ಡ್ರಗ್ಸ್‌ ಬೇಟೆ ಕೇಸ್‌: ಬೆಂಗಳೂರಲ್ಲಿ ತನಿಖೆ ಆರಂಭಿಸಿದ ಎನ್‌ಸಿಬಿ ತಂಡ, ಮಂಗಳೂರು ಪೊಲೀಸರ ತನಿಖೆ ದೆಹಲಿಗೆ ವಿಸ್ತರಣೆ

KannadaprabhaNewsNetwork | Published : Mar 19, 2025 12:35 AM

ಸಾರಾಂಶ

ಬೆಂಗಳೂರಿಗೆ ವಿಮಾನದಲ್ಲಿ ಡ್ರಗ್ಸ್ ಪೂರೈಕೆ ಆಗುತ್ತಿರುವುದು ಪತ್ತೆಯಾಗಿರುವುದರಿಂದ ದೆಹಲಿ ಸುತ್ತಮುತ್ತ ದೊಡ್ಡ ಪ್ರಮಾಣದ ಡ್ರಗ್ಸ್ ತಯಾರಿ ಆಗುತ್ತಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ದೆಹಲಿಯ ಕೈಗಾರಿಕಾ ಪ್ರದೇಶದಲ್ಲೇ ಡ್ರಗ್ಸ್ ತಯಾರಿ ನಡೆಸುತ್ತಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಸಿಸಿಬಿ ಪೊಲೀಸರು ರಾಜ್ಯದಲ್ಲೇ ದೊಡ್ಡ ಡ್ರಗ್ಸ್ ಬೇಟೆಯಾಡಿರುವ ಪ್ರಕರಣದಲ್ಲಿ ದೆಹಲಿಯ ನಾರ್ಕೋಟಿಕ್ ಕ್ರೈಮ್ ಬ್ಯೂರೋ(ಎನ್‌ಸಿಬಿ) ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. ಈ ಪ್ರಕರಣ ಆರೋಪಿಗಳು ಬೆಂಗಳೂರಿನಲ್ಲಿ ಬಂಧನ ಆಗಿರುವುದರಿಂದ ಅಲ್ಲಿಂದಲೇ ತನಿಖೆ ಆರಂಭಿಸುತ್ತಿದ್ದಾರೆ. ಇದೇ ವೇಳೆ ಬಂಧಿತ ಆರೋಪಿಗಳ ಮಾಹಿತಿ ಆಧಾರಿಸಿ ಮಂಗಳೂರು ಪೊಲೀಸರು ಡ್ರಗ್ಸ್‌ ಜಾಲದ ತನಿಖೆಯನ್ನು ದೆಹಲಿಗೆ ವಿಸ್ತರಿಸಿದ್ದಾರೆ.

ಬಂಧಿತ ಆರೋಪಿಗಳಾದ ದಕ್ಷಿಣ ಆಫ್ರಿಕಾ ಮೂಲದ ಬಾಂಬಾ ಫಾಂಟಾ ಹಾಗೂ ಅಜಿಗೈಲ್ ಅಡೋನಿಸ್ ಅವರನ್ನು ಮಂಗಳೂರು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರಿಗೆ ವಿಮಾನದಲ್ಲಿ ಡ್ರಗ್ಸ್ ಪೂರೈಕೆ ಆಗುತ್ತಿರುವುದು ಪತ್ತೆಯಾಗಿರುವುದರಿಂದ ದೆಹಲಿ ಸುತ್ತಮುತ್ತ ದೊಡ್ಡ ಪ್ರಮಾಣದ ಡ್ರಗ್ಸ್ ತಯಾರಿ ಆಗುತ್ತಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ದೆಹಲಿಯ ಕೈಗಾರಿಕಾ ಪ್ರದೇಶದಲ್ಲೇ ಡ್ರಗ್ಸ್ ತಯಾರಿ ನಡೆಸುತ್ತಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ.

ದೆಹಲಿಯಿಂದ ದೇಶಿ ವಿಮಾನದಲ್ಲಿ ಭದ್ರತಾ ಅಧಿಕಾರಿಗಳ ಕಣ್ಣುತಪ್ಪಿಸಿ ಡ್ರಗ್ಸ್ ರವಾನೆ ಆಗುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಇಡೀ ಜಾಲವನ್ನು ಬೇಧಿಸಲು ಪಣತೊಟ್ಟಿದ್ದಾರೆ. ಬಂಧಿತ ಮಹಿಳೆಯರು ಡ್ರಗ್ಸ್ ಪೆಡ್ಲರ್‌ ಆಗಿ ಕೆಲಸ ಮಾಡುತ್ತಿದ್ದು ಪ್ರಮುಖ ನಗರಗಳಿಗೆ ಖುದ್ದು ತೆರಳಿ ಪೂರೈಕೆ ಮಾಡುತ್ತಿದ್ದರು.ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಬಯಲಿಗೆಳೆದಿರುವ ಡ್ರಗ್ಸ್ ಜಾಲದ ಬಗ್ಗೆ ಎನ್‌ಸಿಬಿ ಅಧಿಕಾರಿಗಳು ಮತ್ತಷ್ಟು ಆಳವಾಗಿ ತನಿಖೆ ನಡೆಸಲಿದ್ದು ಎಲ್ಲಿಂದ ಪೂರೈಕೆ ಆಗುತ್ತದೆ ಮತ್ತು ಇದರ ಹಿಂದೆ ಯಾರಿದ್ದಾರೆ ಎಂದು ಕೂಲಂಕಷ ತನಿಖೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ತನಿಖೆ ನಡೆಸಿದ ಬಳಿಕ ಮಂಗಳೂರಿನಲ್ಲೂ ತನಿಖೆ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this article