ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆ । ರಾಜ್ಯ ಬಿಜೆಪಿ ಬರ ಪ್ರವಾಸಕ್ಕೆಹೋಗಲ್ಲ
ಕನ್ನಡಪ್ರಭ ವಾರ್ತೆ ಹೊನ್ನಾಳಿಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ನ. 4, 5, ಮತ್ತು 6 ರಂದು ಬರ ಪರಿಸ್ಥಿತಿ ಅಧ್ಯಯನ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಂಡಲ ಅಧ್ಯಕ್ಷರ ನೇತೃತ್ವದಲ್ಲಿ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು, ಜಿಲ್ಲಾಮಟ್ಟದ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ಮೂರು ತಿಂಗಳ ಹಿಂದೆಯೇ ಹೊನ್ನಾಳಿ, ನ್ಯಾಮತಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಬರ ಅಧ್ಯಯನ ಕೈಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಕೃಷಿ ಸಚಿವ ಚಲುವರಾಯಸ್ವಾಮಿಯವರ ಭೇಟಿಯಾಗಿ ಬರಗಾಲ ಪಟ್ಟಿಗೆ ಸೇರಿಸಲು ಮನವಿ ಮಾಡಿದ್ದೆ, ಅದರಂತೆ ಭರವಸೆ ನೀಡಿದ ಬಳಿಕ ಅವಳಿ ತಾಲೂಕನ್ನು ಬರ ಪಟ್ಟಿಗೆ ಸೇರಿಸಿದರು, ಆದರೆ ಈ ವರೆಗೂ ಹಣ ಬಿಡುಗಡೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದೀಗ ಮತ್ತೆ ಅವಳಿ ತಾಲೂಕಿನಾದ್ಯಂತ ಮೂರು ದಿನ ಬರ ಪರಿಸ್ಥಿತಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಕೂಡಲೇ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು ಎಂದರು.
ಬಿಎಸ್‌ವೈ ವಿರುದ್ಧ ಷಡ್ಯಂತ್ರ:ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಂದರ್ಭದಲ್ಲಿ ಅವರ ತಪ್ಪು ನಿರ್ಧಾರಗಳ ಬಗ್ಗೆಯೂ ಹೇಳಿದ್ದೇನೆ. ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿ ಇಡೀ ರಾಜ್ಯದ ಜನರು ಸಂಭ್ರಮಿಸಿದರು. ಅದಾದ ಬಳಿಕ ಯಡಿಯೂರಪ್ಪನವರ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡಿ ರಾಯಣ್ಣ ಬ್ರಿಗೇಡ್ ಕಟ್ಟಿಸಿ ಕೊನೆಗೆ ಬಿಎಸ್‌ವೈ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳ ನೀಡಿ ಯಡಿಯೂರಪ್ಪನವರ ಇಳಿಸುವ ಕೆಲಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ವೈಫಲ್ಯಗಳು ಸಾಕಷ್ಟಿದ್ದರೂ ಯಾರೂ ಹೋರಾಟ ಮಾಡುತ್ತಿಲ್ಲ ಎಂದ ರೇಣುಕಾಚಾರ್ಯ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ ಎಂದರು.
ಸಂಸದರಿಂದ ಅಪಪ್ರಚಾರ:2014ರಲ್ಲಿ ಸಂಸದರು ಲೋಕಸಭೆ ಚುನಾವಣೆಗೆ ನಿಲ್ಲೋಲ್ಲ ಎಂದು ಹೇಳಿದ ಸಂದರ್ಭದಲ್ಲಿ ನಾವೆಲ್ಲಾ ಇದ್ದೇವೆ ಎಂದು ಹೇಳಿ ಗೆಲ್ಲಿಸಿದೆವು. 2019ರಲ್ಲೂ ನಿಲ್ಲೋಲ್ಲ ಎಂದಾಗ ನೀವು ಈ ರೀತಿ ಹೇಳಬೇಡಿ ಎಂದು ಹೇಳಿ ಅವರ ಗೆಲ್ಲಿಸಿದ್ದೇವು, ಆದರೆ ಕೊನೆಗೆ ಅವರು ಸ್ಪರ್ಧೆ ಮಾಡೋಲ್ಲ ಎಂದು ಹೇಳಿದ ಸಂದರ್ಭದಲ್ಲಿ ನಾನು ಪಕ್ಷ ಏನು ತೀರ್ಮಾನ ಕೈಗೋಳ್ಳುತೋ ನೋಡೋಣ ಎಂದು ಹೇಳಿದ ಬಳಿಕ ಸಂಸದರು ನನ್ನ ಮೇಲೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದರು.
ರಾಜ್ಯ ಬಿಜೆಪಿ ತಂಡದ ಜೊತೆ ಬರ ಅಧ್ಯಯನಕ್ಕೆ ಹೋಗಲ್ಲ:ರಾಜ್ಯ ಬಿಜೆಪಿಯಿಂದ ಬರ ಪ್ರವಾಸ ಪಟ್ಟಿ ಸಿದ್ಧಪಡಿಸಿದ್ದು ಅದರಲ್ಲಿ ರೇಣುಕಾಚಾರ್ಯರ ಹೆಸರು ಕೈಬಿಟ್ಟಿದ್ದಕ್ಕೆ ಕಾರ್ಯಕರ್ತರು, ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಬರ ಅಧ್ಯಯನಕ್ಕೆ ಬರುವ ತಂಡದ ಜೊತೆ ಯಾರೂ ತೆರಳದಂತೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ , ಮುಖಂಡರಾದ ದೊಡ್ಡೇರಿ ರಾಜಣ್ಣ, ಅರಕೆರೆ ನಾಗರಾಜ್, ಎ.ಬಿ.ಹನುಮಂತಪ್ಪ, ಬೀರೇಶ್, ದಿಡಗೂರು ಪಾಲಾಕ್ಷಪ್ಪ,ಕುಬೇರಪ್ಪ, ಪುರಸಭೆ ಸದಸ್ಯರಾದ ಧರ್ಮಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ವಿ.ಚನ್ನಪ್ಪ, ಸುರೇಂದ್ರನಾಯ್ಕ ಸೇರಿ ಮತ್ತಿತರರಿದ್ದರು.
---------------ಶಾಸಕರೊಂದಿಗೆ ಹೊಂದಾಣಿಕೆ ಇಲ್ಲ
ಕ್ಷೇತ್ರದ ಹಾಲಿ ಶಾಸಕ ಡಿ.ಜಿ.ಶಾಂತನಗೌಡ ಮತ್ತು ನನ್ನ ನಡುವೆ ಯಾವುದೇ ಹೊಂದಾಣಿಕೆ ಇಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ನನ್ನ ಸಹಕಾರ ಇದ್ದೇ ಇದೆ. ವಿನಾಕಾರಣ ನಮ್ಮವರೇ ಕೆಲವರು ನನ್ನ ಬಗ್ಗೆ ಅಪಪ್ರಚಾರದ ಕೆಲಸ ಮಾಡುತ್ತಿದ್ದಾರೆ. ರಾಜಕೀಯವಾಗಿ ನನ್ನ ಹಾಗೂ ಶಾಸಕರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ರೇಣುಕಾಚಾರ್ಯ ಹೇಳಿದರು.ಪಕ್ಷದ ವಿರುದ್ಧ ಮಾತನಾಡಿಲ್ಲನಾನು ಎಲ್ಲಿಯೂ ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರುತ್ತೇನೆಂದು ಹೇಳಿಲ್ಲ ಆದರೂ, ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಪಕ್ಷದಲ್ಲಿ ನನ್ನ ಕಡೆಗಣಿಸಲಾಗುತ್ತಿದೆ. ಹಾಗಂತ ನಾನು ಪಕ್ಷದ ವಿರುದ್ಧ ಮಾತನಾಡಿಲ್ಲ, ನಾನು ವಾಸ್ತವ ಮಾತನಾಡಿದ್ದೇನೆ ಅಲ್ಲದೇ ಪಕ್ಷದ ತಪ್ಪು ನಿರ್ಧಾರಗಳ ವಿರುದ್ಧ ಧ್ವನಿ ಎತ್ತಿದ್ದೇನೆ.
ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ