ಮಾದಕ ವ್ಯಸನ ಯುವಜನರ ಬದುಕಿಗೆ ಮಾರಕ: ಪಾಂಡುರಂಗ

KannadaprabhaNewsNetwork |  
Published : Jun 25, 2026, 01:45 AM IST
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಗ್ರಾಮಾಂತರ ಪೊಲೀಸ್‌ ಠಾಣೆ ವತಿಯಿಂದ ನಡೆದ ಡ್ರಗ್ಸ್‌ ಮುಕ್ತ ಸಮಾಜಕ್ಕಾಗಿ ಪೊಲೀಸ್‌ ಇಲಾಖೆಯ ಜಾಗೃತಿ ಅಭಿಯಾನದಲ್ಲಿ ಡಿವೈಎಸ್‌ಪಿ ಪಾಂಡುರಂಗ ಮಾತನಾಡಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಇದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಡಿವೈಎಸ್‌ಪಿ ಪಾಂಡುರಂಗ ತಿಳಿಸಿದರು

ದೊಡ್ಡಬಳ್ಳಾಪುರ: ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಇದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಡಿವೈಎಸ್‌ಪಿ ಪಾಂಡುರಂಗ ತಿಳಿಸಿದರು.

ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಯ ಪಾಲಿಟೆಕ್ನಿಕ್‌ ಕಾಲೇಜು ಸಭಾಂಗಣದಲ್ಲಿ ಡ್ರಗ್ಸ್‌ ಮುಕ್ತ ಸಮಾಜಕ್ಕಾಗಿ ಪೊಲೀಸ್‌ ಇಲಾಖೆಯ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಡ್ರಗ್ಸ್‌ ವ್ಯಸನಿಗಳಿಗೆ ಸೂಕ್ತ ಪುನರ್ವಸತಿ ಕಲ್ಪಿಸುವುದು ಮತ್ತು ಕಟ್ಟುನಿಟ್ಟಾದ ಕಾನೂನು ಕ್ರಮಗಳ ಮೂಲಕ ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣದ ಗುರಿಯನ್ನು ಸಾಧಿಸಬಹುದು. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಿಸಲು ಪ್ರಮುಖವಾಗಿ ಶಿಕ್ಷಣ ಮತ್ತು ಜಾಗೃತಿ ಅಗತ್ಯವಾಗಿದ್ದು, ಶಾಲೆ ಮತ್ತು ಕಾಲೇಜು ಹಂತದಿಂದಲೇ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವುದು. ಯುವ ಸಮೂಹವನ್ನು ಕ್ರೀಡೆ, ಸಾಹಿತ್ಯ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವುದು ಮುಖ್ಯ ಎಂದರು.

ಗ್ರಾಮಾಂತರ ಠಾಣೆ ಆರಕ್ಷಕ ನಿರೀಕ್ಷಕ ಡಾ.ನವೀನ್‌ಕುಮಾರ್‌ ಮಾತನಾಡಿ, ಡ್ರಗ್ಸ್‌ ನಿಗ್ರಹದಲ್ಲಿ ಸಮುದಾಯದ ಪಾತ್ರವೂ ಹಿರಿದು. ಪೋಷಕರು ತಮ್ಮ ಮಕ್ಕಳ ನಡವಳಿಕೆಯ ಮೇಲೆ ನಿಗಾ ಇಡುವುದು ಮತ್ತು ಅವರೊಂದಿಗೆ ಉತ್ತಮ ಸಂವಹನ ನಡೆಸುವುದು ಅಗತ್ಯ. ಸಮುದಾಯ ಮಟ್ಟದಲ್ಲಿ ದುಶ್ಚಟಗಳ ವಿರುದ್ಧ ಅಭಿಯಾನಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು ಎಂದರು.

ಯುವಜನತೆಯಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾದಕ ವ್ಯಸನಿಗಳನ್ನು ದೂಷಿಸದೆ, ಅವರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ಆಪ್ತ ಸಮಾಲೋಚನೆ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಪ್ರಮುಖವಾಗಿದೆ. ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಜಾಲವನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ವಿವರಿಸಿದರು.

ಸಂಸ್ಥೆಯ ಅಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚಿನ ಸಮಯ ಮೀಸಲಿಡಬೇಕು. ಬಾಹ್ಯ ಆಕರ್ಷಣೆಗಳಿಗೆ ಕಡಿವಾಣ ಹಾಕಿ ಶಿಸ್ತುಬದ್ದ ಜೀವನವನ್ನು ನಡೆಸಬೇಕು. ಮಾದಕ ವ್ಯಸನಕ್ಕೆ ಬಲಿಯಾಗಿ ಬದುಕನ್ನು ನಾಶ ಮಾಡಿಕೊಳ್ಳುವ ಅಪಾಯಕಾರಿ ಕೆಲಸಕ್ಕೆ ಕೈಹಾಕಬಾರದು. ಪೊಲೀಸ್‌ ಇಲಾಖೆಯ ಅಭಿಯಾನ ಅಭಿನಂದನೀಯ ಎಂದು ತಿಳಿಸಿದರು.

ಡ್ರಗ್ಸ್‌ ಇನ್ಸ್‌ಪೆಕ್ಟರ್‌ ಎಲ್‌.ವಿಭಾ, ಡ್ರಗ್ಸ್‌ ನಿಯಂತ್ರಣ ಮತ್ತು ನಿಗ್ರಹ ಕಾನೂನುಗಳ ಕುರಿತು ಮಾಹಿತಿ ನೀಡಿದರು. ಲಯನ್ಸ್‌ ಕ್ಲಬ್ ಆಫ್‌ ಆರ್‌ಎಲ್‌ಜೆಐ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಪ್ರೊಬೆಷನರಿ ಪಿಎಸ್‌ಐ ನಾಗರಾಜ್, ಕಾಲೇಜಿನ ಪ್ರಾಂಶುಪಾಲ ನರಸಿಂಹರೆಡ್ಡಿ, ಸಿಎಒ ಬಿ.ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

23ಕೆಡಿಬಿಪಿ4- ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಗ್ರಾಮಾಂತರ ಪೊಲೀಸ್‌ ಠಾಣೆ ವತಿಯಿಂದ ನಡೆದ ಡ್ರಗ್ಸ್‌ ಮುಕ್ತ ಸಮಾಜಕ್ಕಾಗಿ ಪೊಲೀಸ್‌ ಇಲಾಖೆಯ ಜಾಗೃತಿ ಅಭಿಯಾನದಲ್ಲಿ ಡಿವೈಎಸ್‌ಪಿ ಪಾಂಡುರಂಗ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಮಹೇಶ ಟೆಂಗಿನಕಾಯಿ ಜನ್ಮದಿನ: ವಿವಿಧ ಕಾರ್ಯಕ್ರಮ
ಸೆಲ್ಫಿ ತೆಗೆದುಕೊಳ್ಳಲು ಹೋಗಿಕಾವೇರಿ ಬಿದ್ದು ಐವರು ಸಾವು