಂಭವಾಗುತ್ತಿದೆ. ಇಂತಹ ಅನೇಕ ಅಡಚಣೆ ಗಳಿರುವುದರಿಂದ ಕೃಷಿ ಇಲಾಖೆ ಅಧಿಕಾರಗಳ ಜೊತೆ ಮಾತನಾಡಿದ್ದೇನೆ. ಆದಷ್ಟು ಬೇಗನೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.

ಕೊಳವೆ ಕೊರೆಸಿ ಕೊಂಡಾಕ್ಷಣ ರೈತರ ಜಮೀನುಗಳನ್ನು ನೀರಾವರಿ ಎಂದು ನಿರ್ಧರಿಸುವುದು ತಪ್ಪು. ಸರ್ಫೆಸ್ ವಾಟರ್ ಹರಿಸಿಕೊಂಡು ಯಾರು ಕೃಷಿ ಮಾಡುತ್ತಾರೋ ಅಂತಹ ಜಮೀನುಗಳನ್ನು ನೀರಾವರಿ ಎನ್ನಬಹುದು. ರೈತರ ಸಾಲಕ್ಕೆ ಬರ ಪರಿಹಾರದ ಹಣವನ್ನು ಜಮ ಮಾಡಿಕೊಳ್ಳುವಂತಿಲ್ಲ ಎಂದು ಈಗಾಗಲೆ ಬ್ಯಾಂಕ್‍ನವರಿಗೆ ಆದೇಶ ಮಾಡಿದ್ದೇನೆ. ಇದನ್ನು ಮೀರಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ರೈತರು ಆತಂಕ ಪಡುವುದು ಬೇಕಿಲ್ಲ ಎಂದರು.

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಡಾ.ವಾಸುದೇವ ಮೇಟಿ, ಜಿಲ್ಲಾಧ್ಯಕ್ಷ ಈ.ಎನ್.ಲಕ್ಷ್ಮಿಕಾಂತ್ ಲಿಂಗಾವರಹಟ್ಟಿ, ಕಾರ್ಯಾಧ್ಯಕ್ಷ ಓಂಕಾರಪ್ಪ, ಕೆಂಚಪ್ಪನಾಯಕ, ರಮೇಶ್ ಗುಂಡ್ಲೂರು, ಶ್ರೀಧರರೆಡ್ಡಿ ದೊಗ್ಗಲ್, ಸತ್ಯಪ್ಪ ಮಲ್ಲಾಪುರ, ಕುಮಾರ, ಬಿ.ಟಿ ಮೋಹನ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ