ಬಳ್ಳಾರಿ: ನಶಾಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ವಾಕಥಾನ್, ಆತ್ಮಹತ್ಯೆ ಮುಕ್ತ ಕ್ಯಾಂಪಸ್ ಹಾಗೂ ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮವನ್ನು ನಗರದ ಬಳ್ಳಾರಿ ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಮೈದಾನದಲ್ಲಿ ಮಾ.18 ರಂದು ಬೆಳಿಗ್ಗೆ 7.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಶೆ ಅಥವಾ ಮದ್ಯಪಾನವು ವ್ಯಕ್ತಿಯ ಆರೋಗ್ಯಕ್ಕೂ ಸಮಾಜದ ಬೆಳವಣಿಗೆಗೂ ದೊಡ್ಡ ಕಂಟಕವಾಗಿದೆ. ಯುವಕರೇ ದೇಶದ ಭವಿಷ್ಯವಾದ್ದರಿಂದ ಅವರನ್ನು ನಶೆಯಿಂದ ದೂರವಿಟ್ಟು ಸತ್ಪಥದಲ್ಲಿ ನಡೆಯಿಸುವುದು ಸಮಾಜದ ಪ್ರಮುಖ ಕರ್ತವ್ಯವಾಗಿದೆ. ಈ ಉದ್ದೇಶದಿಂದಲೇ ನಶಾ ಮುಕ್ತ ಭಾರತ – ಯುವ ಶುದ್ಧಿ ಅಭಿಯಾನ ವಾಕ್‌ಥಾನ್ ಎಂಬ ಜಾಗೃತಿ ಕಾರ್ಯಕ್ರಮವನ್ನು ಬಳ್ಳಾರಿ-ವಿಜಯನಗರ ಜಿಲ್ಲೆಗಳ ವ್ಯಾಪ್ತಿಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬಳ್ಳಾರಿ-ವಿಜಯನಗರ ಜಿಲ್ಲೆಗಳ ಕರ್ನಾಟಕ ಸಂಯೋಜನೆಗೊಳಪಟ್ಟಿರುವ ಕಾಲೇಜುಗಳ ಸಂಘದಿಂದ ಆಯೋಜಿಸಲಾಗಿದೆ. ಬೆಳಿಗ್ಗೆ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯದ ಮೈದಾನದಲ್ಲಿ ಜರುಗುವ ಅಭಿಯಾನದಲ್ಲಿ ರಾಜ್ಯಪಾಲರು ಪಾಲ್ಗೊಂಡು ವಿದ್ಯಾರ್ಥಿ-ಯುವಜನರನ್ನುದ್ದೇಶಿಸಿ ಮಾತನಾಡಿಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ವಾಕ್ ಥಾನ್ ಶುರುವಾಗಲಿದೆ.
ಬಳ್ಳಾರಿಯ ವಿಮ್ಸ್ (ಬಿಎಂಸಿಆರ್‌ಸಿ) ಮೈದಾನದಿಂದ ಶುರುಗೊಳ್ಳುವ ವಾಕ್‌ಥಾನ್, ಸುಧಾ ವೃತ್ತ, ಇನ್‌ಫ್ಯಾಂಟ್ರಿ ರಸ್ತೆ, ಕನಕದಾಸ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ, ಶ್ರೀಕನಕ ದುರ್ಗಮ್ಮ ವೃತ್ತ, ಕಪ್ಪಗಲ್ ರಸ್ತೆದಿಂದ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಮೈದಾನದಲ್ಲಿ ಕೊನೆಗೊಳ್ಳಲಿದೆ. ವಾಕ್‌ಥಾನ್‌ನಲ್ಲಿ ವಿದ್ಯಾರ್ಥಿಗಳು, ಯುವಕರು, ಶಿಕ್ಷಕರು ಮತ್ತು ಸಾರ್ವಜನಿಕರು ಭಾಗವಹಿಸಿ ನಶಾಮುಕ್ತ ಸಮಾಜದ ಮಹತ್ವವನ್ನು ಸಾರಲಿದ್ದಾರೆ ಎಂದು ತಿಳಿಸಿದರು.ನಶೆಗಳಿಂದ ದೂರವಿರುವುದು ವ್ಯಕ್ತಿಯ ಆರೋಗ್ಯವನ್ನು ಕಾಪಾಡುವುದಲ್ಲದೆ ಕುಟುಂಬದ ಸಂತೋಷ ಮತ್ತು ಸಮಾಜದ ಶಾಂತಿಗೂ ಸಹಾಯಕವಾಗುತ್ತದೆ. ಆದ್ದರಿಂದ ಪ್ರತಿ ಯುವಕನು ಆರೋಗ್ಯಕರ ಮತ್ತು ಜಾಗೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಜಾಗೃತಿ ಅಭಿಯಾನವನ್ನು ಸಂಘಟಿಸಲಾಗಿದೆ. ಇದೇ ವೇಳೆ ಅಂಗಾಂಗ ಮಹತ್ವ ಕುರಿತು ವಿದ್ಯಾರ್ಥಿ-ಯುವ ಸಮುದಾಯಕ್ಕೆ ತಿಳಿಸಿಕೊಡಲಾಗುವುದು. ಮರಣಾನಂತರ ಅಥವಾ ಕೆಲವು ಸಂದರ್ಭಗಳಲ್ಲಿ ಜೀವಿತಾವಸ್ಥೆಯಲ್ಲಿಯೇ ಅಗತ್ಯವಿರುವ ರೋಗಿಗಳಿಗೆ ಅಂಗಾಂಗ ದಾನ ಮಾಡುವುದು ಮಾನವೀಯತೆ ಮತ್ತು ಪರೋಪಕಾರದ ಅತ್ಯುನ್ನತ ಉದಾಹರಣೆಗಳಲ್ಲಿ ಒಂದಾಗಿದೆ. ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ ಅನೇಕ ಜನರಿಗೆ ಹೊಸ ಜೀವನ ದೊರೆಯುತ್ತದೆ ಎಂದರು.