ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕರ: ನಿರಂಜನ ಗೌಡ

KannadaprabhaNewsNetwork | Published : Jun 30, 2024 12:49 AM

ಸಾರಾಂಶ

ನರಸಿಂಹರಾಜಪುರ, ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನಿರಂಜನ್ ಗೌಡ ಹೇಳಿದರು

ಮೌಂಟ್‌ ಕಾರ್ಮೆಲ್ ಕಾಲೇಜಿನಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಾಹಿತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನಿರಂಜನ್ ಗೌಡ ಹೇಳಿದರು.ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಮಾದಕ ವ್ಯಸನ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಅಂತಾರಾಷ್ಟ್ರೀಯ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಗಳ ಬಗ್ಗೆ ಮಾಹಿತಿ ನೀಡಿದರು.

ಸರ್ಕಾರದಿಂದ ಸೇವನೆ ಮಾಡದಂತೆ ನಿಷೇಧಿಸಲ್ಪಟ್ಟ ವಸ್ತುಗಳೇ ಮಾದಕ ವಸ್ತುಗಳಾಗಿವೆ. ಕೆಲವು ಮಾದಕ ವಸ್ತುಗಳ ಸೇವನೆ ವ್ಯಕ್ತಿಗೆ ಅಹಿತಕರ ಕೆಲಸ ಮಾಡುವಂತೆ ಪ್ರೇರೇಪಿಸುತ್ತವೆ. ಬುದ್ಧಿ ಮತ್ತು ಚಟುವಟಿಕೆಯನ್ನು ಕುಂಠಿತ ಗೊಳಿಸುತ್ತವೆ. ಮಾಯಾ ಲೋಕದಲ್ಲಿ ತೇಲುವಂತೆ ಮಾಡುತ್ತವೆ. ಮಾದಕ ವಸ್ತುಗಳ ಸೇವನೆ ಹೆಚ್ಚಾಗಿ ಅನಾಥ ಮಕ್ಕಳಲ್ಲಿ, ಕೆಲವರು ಸ್ನೇಹಿತರ ಸಹವಾಸದಿಂದ ಇದಕ್ಕೆ ದಾಸಾರಾಗುತ್ತಿರುವುದು ಕಂಡು ಬಂದಿದೆ. ನರಸಿಂಹರಾಜಪರ ತಾಲೂಕಿನ ವ್ಯಾಪ್ತಿಯಲ್ಲಿ ಭದ್ರಾವತಿ ಭಾಗದಿಂದ ಹೆಚ್ಚಾಗಿ ಗಾಂಜಾ ಪೂರೈಕೆಯಾಗುತ್ತಿದೆ. ಈಗಾಗಲೇ ಇಂತಹ 15 ಪ್ರಕರಣಗಳು, ಇಬ್ಬರು ಪೂರೈಕೆದಾರರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಗೆ ದಾಸರಾಗಬಾರದು, ಪ್ರೀತಿ, ಪ್ರೇಮ ಪ್ರಣಯದ ವಿಚಾರ ಬಿಟ್ಟು ಬದ್ಧತೆಯಿಂದ ಪ್ರರಿಶ್ರಮ ಪಟ್ಟು ಓದಿನ ಕಡೆಗೆ ಗಮನಹರಿಸಿದರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು ಎಂದರು.

ಮಾದಕ ವಸ್ತುಗಳ ಸೇವನೆ, ಮಾರಾಟ ಅಪರಾಧವಾಗಿದೆ. ವಿದ್ಯಾರ್ಥಿಗಳಿಗೆ ಗಾಂಜಾ ಸೇವನೆ, ಮಾರಾಟದಂತಹ ಪ್ರಕರಣ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಸಹ ಹೆಚ್ಚಾಗುತ್ತಿದ್ದು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವ್ಯಾಟ್ಸ್ ಆ್ಯಪ್, ಇನ್ ಸ್ಟಾಗ್ರಾಂ ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. 18 ವರ್ಷದೊಳಗಿನ ಮಕ್ಕಳು ಯಾವುದೇ ಕಾರಣಕ್ಕೂ ಬೈಕ್ ಚಾಲನೆ ಮಾಡಬಾರದು. ಎನ್.ಆರ್.ಪುರದ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಸರಾಸರಿ 50 ಅಪಘಾತಗಳು ನಡೆಯುತ್ತಿದೆ. ಇದರಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ಮರಣಹೊಂದಿದ್ದಾರೆ. ಈ ವರ್ಷದ ಜೂನ್ ವರೆಗೆ 8 ಜನ ಮರಣ ಹೊಂದಿದ್ದಾರೆ. ಪರವಾನಿಗೆ ಇಲ್ಲದೆ ಅಪ್ರಾಪ್ತರು ವಾಹನ ಚಾಲನೆ ಮಾಡಿದರೆ ಪೋಷಕರಿಗೆ ದಂಡ ಬೀಳುತ್ತದೆ ಎಂದರು. ಸಭೆ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಸಿಸ್ಟರ್ ಉಷಾ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಕೆಟ್ಟ ಚಟ ಗಳಿಗೆ ದಾಸರಾಗದೆ ಓದಿನ ಕಡೆ ಆದ್ಯತೆ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದರು.

ಉಪನ್ಯಾಸಕರಾದ ಐ.ಎಂ.ರಾಜೀವ, ಸ್ವಪ್ನ ಹೆಗ್ಡೆ ಇದ್ದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

Share this article