ಮುಂದಿನ ವಾರದಲ್ಲಿ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ: ಡಾ। ಪರಂ

KannadaprabhaNewsNetwork |  
Published : Aug 30, 2026, 01:30 AM IST
9 | Kannada Prabha

ಸಾರಾಂಶ

ಈ ತಿಂಗಳ ಕೊನೆಗೆ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕೇಂದ್ರಕ್ಕೆ ಬರ ವರದಿಯನ್ನು ಸಲ್ಲಿಸುತ್ತೇವೆ ಎಂದು ಕಂದಾಯ ಸಚಿವರೂ ಆಗಿರುವ ಡಿಸಿಎಂ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಈ ತಿಂಗಳ ಕೊನೆಗೆ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕೇಂದ್ರಕ್ಕೆ ಬರ ವರದಿಯನ್ನು ಸಲ್ಲಿಸುತ್ತೇವೆ ಎಂದು ಕಂದಾಯ ಸಚಿವರೂ ಆಗಿರುವ ಡಿಸಿಎಂ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

ಶನಿವಾರ ಮಾತನಾಡಿದ ಅವರು, ರಾಜ್ಯದಲ್ಲಿ 101 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದೇವೆ. ಇನ್ನೂ 15 ದಿನಗಳಿಗೆ ಪರಿಶೀಲನೆ ಮಾಡುತ್ತೇವೆ. ಆ ಬಳಿಕ ಕೆಲವು ತಾಲೂಕುಗಳು ಬರಪೀಡಿತ ಪ್ರದೇಶದ ವರ್ಗಕ್ಕೆ ಬರುವ ಸಾಧ್ಯತೆ ಇರುತ್ತದೆ. ಅವುಗಳ ಆಧಾರದ ಮೇಲೆ ಮತ್ತೆ ಘೋಷಣೆ ಮಾಡುತ್ತೇವೆ ಎಂದರು.

ಬೆಳೆ ನಷ್ಟವನ್ನು ಅಂದಾಜು ಮಾಡಲಾಗುತ್ತಿದ್ದು, ಅದರ ಆಧಾರದ ಮೇಲೆ ಮೊಮೊರಾಂಡಮ್‌ ಅನ್ನು ಸಿದ್ಧಪಡಿಸುತ್ತೇವೆ. ಆ ಬಳಿಕ ಕೇಂದ್ರದಿಂದ ತಂಡಗಳು ಬಂದು ರಾಜ್ಯದಲ್ಲಿ ಸಮೀಕ್ಷೆ ನಡೆಸುತ್ತಾರೆ. ನಂತರ ಬರ ಪರಿಹಾರ ಬಿಡುಗಡೆಯಾಗುತ್ತದೆ ಎಂದರು.

ರೈತರಿಗೆ ಪರಿಹಾರ ಕುರಿತು ನಿರ್ಧರಿಸುತ್ತೇವೆ. ಕುಡಿಯುವ ನೀರು, ಮೇವು, ಗುಳೆ ತಪ್ಪಿಸಲು ಕಾಮಗಾರಿ ಕೈಗೊಳ್ಳುವುದು ನಮ್ಮ ಆದ್ಯತೆ. ರಾಜ್ಯದಲ್ಲಿ 2023ರಲ್ಲಿ ಉಂಟಾದ ಬರಗಾಲದಿಂದ 39000 ಕೋಟಿ ರು. ನಷ್ಟವಾಗಿತ್ತು. 18000 ಕೋಟಿ ರು. ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಾವು ದೆಹಲಿಯಲ್ಲಿ ಹೋಗಿ ಪ್ರತಿಭಟಿಸಿ, ಸುಪ್ರೀಂ ಕೋರ್ಟ್‌ ನಿರ್ದೇಶನದ ಬಳಿಕ 3500 ಕೋಟಿ ರು. ಬಿಡುಗಡೆ ಮಾಡಿದರು. ಈ ಬಾರಿ ಹಾಗಾಗಬಾರದು ಎಂದರು.

ಕಳೆದ ಬಾರಿಯ ಘಟನೆ ಮರುಕಳಿಸದಂತೆ ಈ ಬಾರಿ ನಾನು ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ಎಸ್‌ಡಿಆರ್‌ಎಫ್‌ನಲ್ಲಿ 1200 ಕೋಟಿ ರು. ಕೊಡಲು ತೀರ್ಮಾನಿಸಿದ್ದಾರೆ. ಇನ್ನೂ ಅದನ್ನು ನಮಗೆ ಕೊಡಬೇಕು. ನಮ್ಮದು ಶೇ.25 ಹಾಗೂ ಕೇಂದ್ರದಿಂದ ಶೇ.75 ಇರುತ್ತೆ. 1200 ಕೋಟಿ ರು. ತಕ್ಷಣ ಬಿಡುಗಡೆ ಮಾಡಿ ಎಂದು ಕೇಂದ್ರಕ್ಕೆ ಹೇಳಿದ್ದೇವೆ. ಅದು ಬಿಡುಗಡೆಯಾದರೆ ನಾವು ನಮ್ಮ ರೈತರಿಗೆ ಪರಿಹಾರ ಕೊಡಲು ಅನುಕೂಲವಾಗುತ್ತದೆ. ಒಂದು ವಾರ ಅಥವಾ 10 ದಿನಗೊಳಗಾಗಿ ಹಣವನ್ನು ರೈತರಿಗೆ ಕೊಟ್ಟುಬಿಡುತ್ತೇವೆ ಎಂದು ವಿವರಿಸಿದರು.ನಾಗೇಂದ್ರ ರಾಜೀನಾಮೆ ಕೊಡೋ ಅವಶ್ಯಕತೆ ಇರಲಿಲ್ಲ: ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇರಲಿಲ್ಲ ಎಂದು ಡಿಸಿಎಂ ಡಾ। ಜಿ.ಪರಮೇಶ್ವರ್‌ ತಿಳಿಸಿದರು. ಶನಿವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡಿದ್ದಾರೆ. ಎರಡು ಬಾರಿ ರಾಜೀನಾಮೆ ಕೊಡಿಸಿ ರಾಜಕೀಯ ಮಾಡಿದರು. ನಾಗೇಂದ್ರ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕ್ಕೆ ಮುಜುಗರ ಆಗಬಾರದು ಎಂದು ರಾಜೀನಾಮೆ ಕೊಟ್ಟಿದ್ದಾರೆ ಎಂದರು. ಇ.ಡಿ., ಸಿಬಿಐನಲ್ಲಿ ನಾಗೇಂದ್ರ ಹೆಸರು ಉಲ್ಲೇಖ ಇಲ್ಲ. ನಾಗೇಂದ್ರ ಹಣದ ಪಡೆದಿರುವ ಬಗ್ಗೆಯೂ ಸಾಕ್ಷಿಯೂ ಇಲ್ಲ. ನಾನು ಗೃಹ ಮಂತ್ರಿ ಆಗಿದ್ದಾಗಲೇ ಬಹುತೇಕ ₹79 ಕೋಟಿ ಜಪ್ತಿ ಆಗಿತ್ತು. ₹5 ಕೋಟಿ ಜಪ್ತಿ ಪ್ರಕ್ರಿಯೆಯಲ್ಲಿದೆ. ಅಲ್ಲೆಲ್ಲೂ ನಾಗೇಂದ್ರ ಹೆಸರು ಇಲ್ಲ ಎಂದರು.ನಾವು ಮುಂದಿನ ದಿನಗಳಲ್ಲಿ ವಸ್ತುಸ್ಥಿತಿ ಬಗ್ಗೆ ಜನರ ಮುಂದೆ ತಿಳಿಸುತ್ತೇವೆ. ಬಿಜೆಪಿಯವರು ಸದನದಲ್ಲಿ ಈ ಪ್ರಶ್ನೆ ಕೇಳಿ ಎಂದ್ರು ಕೇಳಲಿಲ್ಲ. ಅವರು ಬರಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು ಅವರು ಆರೋಪಿಸಿದರು.

ಎಲ್ಲರಿಗೂ ಒಂದೇ ಕಾನೂನು:

ಪ್ರಿಯಾಂಕ್ ಖರ್ಗೆ ತನ್ನ ಹಗರಣ ಮುಚ್ಚಿಕೊಳ್ಳಲು ಗೃಹ ಇಲಾಖೆ ಪಡೆದಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ.ಎಲ್ಲರ ಮೇಲೂ ಎಲ್ಲದಕ್ಕೂ ಅಪಾದನೆ ಮಾಡೋದು ಕುಮಾರಸ್ವಾಮಿ ಕೆಲಸ. ಅದಕ್ಕೆ ತಕ್ಕಂತ ದಾಖಲೆಗಳು ಇದ್ದರೆ ಕೊಡಲಿ ಕಾನೂನು ಚೌಕಟ್ಟಿನಲ್ಲಿ ಏನು ಬೇಕಾದರೂ ಮಾಡಲಿ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ನನಗೂ ಒಂದೇ, ಕುಮಾರಸ್ವಾಮಿಗೂ ಒಂದೇ, ಪ್ರಿಯಾಂಕಾ ಖರ್ಗೆಗೂ ಒಂದೇ ಎಂದರು.

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಮೌನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸದನಕ್ಕೂ ಬಂದಿದ್ದರು. ಈಗ ಎರಡು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಬಳಿಕ ಅವರು ಕೂಡ ಶುರು ಮಾಡುತ್ತಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ಹಣ ವಾಪಾಸ್‌ವರೆಗೂ ಹೋರಾಟ: ಬಿವೈವಿ
ಹೆಗಡೆ ಹೆಸರು ಶಾಶ್ವತಗೊಳಿಸಲು ಹಲವು ಯೋಜನೆ: ಸಿಎಂ