ಸಾಹಿತ್ಯ ಸಮ್ಮೇಳನದಲ್ಲಿ ಬಹುಕಾಲ ನೆನಪಿಡುವಂತಹ ಸ್ಮರಣಿಕೆ ನೀಡಿ: ಶಾಸಕ ಕೆ.ವಿವೇಕಾನಂದ

KannadaprabhaNewsNetwork | Published : Sep 2, 2024 2:12 AM

ಸಾರಾಂಶ

ಸಮ್ಮೇಳನದಲ್ಲಿ ಸಮಿತಿ ಅಧ್ಯಕ್ಷರು, ಗಣ್ಯರಿಗೆ, ಕಲಾವಿದರಿಗೆ ಹಾಗೂ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಅತಿಥಿಗಳಿಗೆ ಸೇರಿದಂತೆ ಕನಿಷ್ಠ 4,000 ಪ್ರಶಸ್ತಿ ಪತ್ರಗಳ ಅವಶ್ಯಕತೆ ಇದೆ. ಅದರ ಜೊತೆಗೆ 3000 ಬ್ಯಾಗ್‌ಗಳ ವ್ಯವಸ್ಥೆ ಮಾಡಬೇಕು. ಎಲ್ಲಾ ಸ್ವಯಂ ಸೇವಕರಿಗೆ ಪ್ರಶಸ್ತಿ ಪತ್ರ ಹಾಗೂ ಮುಖಂಡರಿಗೆ ಸ್ಮರಣಿಕೆ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಆಗಮಿಸುವ ಗಣ್ಯರಿಗೆ ಬಹುಕಾಲ ನೆನಪಿಡುವಂತಹ ಸ್ಮರಣಿಕೆ ನೀಡಬೇಕು ಎಂದು ಶಾಸಕ ಹಾಗೂ ಸಮ್ಮೇಳನದ ಸ್ಮರಣಿಕೆ ಸಮಿತಿ ಅಧ್ಯಕ್ಷ ಕೆ.ವಿವೇಕಾನಂದ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಮರಣಿಕೆ ಸಮಿತಿ, ಸ್ವಯಂ ಸೇವಕರು ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿಸಲು ಪ್ರತಿಯೊಬ್ಬರ ಪಾತ್ರ ಬಹುಮುಖ್ಯವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸೋಣ ಎಂದರು.

ಸಮ್ಮೇಳನದಲ್ಲಿ ಸಮಿತಿ ಅಧ್ಯಕ್ಷರು, ಗಣ್ಯರಿಗೆ, ಕಲಾವಿದರಿಗೆ ಹಾಗೂ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಅತಿಥಿಗಳಿಗೆ ಸೇರಿದಂತೆ ಕನಿಷ್ಠ 4,000 ಪ್ರಶಸ್ತಿ ಪತ್ರಗಳ ಅವಶ್ಯಕತೆ ಇದೆ. ಅದರ ಜೊತೆಗೆ 3000 ಬ್ಯಾಗ್‌ಗಳ ವ್ಯವಸ್ಥೆ ಮಾಡಬೇಕು. ಎಲ್ಲಾ ಸ್ವಯಂ ಸೇವಕರಿಗೆ ಪ್ರಶಸ್ತಿ ಪತ್ರ ಹಾಗೂ ಮುಖಂಡರಿಗೆ ಸ್ಮರಣಿಕೆ ನೀಡಬೇಕು ಎಂದರು.

ಹೊರ ಜಿಲ್ಲೆಯ ಕನ್ನಡಿಗರು ಹೊಗಳುವ ರೀತಿಯಲ್ಲಿ ಸ್ಮರಣಿಕೆ ನೀಡಬೇಕು. ಎಲ್ಲಾ ಜಿಲ್ಲಾಧ್ಯಕ್ಷರಿಗೆ ಸನ್ಮಾನ ಹಾಗೂ ನೆನಪಿನ ಕಾಣಿಕೆ ನೀಡಬೇಕು. ಪ್ರತಿ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರದಲ್ಲಿ ಸಮ್ಮೇಳನದ ಲಾಂಛನ ಜೊತೆಗೆ ಪರಿಸರ ಸ್ನೇಹಿಯಾಗಿರಬೇಕು. ಇದಕ್ಕಾಗಿ ಸ್ಮರಣಿಕೆ ಸಮಿತಿ ಉಪ ಸಮಿತಿ ರಚಿಸಿ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ಜಿಲ್ಲೆಯ ಎನ್‌ಸಿಸಿ, ಎನ್‌ಎಸ್‌ಎಸ್‌ ಹಾಗೂ ಸ್ಕೌಟ್ ಮತ್ತು ಗೈಡ್ಸ್ ತಂಡಗಳ ಸ್ವಯಂ ಸೇವಕರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡಬೇಕು. ಸ್ವಯಂ ಸೇವಕರು ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷರಾಗಿರುವ ವಿವೇಕಾನಂದ ತಿಳಿಸಿದರು.

ಜಿಲ್ಲೆಯಲ್ಲಿರುವ ಪದವಿ ಕಾಲೇಜುಗಳು, ಪಿಯು ಕಾಲೇಜು, ಪ್ರೌಢಶಾಲೆಯ ಎನ್‌ಸಿಸಿ, ಎನ್‌ಎಸ್‌ಎಸ್ ತಂಡಗಳು, ಸ್ಕೌಟ್ ಅಂಡ್ ಗೈಡ್ಸ್ ತಂಡಗಳು, ಬಿಎಡ್ ಕಾಲೇಜು ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಅವರಿಗೆ ಬ್ಯಾಡ್ಜ್, ಟೀ ಶರ್ಟ್, ಟೋಪಿ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಅಭಿನಂದನಾ ಪತ್ರ ನೀಡುವಂತೆ ತಿಳಿಸಿದರು.

ಜಿಲ್ಲೆಯ ಪಿಯು ಕಾಲೇಜಿನ ಸ್ವಯಂ ಸೇವಕರ ತಂಡಕ್ಕೆ ಒಬ್ಬ ಸದಸ್ಯರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಜವಾಬ್ದಾರಿ ವಹಿಸಬೇಕು. ಪದವಿ ಕಾಲೇಜಿನ ಸ್ವಯಂ ಸೇವಕರ ತಂಡ, ವಿಶ್ವ ವಿದ್ಯಾನಿಲಯದ ಅಡಿಯಲ್ಲಿ ಬರುವ ಎನ್‌ಸಿಸಿ, ಎನ್‌ಎಸ್ ಎಸ್ ತಂಡ, ಬಿಎಡ್ ವಿದ್ಯಾರ್ಥಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಪ್ರತಿ ತಂಡಕ್ಕೂ ಉಪ ಸಮಿತಿಗಳ ಸದಸ್ಯರಿಗೆ ಜವಾಬ್ದಾರಿ ವಹಿಸಲಾಗುವುದು ಎಂದರು.

ಜಿಲ್ಲೆಯಲಿ ಆಸಕ್ತಿಯುಳ್ಳ ವಿವಿಧ ಸಂಘ ಸಂಸ್ಥೆಗಳ ಹಾಗೂ ಸ್ವಯಂ ಪ್ರೇರಿತವಾಗಿ ಸಮ್ಮೇಳನದಲ್ಲಿ ಕಾರ್ಯ ನಿರ್ವಹಿಸುವವವರಿಗೂ ಅಭಿನಂದನಾ ಪತ್ರ ಹಾಗೂ ಸಮವಸ್ತ್ರ ನೀಡಬೇಕು. ದೈಹಿಕ ಶಿಕ್ಷಕರು ಹಾಗೂ ಬಿ ಎಡ್ ಕಾಲೇಜಿನ ಶಿಕ್ಷಕರನ್ನು ಸಮ್ಮೇಳನದಲ್ಲಿ ತೊಡಗಿಸಿಕೊಳ್ಳುವುದರಿಂದ ಅವರು ಚಟುವಟಿಕೆಯಿಂದ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಶಿವಮೂರ್ತಿ, ಸಮ್ಮೇಳನದ ಸಂಚಲಾಕಿ ಡಾ. ಮೀರಾಶಿವಲಿಂಗಯ್ಯ, ಸ್ಮರಣಿಕೆ ಸಮಿತಿ ಕಾರ್ಯಾಧ್ಯಕ್ಷ ಜಿ.ಟಿ.ವೀರಪ್ಪ, ಸ್ಕೌಟ್ ಅಂಡ್ ಗೈಡ್ಸ್ ನ ಮುಖ್ಯಸ್ಥ ಭಕ್ತವತ್ಸಲ, ಶಿಕ್ಷಣ ಇಲಾಖೆ ವಿಜಯಕುಮಾರ್, ಕಂದಾಯ ಇಲಾಖೆ ತಮ್ಮಣ್ಣಗೌಡ, ಡಾ.ಹುಸ್ಕೂರು ಕೃಷ್ಣೆಗೌಡ, ವಿ.ಹರ್ಷ, ಉಪನ್ಯಾಸಕ ಮುತ್ತೇಗೆರೆ ಮಂಜು, ಚಂದ್ರಲಿಂಗು, ಮುಖಂಡರಾದ ಕುಮಾರ್, ನಾಗೇಶ್ , ಸೋಮು, ಕೃಷ್ಣ ಸ್ವರ್ಣಸಂದ್ರ ಹಲವರು ಉಪಸ್ಥಿತರಿದ್ದರು.

Share this article