ರೈತ ಸಂಕಷ್ಟವನ್ನು ದೂರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೃಷಿಗಾಗಿ ಮಾಡಿರುವ ಸಾಲವನ್ನು ಒಂದು ವರ್ಷಗಳ ಕಾಲ ಮರುಪಾವತಿಗೆ ಒತ್ತಾಯ ಮಾಡುವಂತಿಲ್ಲ ಎಂಬ ಸೂಚನೆ ನೀಡಿದ್ದಾರೆ. ಹೀಗಾಗಿ ಒಣ ಬೇಸಾಯದೊಂದಿಗೆ ರೈತರು ಜೀವನ ಕಟ್ಟಿಕೊಳ್ಳಬೇಕು.
ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಪ್ರಸ್ತುತ ಬರಗಾಲದ ಸನ್ನಿವೇಶದಲ್ಲಿ ಸರ್ಕಾರ ಜನರಿಗೆ ಕುಡಿಯುವ ನೀರು, ಜಾನುವಾರುಗಳ ಮೇವುವಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ತಾಲೂಕಿನ ಕಿರುಗಾವಲು ವೀರಭದ್ರೇಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಉದ್ಘಾಟಿಸಿ ಮಾತನಾಡಿದ ಸಚಿವರು, ಬರಗಾಲದ ಸಂಕಷ್ಟ ಎದುರಾಗಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವಂತೆ ಸಲಹೆ ನೀಡಿದರು.
ರೈತ ಸಂಕಷ್ಟವನ್ನು ದೂರ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೃಷಿಗಾಗಿ ಮಾಡಿರುವ ಸಾಲವನ್ನು ಒಂದು ವರ್ಷಗಳ ಕಾಲ ಮರುಪಾವತಿಗೆ ಒತ್ತಾಯ ಮಾಡುವಂತಿಲ್ಲ ಎಂಬ ಸೂಚನೆ ನೀಡಿದ್ದಾರೆ. ಹೀಗಾಗಿ ಒಣ ಬೇಸಾಯದೊಂದಿಗೆ ರೈತರು ಜೀವನ ಕಟ್ಟಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜೊತೆಗೆ ಅಭಿವೃದ್ಧಿ ಯೋಜನೆಗಳಿಗೆ ಹಣ ವಿನಿಯೋಗಿಸುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹಲವು ಜಾರಿಗೆ ತರಲಾಗಿದೆ. ಗ್ಯಾರಂಟಿ ಯೋಜನೆ ಸಮಸ್ಯೆ ಸಂಪೂರ್ಣ ಬಗೆಹರಿಸುವ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿ ಯೋಜನೆಗೆ ಸದಸ್ಯರನ್ನು ಆಯ್ಕೆ ಮಾಡಲಾಗುವುದು ಎಂದರು.
ಶಿಕ್ಷಣ, ಆರೋಗ್ಯ, ವಿದ್ಯುತ್, ನೀರಾವರಿ, ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಯೋಜನೆಗಳನ್ನು ತಂದು ಕ್ಷೇತ್ರದ ಅಭಿವೃದ್ದಿಯೊಂದಿಗೆ ಮಳವಳ್ಳಿ ಇದೆ ಎನ್ನುವುದನ್ನು ಸಾಬೀತು ಪಡಿಸಿದ್ದೇನೆ. ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಪ್ರತಿ ಶನಿವಾರ ತಾಲೂಕು ಆಡಳಿತದಿಂದ ನಡೆಯಲಿರುವ ಪ್ರಜಾ ಸೇವೆ ಆಂದೋಲನದಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕಚೇರಿಗಳಲ್ಲಿ ನಡೆಯುತ್ತಿರುವ ಶೋಷಣೆ ಹಾಗೂ ಸಾರ್ವಜನಿಕ ಅಲೆದಾಟ ತಪ್ಪಿಸುವ ಉದ್ದೇಶದಿಂದ ಮನೆ ಬಾಗಿಲಿಗೆ ಅಧಿಕಾರಿಗಳು ಆಗಮಿಸಿ ಕುಂದು ಕೊರತೆ ಆಲಿಸಿ ಪರಿಹರಿಸಲಿದ್ದಾರೆ. ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪ್ರತಿ ತಿಂಗಳ 1 ಮತ್ತು 3ನೇ ಶನಿವಾರ ತಾಲೂಕು, ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿಯೂ ಸಭೆ ನಡೆಯಲಿದೆ. ಸಭೆಯಲ್ಲಿ ಜನರು ಸಲ್ಲಿಸುವ ಅರ್ಜಿಗಳು ನೋಂದಾವಣೆಯಾಗುವುದರಿಂದ ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಸಿಗಲಿದೆ. ಕಚೇರಿಗಳಿಗೆ ಅಲೆಯುವ ಬದಲು ಸ್ಥಳೀಯವಾಗಿ ಸಭೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದರು.
ಇದೇ ವೇಳೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ರೈತರು, ಸಾರ್ವಜನಿಕರು 100ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರು. ಸಚಿವರು ಭಾಗ್ಯಲಕ್ಷ್ಮಿ ಬಾಂಡ್ ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ, ಉಪ ನಿರ್ದೇಶಕಿ ಮಾಲತಿ, ತಹಸೀಲ್ದಾರ್ ಎಸ್.ವಿ.ಲೋಕೇಶ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ, ಕಾವೇರಿ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕೃಷ್ಣ ಬಾಬುದೇವ್, ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ತಾಲೂಕು ಅಧ್ಯಕ್ಷ ಪಿ.ಮಾದೇಶ್ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.