ಬೋರ್‌ವೆಲ್‌ ನೀರು ಬಿಟ್ಟ ಗದ್ದೆಯಲ್ಲಿಯೇ ಅಧಿಕಾರಿಗಳ ಬರ ಸಮೀಕ್ಷೆ

KannadaprabhaNewsNetwork |  
Published : Nov 11, 2023, 01:15 AM ISTUpdated : Nov 11, 2023, 01:16 AM IST

ಸಾರಾಂಶ

ಕೇವಲ ೧೫೦ ವ್ಯಾಟ್ ವಿದ್ಯುತ್ ಮಾತ್ರ ಸಿಗುತ್ತಿದೆ. ಇದರಲ್ಲಿ ಮನೆ ದೀಪ ಸರಿಯಾಗಿ ಉರಿಯುವುದಿಲ್ಲ. ಇನ್ನು ಬೋರ್‌ವೆಲ್ ಪಂಪ್ ಚಾಲು ಆಗುವುದಿಲ್ಲ.

ಶಿರಸಿ:

ಸೂಕ್ತ ಸಮಯದಲ್ಲಿ ಮಳೆಯಾಗಿಲ್ಲ. ಇನ್ನೊಂದೆಡೆ ಕುಡಿಯುವ ನೀರಿಗೆ ಈಗಲೇ ತತ್ವಾರ ಆರಂಭವಾಗುವ ಮುನ್ಸೂಚನೆ ಲಭಿಸಿದೆ ಎಂದು ಬರ ಅಧ್ಯಯನಕ್ಕೆ ಆಗಮಿಸಿದ ಸಂಸದ ಬಿ.ವೈ. ರಾಘವೇಂದ್ರ ಮತ್ತು ತಂಡದ ಎದುರು ರೈತರು ಅಳಲು ತೋಡಿಕೊಂಡರು.

ಬನವಾಸಿ ಸುತ್ತಮುತ್ತಲು ಪ್ರದೇಶಗಳ ರೈತರ ಪಂಪ್‌ಗಳಿಗೆ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ. ಗ್ರಿಡ್ ಮಂಜೂರಾಗಿದ್ದರೂ ಕಾರ್ಯಾರಂಭಿಸಿಲ್ಲ. ಮಳೆ ಇಲ್ಲದೇ ಉಂಟಾದ ಬರದಿಂದಾಗಿ ಬಿತ್ತನೆ, ನಾಟಿ ಮಾಡಿದ ಭತ್ತದ ಗದ್ದೆ ಒಣಗಿವೆ. ತೆನೆ ಹೊತ್ತು ನಿಲ್ಲಬೇಕಾದ ಭತ್ತದ ಸಸಿಗಳಲ್ಲಿ ಅರೆಬರೆ ತೆನೆ ಒಡೆದಿದೆ. ಅವು ಸಹ ಕಾಳು ಸರಿಯಾಗಿ ತುಂಬಿಲ್ಲ. ಇಂತಹ ಕಷ್ಟದ ಸನ್ನಿವೇಶ ವೀಕ್ಷಿಸಿದ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ ಬರ ಅಧ್ಯಯನ ತಂಡದ ಎದುರು ರೈತರು ಸಂಕಷ್ಟ ತೋಡಿಕೊಂಡರು. ಬೆಳೆ ಹಾನಿ ಸಮೀಕ್ಷೆಯನ್ನು ಬೋರ್‌ವೆಲ್‌ ನೀರು ಬಿಟ್ಟ ಗದ್ದೆಗಳಲ್ಲಿಯೇ ಅಧಿಕಾರಿಗಳು ಮಾಡುತ್ತಾರೆ. ಎಲ್ಲೆಡೆ ಓಡಾಡಿ ನೋಡುವುದಿಲ್ಲ. ಹೀಗಾಗಿ ಬೆಳೆ ಹಾನಿ ಮಾಹಿತಿ ಸರಿಯಾಗಿ ಸಿಗುವುದಿಲ್ಲ. ತೀರಾ ಹಾನಿಯಾದ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ರೈತರು ಅಲವತ್ತು ಕೊಂಡರು.

ಈ ಭಾಗದಲ್ಲಿ ಬೋರ್‌ವೆಲ್ ನೀರನ್ನೇ ರೈತರು ಅವಲಂಬಿಸಿದ್ದೇವೆ. ಶಿರಸಿಯಿಂದ ವಿದ್ಯುತ್ ಪೂರೈಸುತ್ತಾರೆ. ಕೇವಲ ೧೫೦ ವ್ಯಾಟ್ ವಿದ್ಯುತ್ ಮಾತ್ರ ಸಿಗುತ್ತಿದೆ. ಇದರಲ್ಲಿ ಮನೆ ದೀಪ ಸರಿಯಾಗಿ ಉರಿಯುವುದಿಲ್ಲ. ಇನ್ನು ಬೋರ್‌ವೆಲ್ ಪಂಪ್ ಚಾಲು ಆಗುವುದಿಲ್ಲ. ೩೦೦ಅಡಿ ಆಳದಲ್ಲಿರುವ ನೀರನ್ನು ಮೇಲೆತ್ತಿ ಬೆಳೆಗಳಿಗೆ ನೀರೂಣಿಸುವುದು ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಚನ್ನಬಸಪ್ಪ, ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಗುರುಪ್ರಸಾದ ಹೆಗಡೆ ಹರ್ತೆಬೈಲ್, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಗಣೇಶ ಸಣ್ಣಲಿಂಗಣ್ಣನವರ, ಅರವಿಂದ ಶೆಟ್ಟಿ, ಮೃತ್ಯುಂಜಯ ಚೌಧರಿ ಮುಂತಾದವರು ಪಾಲ್ಗೊಂಡರು.

ಬರ ಅಧ್ಯಯನ ತಂಡ ನರೂರು, ಕಿರವತ್ತಿ, ಸಂತೊಳ್ಳಿ ಮುಂತಾದೆಡೆ ರೈತರ ಹೊಲಗಳಿಗೆ ಭೇಟಿ ನೀಡಿತು. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಸಂತೊಳ್ಳಿಯ ರೈತರೊಬ್ಬರ ಮನೆಗೆ ಭೇಟಿಯಿತ್ತರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ