ಫ್ರುಟ್ಸ್ ತಂತ್ರಾಂಶದಲ್ಲಿ ರೈತರ ಬೆಳೆ ದಾಖಲಾದ್ರೆ ಮಾತ್ರ ಬರ ಪರಿಹಾರ

KannadaprabhaNewsNetwork |  
Published : Oct 13, 2023, 12:15 AM IST
ಚಿತ್ರದುರ್ಗ ಮೂರನೇ ಪುಟದ ಫ್ಲೇಯರ್ | Kannada Prabha

ಸಾರಾಂಶ

ಬರ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿರುವ ಅಂಕಿ-ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರ ವಿಸ್ತೀರ್ಣ ಹಾಗೂ ಬೆಳೆಯನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಾಪ್ರಭು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರೈತರಲ್ಲಿ ಜಿಲ್ಲಾಧಿಕಾರಿ ದಿವ್ಯಾಪ್ರಭು ಮನವಿ । ಜಿಲ್ಲೆಯಾದ್ಯಂತ 15 ದಿನಗಳ ಕಾಲ ಫ್ರುಟ್ಸ್ ನೋಂದಣಿ ಅಭಿಯಾನ ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಬರ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿರುವ ಅಂಕಿ-ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರ ವಿಸ್ತೀರ್ಣ ಹಾಗೂ ಬೆಳೆಯನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಾಪ್ರಭು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸರ್ಕಾರ ಈಗಾಗಲೆ ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ. ಜಿಲ್ಲೆಯಲ್ಲಿ ಒಟ್ಟು 6,10,353 ಕೃಷಿ ಯೋಗ್ಯ ತಾಕುಗಳಿದ್ದು (ಸರ್ವೇ ನಂಬರ್/ ಪೋಡುಗಳು), ಇವುಗಳಲ್ಲಿ ಈಗಾಗಲೆ 4,04,845 ತಾಕುಗಳನ್ನು ಫ್ರುಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿರುತ್ತದೆ. ಇನ್ನೂ 2,05,508 ತಾಕುಗಳ ಜೋಡಣೆ ಕಾರ್ಯ ಬಾಕಿ ಉಳಿದಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 3,07,160 ರೈತರು 4,04,845 ಸರ್ವೇ ನಂಬರ್‌ಗಳನ್ನು ಫ್ರುಟ್ಸ್ ತಂತ್ರಾಂಶದಡಿ ಜೋಡಣೆ ಮಾಡಿಸಿ, ವಿಶಿಷ್ಟ ಗುರುತಿನ ಸಂಖ್ಯೆ (ಎಫ್.ಐಡಿ) ಪಡೆದಿದ್ದಾರೆ. ಉಳಿದಂತೆ 2,05,508 ತಾಕುಗಳನ್ನು (ಸರ್ವೇ ನಂಬರ್/ ಪೋಡುಗಳು) ಜೋಡಣೆ ಮಾಡಿಸಿಕೊಳ್ಳಲು ಬಾಕಿ ಇದ್ದು, ರೈತರು ಶೀಘ್ರ ಜೋಡಣೆ ಮಾಡಿಸಿಕೊಳ್ಳಬೇಕು ಎಂದಿದ್ದಾರೆ. ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ನಷ್ಟ ವಿವರವನ್ನು ನಮೂದಿಸಿ, ಅದಕ್ಕನುಗುಣವಾಗಿ ಪರಿಹಾರ ಮೊತ್ತ ನೀಡುವ ವ್ಯವಸ್ಥೆ ಇತ್ತು. ಸರ್ಕಾರವು 2023ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆ ಮತ್ತು ಫ್ರುಟ್ಸ್ ನಲ್ಲಿ ನೋಂದಣಿಯಾಗಿರುವ ಬೆಳೆ ಮತ್ತು ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿರುವುದರಿಂದ, ಈಗಾಗಲೆ ಫ್ರುಟ್ಸ್ ನಲ್ಲಿ ನೋಂದಣಿಯಾಗಿರುವ 3,07,160 ರೈತರು ತಮ್ಮ ಜಮೀನಿನ ಯಾವುದೇ ಸರ್ವೇ ನಂಬರ್ ಬಿಟ್ಟುಹೋಗದಂತೆ, ಎಲ್ಲಾ ಸರ್ವೇ ನಂಬರ್ ಗಳನ್ನು ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಇದುವರೆಗೂ ಫ್ರುಟ್ಸ್ ನಲ್ಲಿ ನೋಂದಣಿ ಆಗದೇ ಇರುವ ರೈತರು ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕ ವಿವರಗಳನ್ನು ಫ್ರುಟ್ಸ್‌ನಲ್ಲಿ ದಾಖಲಿಸಿಕೊಂಡು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ವಿವಿಧ ಇಲಾಖೆಗಳ ಸೌಲಭ್ಯ ಪಡೆದುಕೊಳ್ಳುವಂತೆ ಕೋರಲಾಗಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂದರ್ಭದಲ್ಲಿ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳಾಗಲು ಹಾಗೂ ಪರಿಹಾರ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲು ರೈತರು ಫ್ರುಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿ, ಎಫ್‍ಐಡಿ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿದೆ. ಜಿಲ್ಲೆಯಾದ್ಯಂತ 15 ದಿನಗಳ ಕಾಲ ಪ್ರೂಟ್ಸ್ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಕೂಡಲೆ ಜೋಡಣೆ ಮಾಡಲು ಆಯಾ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳು, ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅದ್ಧೂರಿ ಮಾರಿಕಾಂಬೆ ಉತ್ಸವ ಮೂರ್ತಿ ಮೆರವಣಿಗೆ
ಗುರಿ ಸಾಧನೆಗೆ ಶ್ರಮ ಮುಖ್ಯ: ಭುವನೇಶ್ವರಿ