ಮಂಗಳೂರು: ಡ್ರಗ್ಸ್, ಗಾಂಜಾ ಮತ್ತಿತರ ಮಾದಕ ವಸ್ತುಗಳ ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ ಕೊನೆಯ ಪೆಡ್ಲರ್ ಬಂಧನವಾಗುವವರೆಗೂ ಮುಂದುವರಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.ನಗರದ ಪುರಭವನದಲ್ಲಿ ಮಂಗಳವಾರ ಡ್ರಗ್ಸ್, ಮಾದಕ ವಸ್ತುಗಳ ಜಾಗೃತಿ ಪ್ರಯುಕ್ತ ನಡೆದ ವಿವಿಧ ಶಿಕ್ಷಣ ಸಂಸ್ಥೆಗಳ ಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ನ್ನು ಶುದ್ಧಗೊಳಿಸುವ ಈ ಅಭಿಯಾನದಲ್ಲಿ ಕಾಲೇಜುಗಳು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಆಗಿಂದಾಗ್ಗೆ ಭೇಟಿ ನೀಡಲಿದ್ದಾರೆ. ಡ್ರಗ್ಸ್ ಪ್ರಭಾವಿತ ವಿದ್ಯಾರ್ಥಿಗಳನ್ನು ಸಂತ್ರಸ್ತರೆಂದು ಪರಿಗಣಿಸಲಾಗುವುದು. ಆದರೆ ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಮಂಗಳೂರಿನಲ್ಲಿ ಡ್ರಗ್ಸ್ ವ್ಯಾಪಕವಾಗಿದೆ ಎಂದು ಕೇಳಿಬರುತ್ತಿದೆ. ಆದರೆ 2025 ಜೂನ್ 1ರಿಂದ 2026ರ ಜನವರಿ 17ರವರೆಗೆ ವಿವಿಧ ಕಾಲೇಜುಗಳಲ್ಲಿ 5,356 ಡ್ರಗ್ಸ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಇದರಲ್ಲಿ ಕೇವಲ 14 ಪ್ರಕರಣಗಳು ಪಾಸಿಟಿವ್ ಕಂಡುಬಂದಿದೆ. ಇದು ಜಿಲ್ಲೆಯಲ್ಲಿ ಡ್ರಗ್ಸ್ ಚಟುವಟಿಕೆ ಕಡಿಮೆಯಾಗಿರುವ ಸಂಕೇತವಾಗಿದೆ ಎಂದು ಹೇಳಿದರು.
ಪಿಜಿಗಳಿಗೆ ಪೊಲೀಸ್ ಎನ್‌ಒಸಿ: ನಗರದಲ್ಲಿ ಪೇಯಿಂಗ್ ಗೆಸ್ಟ್ (ಪಿಜಿ)ಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಪಿಜಿಗಳಿಗೆ ಲೈಸೆನ್ಸ್ ನೀಡುವ ಮೊದಲು ಪೊಲೀಸ್ ಇಲಾಖೆಯಿಂದ ನಿರಕ್ಷೇಪಣಾ ಪತ್ರ ಪಡೆಯುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್, ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್., ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಎಎಸ್‍ಪಿ ಅನಿಲ್ ಕುಮಾರ್ ಇದ್ದರು.