ಶಿರಹಟ್ಟಿ: ಮದ್ಯ, ತಂಬಾಕು, ಮಾದಕ ವಸ್ತುಗಳು ಹಾಗೂ ಇತರೆ ದುಶ್ಚಟಗಳ ವ್ಯಸನವು ವ್ಯಕ್ತಿಯ ಆರೋಗ್ಯದ ಜತೆಗೆ ಕುಟುಂಬದ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುತ್ತಿದೆ. ವ್ಯಸನಕ್ಕೆ ಒಳಗಾದ ವ್ಯಕ್ತಿಗಳು ತಮ್ಮ ಆದಾಯದ ಬಹುಪಾಲನ್ನು ದುಶ್ಚಟಗಳಿಗೆ ಖರ್ಚು ಮಾಡುವುದರಿಂದ ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ ಎಂದು ಪ್ರಾಚಾರ್ಯ ಎಂ.ಸಿ. ಭಜಂತ್ರಿ ಹೇಳಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ೧೦ ಕೋಟಿ ನಶೆ ಮುಕ್ತರಾಗುವ ಪ್ರತಿಜ್ಞೆಗಳು ಮಹಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಮದ್ಯ, ತಂಬಾಕು, ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ಆರೋಗ್ಯ, ಕುಟುಂಬ ಮತ್ತು ಸಮಾಜದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಹಾಗೂ ಯುವಕರು ದುಶ್ಚಟಗಳಿಂದ ದೂರವಿದ್ದು ಶಿಕ್ಷಣ, ಕ್ರೀಡೆ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪೋಷಕರು ಮಕ್ಕಳ ಸ್ನೇಹ ವಲಯ ಹಾಗೂ ನಡವಳಿಕೆಯನ್ನು ಗಮನಿಸಿ, ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.ಈವಿವಿ ಸಂಚಾಲಕಿ ರಾಜಯೋಗಿನಿ ಬಿ.ಕೆ. ದೇವಕಿ ಅಕ್ಕ ಮಾತನಾಡಿ, ವ್ಯಸನಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುವುದರೊಂದಿಗೆ, ದುಡಿಮೆಯ ಸಾಮರ್ಥ್ಯ ಕುಗ್ಗುತ್ತದೆ. ದುಡಿದು ಸಂಪಾದಿಸಿದ ಹಣವನ್ನು ವ್ಯಸನಕ್ಕೆ ವ್ಯಯಿಸುವುದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಪರಿಣಾಮವಾಗಿ ಮಕ್ಕಳ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಹಾಗೂ ಇತರ ಮೂಲಭೂತ ಅಗತ್ಯಗಳನ್ನು ಪೂರೈಸಲು ಕುಟುಂಬಗಳು ಸಂಕಷ್ಟ ಎದುರಿಸುತ್ತವೆ ಎಂದರು.
ಎಂ.ಎ. ಮಕಾನದಾರ, ಸಿ.ಪಿ. ಕಾಳಗಿ, ಏಕಾಂತ ಸಿ., ರತ್ನಾ ಬದಿ, ಆರ್.ಎಫ್. ಬಟಗುರ್ಕಿ, ನೌಶಾದ ಶಿಗ್ಲಿ, ಪರಸಪ್ಪ ಬಂತಿ, ಎಚ್.ಎಂ. ಪಲ್ಲೇದ, ನಂದಾ ಕಪ್ಪತ್ತನವರ, ಬ್ರಹ್ಮಕುಮಾರಿ ಶೈಲಾ ಅಕ್ಕನವರು ಸೇರಿ ಅನೇಕರು ಕಾರ್ಯಕ್ರಮದಲ್ಲಿ ಇದ್ದರು.