ಮಾದಕ ವ್ಯಸನದಿಂದ ಸಮಾಜದ ಸ್ವಾಸ್ತ್ಯ ಹಾಳು

KannadaprabhaNewsNetwork |  
Published : Sep 02, 2024, 02:12 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ   | Kannada Prabha

ಸಾರಾಂಶ

ಚಿತ್ರದುರ್ಗದ ಬಾಲಕಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದಮದ್ಯ ಮತ್ತು ಮಾದಕಗಳ ದುಷ್ಪರಿಣಾಮಗಳ ಕುರಿತು ಏರ್ಪಡಿಸಿದ ವಿಚಾರ ಸಂಕಿರಣದಲ್ಲಿ ಮಾನಸಿಕ ಆರೋಗ್ಯ ತಜ್ಞ ಡಾ.ಮಂಜುನಾಥ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾದಕ ವ್ಯಸನ ಕೇವಲ ವ್ಯಕ್ತಿಯನ್ನಷ್ಟೇ ಅಲ್ಲದೇ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತದೆ ಎಂದು ಮಾನಸಿಕ ಆರೋಗ್ಯ ತಜ್ಞ ಡಾ.ಮಂಜುನಾಥ್ ಅಭಿಪ್ರಾಯಪಟ್ಟರು.

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಸಹಯೋಗದಲ್ಲಿ ವ್ಯಸನಮುಕ್ತ ದಿನಾಚರಣೆ ಅಂಗವಾಗಿ ಮದ್ಯ ಮತ್ತು ಮಾದಕಗಳ ದುಷ್ಪರಿಣಾಮಗಳ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಮಾದಕ ವಸ್ತುಗಳಲ್ಲಿ ಕ್ಷಣಿಕ ಸುಖ ನೀಡುವ ಹಾರ್ಮೋನ್‍ನನ್ನು ಬಿಡುಗಡೆಗೊಳಿಸುವ ಹಾನಿಕಾರಕ ರಾಸಾಯನಿಕಗಳಿದ್ದು, ಇವುಗಳು ಮನುಷ್ಯನನ್ನು ವ್ಯಸನಕ್ಕೆ ದಾಸನನ್ನಾಗಿ ಮಾಡಿಸುತ್ತವೆ. ಮಾದಕ ವಸ್ತುಗಳ ಸೇವನೆಯಿಂದ ಹಲವಾರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಹರಡುವುದರಿಂದ ಅವುಗಳಿಂದ ದೂರವಿರಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳು ಮದ್ಯ ಮತ್ತು ಮಾದಕಗಳ ದುಷ್ಪರಿಣಾಮಗಳ ಬಗ್ಗೆ ಅರಿತು, ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಸಂದೇಶವನ್ನು ತಲುಪಿಸುವ ಕಾರ್ಯ ಮಾಡಬೇಕು. ವಿದ್ಯಾರ್ಥಿ ದೆಸೆಯಲ್ಲಿ ದುಶ್ಚಟಗಳಿಗೆ ಒಳಗಾಗದೆ, ತಮ್ಮ ವಿದ್ಯಾಭ್ಯಾಸ ಹಾಗೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ನೀಡಬೆಕೆಂದು ಎಂದು ತಿಳಿಸಿದರು.

ಡೇಟ್ ಚಾರಿಟೇಬಲ್ ಟ್ರಸ್ಟ್‌ನ ಗಾಯಿತ್ರಿ ಅವರು ಮಾತನಾಡಿ, ಹದಿಹರೆಯದ ಕಾಲೇಜು ವಿದ್ಯಾರ್ಥಿಗಳಲ್ಲಿ ಕುತೂಹಲ, ಅನುಕರಣೆ, ಸೆಳೆತ ಹೆಚ್ಚಾಗಿರುತ್ತದೆ. ಒಳ್ಳೆಯದು, ಕೆಟ್ಟದು ಎಂಬುವುದು ತಿಳಿಯದ ವಯಸ್ಸು. ಹಾಗಾಗಿ ನಿಮಗೆ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಜಾಹೀರಾತುಗಳನ್ನು ನೋಡಿ ಪ್ರಭಾವಿತರಾಗಿ, ಕ್ಷಣಿಕ ಸುಖಕ್ಕೆ ಬಲಿಯಾಗಬೇಡಿ. ಕುತೂಹಲ, ಆಕರ್ಷಣೆಯಿಂದ ಶುರು ಮಾಡಿದ ಕ್ಷಣಿಕ ಕಾಲದ ಕಿಕ್ ಅದು ಹವ್ಯಾಸವಾಗಿ ಬದಲಾವಣೆಯಾಗುತ್ತದೆ. ಇದರಿಂದ ಮಾನಸಿಕ ಹಾಗೂ ದೈಹಿಕ, ಸಾಮಾಜಿಕವಾಗಿ ಬಹಳ ದೊಡ್ಡ ಪರಿಣಾಮ ಬೀರಲಿದೆ. ಹಾಗಾಗಿ ಯುವ ಜನತೆ ತಮ್ಮ ಮನಸ್ಸನ್ನು ಒಳ್ಳೆಯದರ ಕಡೆ ಗಮನಹರಿಸಬೇಕು. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ದೇಶ ವಿದೇಶಗಳಲ್ಲಿ ಸಂಚರಿಸಿ, ಜನರಲ್ಲಿನ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ, ವ್ಯಸನಮುಕ್ತ ಸಮಾಜಕ್ಕೆ ಶ್ರಮಿಸಿದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ಸರ್ಕಾರದ ವತಿಯಿಂದ ವ್ಯಸನಮುಕ್ತ ದಿನಾಚರಣೆಯನ್ನಾಗಿ ಕಳೆದ ಆ.1ರಂದು ಜಿಲ್ಲಾ ಕೇಂದ್ರ ಹಾಗೂ ತಾಲೂಕು ಮಟ್ಟಗಳಲ್ಲಿಯೂ ಆಚರಿಸಲಾಗಿದೆ. ಯುವ ಜನತೆಗೆ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಬಾಲಕರ ಸರ್ಕಾರಿ ಕಲಾ ಕಾಲೇಜಿನ ಉಪನ್ಯಾಸಕರಾದ ರಾಘು, ಚನ್ನಬಸಪ್ಪ, ಡಾ.ಗುರುನಾಥ್, ಶಶಿಧರ್ ಸೇರಿದಂತೆ ಪಿಯು ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ