ಮಾದಕ ವಸ್ತುಗಳ ಮಾರಾಟ, ಸಾಗಾಣೆ ಕಾನೂನು ಬಾಹಿರ: ಸಿಪಿಐ ಎಂ.ರವಿಕುಮಾರ್

KannadaprabhaNewsNetwork | Published : Jun 27, 2024 1:10 AM

ಸಾರಾಂಶ

ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು. ದುಚ್ಚಟಗಳಿಗೆ ಬಲಿಯಾಗದಂತೆ ಜಾಗೃತಿ ವಹಿಸಬೇಕು, ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಯುವಕರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ ಮೇಲೆ ಜಾಗೃತಿ ವಹಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರವಾಗಿದೆ. ಇದನ್ನು ಬುಡ ಸಮೇತ ಕಿತ್ತು ಹಾಕಲು ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಸಿಪಿಐ ಎಂ.ರವಿಕುಮಾರ್ ಮನವಿ ಮಾಡಿದರು.

ಪಟ್ಟಣದ ಪುರ ಪೊಲೀಸ್ ಠಾಣಾ ಆವರಣದಲ್ಲಿ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿ ವಿರೋಧಿ ದಿನ ಅಂಗವಾಗಿ ನಡೆದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾದಕ ವಸ್ತುಗಳ ಮಾರಾಟ, ಸಾಗಣೆ ದಂಧೆಯಲ್ಲಿ ಹಲವರು ಭಾಗಿಯಾಗುತ್ತಿದ್ದು, ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ ಮೇಲೆ ಜಾಗೃತಿ ವಹಿಸಬೇಕೆಂದು ಕರೆ ನೀಡಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು. ದುಚ್ಚಟಗಳಿಗೆ ಬಲಿಯಾಗದಂತೆ ಜಾಗೃತಿ ವಹಿಸಬೇಕು, ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಕೋರಿದರು.

ವಿದ್ಯಾಪ್ಯಾರಾ ಮೆಡಿಕಲ್ ಕಾಲೇಜು, ರೋಟರಿ ಶಾಲೆ ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ಮೂಲಕ ಸಂಚರಿಸಿ ಘೋಷಣೆ ಕೂಗಿ ಜನರಲ್ಲಿ ಅರಿವು ಮೂಡಿಸಿದರು. ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ವೇಳೆ ಪಿಎಸ್‌ಐ ಜಯಲಕ್ಷ್ಮಮ್ಮ ಸೇರಿದಂತೆ ಉಪನ್ಯಾಸಕರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.ಮಾದಕ ವಸ್ತು ಸಮಾಜ ಹಾಳು ಮಾಡುವ ಪಿಡುಗು: ರೇವತಿ

ಕಿಕ್ಕೇರಿ:ಮಾದಕ ವಸ್ತು ದೇಹ, ಮನಸ್ಸು ಎಲ್ಲವನ್ನು ಸುಟ್ಟು ಸಮಾಜವನ್ನು ಹಾಳು ಮಾಡುವ ಬಲುದೊಡ್ಡ ಕೆಟ್ಟ ಪಿಡುಗಾಗಿದೆ ಎಂದು ಇನ್‌ಸ್ಪೆಕ್ಟರ್‌ ರೇವತಿ ಹೇಳಿದರು.

ಪಟ್ಟಣದ ಕೆಪಿಎಸ್ ಶಾಲೆ ಪದವಿ ಪೂರ್ವಕಾಲೇಜು ವಿಭಾಗದಲ್ಲಿ ಎನ್‌ಎಸ್‌ಎಸ್‌ಘಟಕ, ಆರಕ್ಷಕ ಠಾಣೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ಸಾಗಾಣಿಕೆ, ಮಾರಾಟ ವಿರೋಧಿ ದಿನದಲ್ಲಿ ಮಾತನಾಡಿದರು.ಯುವ ಪೀಳಿಗೆಯನ್ನು ಬಲು ಬೇಗ ಆಕರ್ಷಿಸಿ ಹಾಳು ಮಾಡುವ ಮಾದಕ ವಸ್ತು ಮಾರಾಟ, ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧ. ಇಂತಹ ಮಾಹಿತಿ ಕಂಡಲ್ಲಿ ತಿಳಿಸಬೇಕು ಎಂದರು.

ಖುಷಿಗಾಗಿ ಮಾದಕ ವಸ್ತು ಸೇವನೆ ಆರಂಭಿಸಿದರೆ ಚಟವಾಗಿ ಬುದ್ಧಿ ಭ್ರಮಣೆ, ದರೋಡೆ, ಅಪರಾಧ, ಅಪಘಾತ, ಅತ್ಯಾಚಾರ, ತರಗತಿಗೆ ಗೈರು, ಮೆದುಳು ನಿಷ್ಕ್ರಿಯಎಲ್ಲವನ್ನು ಮಾಡಲಿದೆ. ಭವಿಷ್ಯದ ಮಕ್ಕಳು ಸಾಮಾಜಿಕ ಪಿಡುಗಿಗೆ ಕಾರಣರಾಗಿ ದೇಶದ ಶಾಂತಿ, ನೆಮ್ಮದಿ ಕದಡುವ ವಿಧ್ವಂಸಕರಾಗಲಿದ್ದಾರೆ. ವಿದ್ಯಾರ್ಥಿಗಳೇ ಕ್ಷಣಿಕ ಆಸೆಗಾಗಿ ದುಶ್ಚಟ ರೂಢಿಸಿಕೊಳ್ಳದಿರಿ ಎಂದು ಎಚ್ಚರಿಕೆ ನೀಡಿದರು.ವಿದ್ಯಾರ್ಥಿಗಳು ಜಾಥಾ ನಡೆಸಿ ದುಶ್ಚಟಕ್ಕೆ ಬಲಿಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಎನ್‌ಎಸ್‌ಎಸ್‌ ಘಟಕಾಧಿಕಾರಿ ಕುಮಾರಸ್ವಾಮಿ, ಉಪನ್ಯಾಸಕ ಮಂಜುನಾಥ್, ನಾಗೇಶ್, ರವೀಂದ್ರ, ನಾಗೇಶ್, ಪೇದೆಕುಮಾರ್, ಮೂರ್ತಿ ಉಪಸ್ಥಿತರಿದ್ದರು.

Share this article